ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Arvind Kejriwal)ಗೆ ಸುಪ್ರೀಂಕೋರ್ಟ್ (Supreme court)ನ ದ್ವಿಸದಸ್ಯ ಪೀಠ ಸರ್ವಾನುಮತದಿಂದ ಷರತ್ತುಬದ್ಧ ಜಾಮೀನು ಮಂಜೂರು ಮಾಡುವ ಮೂಲಕ ಜೈಲಿನಿಂದ ಹೊರಬರಲು ಅನುವು ಮಾಡಿಕೊಟ್ಟಿದೆ. ಆದರೆ ದೆಹಲಿ ಅಬಕಾರಿ ನೀತಿ ಹಗರಣದ ವಿಚಾರಣೆ ಶೀಘ್ರವೇ ಮುಕ್ತಾಯವಾಗುವ ಸಾಧ್ಯತೆ ಇಲ್ಲ ಎಂದಿದೆ. ಏತನ್ಮಧ್ಯೆ ಕೇಜ್ರಿವಾಲ್ ಅವರನ್ನು ಸಿಬಿಐ ಬಂಧಿಸಿರುವ ಕಾನೂನುಬದ್ಧತೆ ವಿಚಾರದಲ್ಲಿ ನ್ಯಾಯಾಧೀಶರು ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಜಸ್ಟೀಸ್ ಸೂರ್ಯ ಕಾಂತ್, ಜಸ್ಟೀಸ್ ಉಜ್ಜಲ್ ಭುಯಾನ್:
ದ್ವಿಸದಸ್ಯ ಪೀಠದ ಜಸ್ಟೀಸ್ ಸೂರ್ಯ ಕಾಂತ್ ಅವರು ಕೇಜ್ರಿವಾಲ್ ಬಂಧನ ಕಾನೂನುಬದ್ಧವಾಗಿದೆ ಎಂದಿದ್ದಾರೆ. ಆದರೆ ಜಸ್ಟೀಸ್ ಭುಯಾನ್ ಸಿಬಿಐ ಕ್ರಮದ ಬಗ್ಗೆ ಕಠಿನ ನಿಲುವು ವ್ಯಕ್ತಪಡಿಸಿದ್ದಾರೆ. ಕೇಜ್ರಿವಾಲ್ ಅವರ ಬಂಧನವನ್ನು ಪಂಜರದ ಗಿಳಿ ಎಂಬುದಾಗಿ ತೋರಿಸಿದೆ ಎಂದಿದ್ದಾರೆ.
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಹಣಕಾಸು ಅವ್ಯವಹಾರ ಆರೋಪದಲ್ಲಿ ಜಾರಿ ನಿರ್ದೇಶನಾಲಯ ಕೇಜ್ರಿವಾಲ್ ಬಂಧಿಸಿತ್ತು. ಆದರೆ ಜೂನ್ 26ರಂದು ಸಿಬಿಐ ಬಂಧಿಸಿತ್ತು. ನಂತರ ಜುಲೈ 12ರಂದು ಜಾರಿ ನಿರ್ದೇಶನಾಲಯ ಪ್ರಕರಣದಲ್ಲಿ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.
ಕೇಜ್ರಿವಾಲ್ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ ವೇಳೆ ಸಿಬಿಐ ನಡೆ Insurance arrest ಎಂಬುದಾಗಿ ಆರೋಪಿಸಿದ್ದರು. ಆದರೆ ಜಸ್ಟೀಸ್ ಸೂರ್ಯಕಾಂತ್ ಅವರು ಇದೊಂದು ಕಾನೂನು ಅನುಸಾರದ ಬಂಧನವಾಗಿದೆ ಎಂದು ತಿಳಿಸಿದ್ದರು.
ಮ್ಯಾಜಿಸ್ಟ್ರೇಟ್ ವಾರಂಟ್ ಜಾರಿಗೊಳಿಸಿದ್ದರಿಂದ ಕೇಜ್ರಿವಾಲ್ ಬಂಧನದ ಬಗ್ಗೆ ಸಿಬಿಐ ಕಾರಣ ಕೊಡಬೇಕಾದ ಅಗತ್ಯವಿಲ್ಲ ಎಂಬುದನ್ನು ಗಮನಿಸಬೇಕು ಎಂದು ಜಸ್ಟೀಸ್ ಕಾಂತ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಈಗಾಗಲೇ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ವ್ಯಕ್ತಿಯನ್ನು ಮತ್ತೊಂದು ಪ್ರಕರಣದಲ್ಲಿ ತನಿಖೆ ನಡೆಸಲು ಬಂಧಿಸಬಹುದಾಗಿದೆ. ಕೇಜ್ರಿವಾಲ್ ಬಂಧನದ ಅಗತ್ಯದ ಬಗ್ಗೆ ಸಿಬಿಐ ತನ್ನ ಅರ್ಜಿಯಲ್ಲಿ ತಿಳಿಸಿದ್ದು, ಇದು ಕೂಡಾ ನ್ಯಾಯಾಂಗದ ಆದೇಶವಾಗಿದೆ ಎಂದು ಜಸ್ಟೀಸ್ ಕಾಂತ್ ಸಿಬಿಐ ಬಂಧನದ ಬಗ್ಗೆ ಸಮರ್ಥನೆ ನೀಡಿದರು.
“ಸಿಬಿಐ ಪಂಜರದ ಗಿಳಿಯನ್ನಾಗಿ ಮಾಡುವಂತೆ ವರ್ತಿಸಬಾರದು. ಅಲ್ಲದೇ ಬಂಧನದ ಅಧಿಕಾರವನ್ನು ಉದ್ದೇಶಿತ ಕಿರುಕುಳಕ್ಕೆ ಬಳಸಿಕೊಳ್ಳಬಾರದು ಎಂಬುದು ಜಸ್ಟೀಸ್ ಭುಯಾನ್ ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ.
22 ತಿಂಗಳಿಗಿಂತಲೂ ಹೆಚ್ಚು ಕಾಲ ಕೇಜ್ರಿವಾಲ್ ಅವರನ್ನು ಬಂಧನದಲ್ಲಿಡುವ ಅಗತ್ಯದ ಬಗ್ಗೆ ಸಿಬಿಐ ಗಮನಹರಿಸಿದಂತಿಲ್ಲ. ಇದರ ಪರಿಣಾಮವೇ ಇ.ಡಿ ಪ್ರಕರಣದಲ್ಲಿ ಜಾಮೀನು ದೊರಕುವಂತಾಯ್ತು. ಇ. ಡಿ ಬಂಧನದಲ್ಲಿದ್ದ ಕೇಜ್ರಿವಾಲ್ ಅವರನ್ನು ಸಿಬಿಐ ತನ್ನ ವಶಕ್ಕೆ ತೆಗೆದುಕೊಳ್ಳುವ ಕ್ರಮದ ಬಗ್ಗೆಯೇ ಹಲವಾರು ಗಂಭೀರ ಪ್ರಶ್ನೆಗಳು(ಬಂಧನದ ಸಮಯ) ಉದ್ಭವಿಸುವಂತೆ ಮಾಡಿದೆ ಎಂದು ಜಸ್ಟೀಸ್ ಭುಯಾನ್ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಸಿಎಂ ಕಚೇರಿಗೆ ಹೋಗುವಂತಿಲ್ಲ: ಸುಪ್ರೀಂ
ಜಾರಿ ನಿರ್ದೇಶನಾಲಯದ ಪ್ರಕರಣದಲ್ಲಿ ಕೇಜ್ರಿವಾಲ್ ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದ ಸುಪ್ರೀಂಕೋರ್ಟ್ ಶುಕ್ರವಾರ (ಸೆ.13) ಸಿಬಿಐ ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನು ನೀಡಿದೆ.
*ಜಾಮೀನಿನ ಮೇಲಿರುವ ಕೇಜ್ರಿವಾಲ್ ಮುಖ್ಯಮಂತ್ರಿ ಕಚೇರಿಯನ್ನು ಪ್ರವೇಶಿಸುವಂತಿಲ್ಲ.
*ಕೇಜ್ರಿವಾಲ್ ಯಾವುದೇ ಸರ್ಕಾರಿ ಕಡತಕ್ಕೆ ಸಹಿ ಹಾಕುವಂತಿಲ್ಲ.
*ನ್ಯಾಯಾಲಯದ ವಿನಾಯ್ತಿ ಹೊರತುಪಡಿಸಿ ಪ್ರತಿ ವಿಚಾರಣೆಗೂ ಕೇಜ್ರಿವಾಲ್ ಖುದ್ದು ಹಾಜರಾಗಬೇಕು.
*ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಯಾವುದೇ ಹೇಳಿಕೆ ನೀಡುವಂತಿಲ್ಲ.