ನವದೆಹಲಿ: ಬಾಲಿವುಡ್ ನ ಅಕ್ಷಯ್ ಕುಮಾರ್ ನಟನೆಯ “ಸ್ಪೆಷಲ್ 26” ಸಿನಿಮಾದ ರೀತಿಯಲ್ಲೇ ಸಿಬಿಐ ಅಧಿಕಾರಿಗಳೆಂದು ಪೋಸು ನೀಡಿ ಉದ್ಯಮಿಯೊಬ್ಬರ ಮನೆಯೊಳಗೆ ನುಗ್ಗಿ 30 ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣವನ್ನು ದೋಚಿಕೊಂಡು ಹೋಗಿರುವ ಘಟನೆ ಕೋಲ್ಕತಾದ ಭವಾನಿಪುರ್ ನಲ್ಲಿ ನಡೆದಿದೆ.
ಇದನ್ನೂ ಓದಿ:ಏಕದಿನ ರ‍್ಯಾಂಕಿಂಗ್: ಕೊಹ್ಲಿಗೆ 8 ನೇ ಸ್ಥಾನ; 117 ಸ್ಥಾನಗಳ ಜಿಗಿತ ಕಂಡ ಇಶಾನ್ ಕಿಶನ್
ಇತ್ತೀಚೆಗೆ ಕೋಲ್ಕತಾದ ಉದ್ಯಮಿಯೊಬ್ಬರ ಮನೆಗೆ ಸುಮಾರು 7-8 ಮಂದಿಯ ಗುಂಪೊಂದು ಆಗಮಿಸಿದ್ದು, ತಾವು ಸಿಬಿಐ ಅಧಿಕಾರಿಗಳೆಂದು ಹೇಳಿ ಮನೆಯೊಳಗೆ ನುಗ್ಗಿದ್ದರು ಎಂದು ಉದ್ಯಮಿ ಸುರೇಶ್ ವಾಧ್ವಾ (60ವರ್ಷ) ತಿಳಿಸಿದ್ದಾರೆ.
ಪೊಲೀಸ್ ಸ್ಟಿಕ್ಕರ್ ಗಳನ್ನು ಅಳವಡಿಸಿದ್ದ ಮೂರು ಕಾರುಗಳಲ್ಲಿ ಗುಂಪು ಆಗಮಿಸಿತ್ತು. ಮನೆಯ ಕರೆಗಂಟೆ ಬಾರಿಸಿದಾಗ ನಾನು ಹೋಗಿ ಬಾಗಿಲು ತೆರೆದಿದ್ದೆ, ಆಗ ಕೂಡಲೇ ಅವರೆಲ್ಲಾ ಒಳನುಗ್ಗಿ ನಾವು ಸಿಬಿಐ ಅಧಿಕಾರಿಗಳು ಎಂದು ಹೇಳಿದ್ದರು. ಆಗ ನಾನು ಅವರಲ್ಲಿ ಐಡೆಂಟಿಟಿ ಕಾರ್ಡ್ ತೋರಿಸಲು ಹೇಳಿದೆ, ಆದರೆ ಅವರು ನನ್ನ ಮಾತನ್ನು ಲೆಕ್ಕಿಸದೇ ಒಳಕೋಣೆಗೆ ತೆರಳಿದ್ದರು ಎಂದು ವಾಧ್ವಾ ಘಟನೆ ಕುರಿತು ವಿವರಣೆ ನೀಡಿದ್ದಾರೆ.
ಕೋಣೆಯ ಕಪಾಟಿನಲ್ಲಿದ್ದ 30 ಲಕ್ಷ ರೂಪಾಯಿ ನಗದು ಹಾಗೂ ಹಲವಾರು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ತೆಗೆದುಕೊಂಡಿದ್ದರು. ಬಳಿಕ ನನ್ನಲ್ಲಿ ವಶಪಡಿಸಿಕೊಂಡ ವಸ್ತುಗಳ ಪಟ್ಟಿಯನ್ನು ಸಿದ್ದಪಡಿಸುತ್ತಿರುವುದಾಗಿ ತಿಳಿಸಿದ್ದರು. ಆದರೆ ಕೊನೆಗೆ ಆ ಪಟ್ಟಿಯನ್ನು ನಂತರ ಕಳುಹಿಸಿಕೊಡುವುದಾಗಿ ಹೇಳಿದ್ದರು. ಅಷ್ಟೇ ಅಲ್ಲ ವಿಚಾರಣೆಗಾಗಿ ಕಚೇರಿಗೆ ಹಾಜರಾಗಬೇಕಾಗುತ್ತದೆ ಎಂದು ತಿಳಿಸಿರುವುದಾಗಿ ವಾಧ್ವಾ ತಿಳಿಸಿದ್ದಾರೆ.
ಕೊನೆಗೆ ಇವರು ಸಿಬಿಐ ಅಧಿಕಾರಿಗಳಲ್ಲ, ದರೋಡೆಕೋರರು ಎಂದು ಸಂಶಯಗೊಂಡು ವಾಧ್ವಾ ಪೊಲೀಸರಿಗೆ ದೂರು ನೀಡಿದ್ದಾರೆ. ಆ ನಿಟ್ಟಿನಲ್ಲಿ ಕೋಲ್ಕತಾ ಪೊಲೀಸ್ ಗುಪ್ತಚರ ಇಲಾಖೆ ಮತ್ತು ಭವಾನಿಪುರ್ ಪೊಲೀಸ್ ಠಾಣೆಯ ಸಿಬಂದಿಗಳು ಜಂಟಿಯಾಗಿ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯ ಹಿಂದೆ ವಾಧ್ವಾ ಕುಟುಂಬದ ಒಳಗಿನ ವ್ಯಕ್ತಿಗಳೇ ಶಾಮೀಲಾಗಿರುವ ಸಾಧ್ಯತೆ ಇದ್ದಿರುವುದಾಗಿ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದು, ಸಿಸಿಟಿವಿ ಫೂಟೇಜ್ ಸೇರಿದಂತೆ ಎಲ್ಲಾ ರೀತಿಯಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ವರದಿ ವಿವರಿಸಿದೆ.