ಕಲಬುರಗಿ: ಮಕ್ಕಳು ವಿದ್ಯಾಭ್ಯಾಸದ ಜತೆಗೆ ಕಲೆ ಹಾಗೂ ಸಾಹಿತ್ಯ ಸಹ ಮೈಗೂಡಿಸಿಕೊಂಡರೆ ಉತ್ತಮ ಬದುಕು ರೂಪಿಸಿಕೊಳ್ಳಲು ಹೆಚ್ಚಿನ ಸಹಕಾರಿಯಾಗುತ್ತದೆ ಎಂದು ಖ್ಯಾತ ಹಿನ್ನೆಲೆ ಗಾಯಕಿ ಬಿ.ಆರ್. ಛಾಯಾ ಕರೆ ನೀಡಿದರು. ನಗರದ ಸರ್ವಜ್ಞ ಚಿಣ್ಣರ ಲೋಕದ ವಾರ್ಷಿಕೋತ್ಸವ ಹಾಗೂ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮ ವಿಶೇಷ ಅತಿಥಿಗಳಾಗಿ ಅವರು ಮಾತನಾಡಿದರು.
ಸಂಗೀತದ ಮನಸ್ಸಿಗೆ ಶಾಂತಿ, ಸಮಾಧಾನದ ಜತೆಗೆ ನೆಮ್ಮದಿ ಬದುಕು ಸಾಗಿಸಲು ಸಹಕಾರಿಯಾಗುತ್ತದೆ. ಚಿಣ್ಣರ ಲೋಕದ ಮಕ್ಕಳು ಸಂಗೀತ, ಕಲೆಯಲ್ಲಿ ಇನ್ನು ಅನೇಕ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅದು ಮಕ್ಕಳ ನಿಜವಾದ ಬೆಳವಣಿಗೆಗೆ ಪೂರಕವಾಗಿದೆ. ಹಿಂದುಸ್ಥಾನವ ಎಂದು ಮರೆಯದ ಭಾರತ ರತ್ನವಾಗಬೇಕು ಎಂದು ಹಾಡಿನ ಮೂಲಕ ಗಮನ ಸೆಳೆದರು.
ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೆಶಕ ಶಾಂತಗೌಡ ಬಿ.ಆರ್. ಮಾತನಾಡಿ, ರಾಷ್ಟ್ರೀಯ ಪಠ್ಯಕ್ರಮದ ನೀತಿಯಂತೆ ಮಗು ಸರ್ವತೋಮುಖವಾಗಿ ಬೆಳವಣಿಗೆ ಹೊಂದಬೇಕು. ಅದಕ್ಕಾಗಿ ಮಕ್ಕಳ ಮನಸ್ಸು ಅರಳುವ ರೀತಿಯಲ್ಲಿ ಶಿಕ್ಷಣ ನೀಡಬೇಕು. ನಾಲ್ಕು ಗೋಡೆ ನಡುವೆ ಶಿಕ್ಷಣ ನೀಡದೆ ಸಂಗೀತ, ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸಬೇಕು ಎಂದು ಹೇಳಿದರು.
ಸಂಗೀತ ಸಂಯೋಜಕ ಪದ್ಮಪಾಣಿ ಜೋಡಿದಾರ ಮಾತನಾಡಿ, ಮಕ್ಕಳು ಓದುವುದರೊಂದಿಗೆ ಬರೆಯುವುದನ್ನು ರೂಢಿಸಿಕೊಂಡರೆ ಒಂದರಿಂದ ಹತ್ತರವರೆಗೆ ರ್‍ಯಾಂಕ್ ಪಡೆಯಬಹುದು ಎಂದು ಹೇಳಿದರು. ಸರ್ವಜ್ಞ ಶಿಕ್ಷಣ ಸಂಸ್ಥೆಗಳ ಸಮೂಹ ಅಧ್ಯಕ್ಷ ಪ್ರೊ| ಚನ್ನಾರೆಡ್ಡಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆ ಅಧ್ಯಕ್ಷರಾದ ಗೀತಾ ಚನ್ನಾರೆಡ್ಡಿ ಪಾಟೀಲ, ಅಭಿಷೇಕ್ ಪಾಟೀಲ, ನ್ಯಾಯವಾದಿ ಅಯ್ಯನಗೌಡ ಪಾಟೀಲ, ಸರ್ವಜ್ಞ ಕಾಲೇಜಿನ ಪ್ರಾಚಾರ್ಯ ಎಂ.ಸಿ. ಕಿರೇದಳ್ಳಿ, ಸರ್ವಜ್ಞ ಚಿಣ್ಣರ ಲೋಕದ ಪ್ರಾಂಶುಪಾಲರಾದ ಆರ್.ಎಂ. ಸಿಂಧೆ, ನಿರ್ದೇಶಕರಾದ ಡಾ| ಸಂತೋಷಕುಮಾರ ನಾಗಲಾಪುರ, ಕಾಂತಾ ಲಿಂಗಮ್, ಪ್ರಶಾಂತ ಕುಲಕರ್ಣಿ, ಕರುಣೇಶ ಹಿರೇಮಠ, ಗುರುರಾಜ ಕುಲಕರ್ಣಿ ಇದ್ದರು.
ಶರಣ್ಯ ತಂಡದವರು ಪ್ರಾರ್ಥಿಸಿದರು. ಡಾ| ಸಂತೋಷಕುಮಾರ ಸ್ವಾಗತಿಸಿದರು. ಗಂಗಾಧರ ಬಡಿಗೇರ ನಿರೂಪಿಸಿದರು. ನಂತರ ಸರ್ವಜ್ಞ ಚಿಣ್ಣರ ಲೋಕದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪಾಲಕರು ಭಾಗವಹಿಸಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದರು.