ದೇಶದಲ್ಲಿ 24 ಗಂಟೆಗಳ ಅವಧಿಯಲ್ಲಿ 83 ಮಂದಿ ಕೋವಿಡ್ 19 ವೈರಸ್ ಸೋಂಕಿಗೆ ಬಲಿಯಾಗಿದ್ದು, 2,487 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಈ ಮೂಲಕ ಸೋಂಕಿತರ ಸಂಖ್ಯೆ 40 ಸಾವಿರದ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಅಲ್ಲದೆ, ಒಟ್ಟಾರೆ ಈವರೆಗೆ 10 ಲಕ್ಷ ಮಂದಿಯನ್ನು ಕೋವಿಡ್ 19 ವೈರಸ್ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದೂ ಹೇಳಿದೆ.
ಇನ್ನೊಂದೆಡೆ, ಭಾನುವಾರ ಒಂದೇ ದಿನ 10 ಸಾವಿರಕ್ಕೂ ಅಧಿಕ ಕೋವಿಡ್ 19 ವೈರಸ್ ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇನ್ನೂ ಅನೇಕರು ಗುಣಮುಖರಾಗುವ ಹಾದಿಯಲ್ಲಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ್ ಹೇಳಿದ್ದಾರೆ.
ಅಲ್ಲದೆ, ಕಳೆದ 14 ದಿನಗಳಲ್ಲಿ ಸೋಂಕು ದ್ವಿಗುಣಗೊಳ್ಳುವ ಪ್ರಮಾಣ 10.5 ದಿನಗಳಾಗಿದ್ದವು. ಆದರೆ, ಈಗ ಸೋಂಕಿನ ಸಂಖ್ಯೆ ದುಪ್ಪಟ್ಟಾಗಲು 12 ದಿನಗಳು ಬೇಕು ಎಂದೂ ಅವರು ಮಾಹಿತಿ ನೀಡಿದ್ದಾರೆ. ನಮ್ಮ ದೇಶದಲ್ಲಿ ಸಾವಿನ ಪ್ರಮಾಣ ಶೇ.3.2 ರಷ್ಟಿದ್ದು, ಅದು ಜಗತ್ತಿನಲ್ಲೇ ಅತ್ಯಂತ ಕನಿಷ್ಠವಾಗಿದೆ ಎಂದೂ ಹರ್ಷವರ್ಧನ್ ಹೇಳಿದ್ದಾರೆ.
ಇದೇ ವೇಳೆ, ಕೇಂದ್ರ ಸರಕಾರವು ಸುಮಾರು 20 ಲಕ್ಷ ಪಿಪಿಇ ಕಿಟ್ ಗಳನ್ನು ದೇಶಾದ್ಯಂತ ವಿತರಣೆ ಮಾಡಿದೆ. ಸುಮಾರು 100 ದೇಶಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಪ್ಯಾರಾಸೆಟಮಾಲ್ ಮಾತ್ರೆಗಳನ್ನೂ ಪೂರೈಸಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಬಿಎಸ್‌ಎಫ್ ನ 25 ಸಿಬಂದಿಗೆ ಸೋಂಕು
ಬಿಎಸ್‌ಎಫ್ ನ 25 ಸಿಬಂದಿಗೆ ಕೋವಿಡ್ 19 ವೈರಸ್ ಸೋಂಕು ಕಾಣಿಸಿಕೊಂಡಿರುವುದು ದೃಢಪಟ್ಟಿದೆ. ಹೀಗಾಗಿ ಒಟ್ಟು 42 ಮಂದಿಗೆ ಸೋಂಕು ತಗುಲಿದಂತಾಗಿದೆ.
ಕಾನೂನು ಸುವ್ಯವಸ್ಥೆಗಾಗಿ ನವದೆಹಲಿಯಲ್ಲಿ ನಿಯೋಜನೆಗೊಂಡಿದ್ದ 122ನೇ ಬೆಟಾಲಿಯನ್‌ನ 25 ಯೋಧರಲ್ಲಿ ಸೋಂಕು ಕಂಡು ಬಂದಿದೆ. ಈ ಘಟಕದಲ್ಲಿದ್ದ 94 ಸಿಬಂದಿಗೆ ಸೋಂಕು ಪತ್ತೆ ಪರೀಕ್ಷೆ ನಡೆಸಿದ್ದು, ಈ ಪೈಕಿ 5 ಪರೀಕ್ಷೆ ವರದಿಗಳು ಬರಬೇಕಾಗಿವೆ. ಶನಿವಾರವಷ್ಟೇ ಸಿಆರ್‌ಪಿಎಫ್ ನ 122 ಯೋಧರಲ್ಲಿ ಸೋಂಕು ದೃಢವಾಗಿತ್ತು.