ನವದೆಹಲಿ: ಭಾರತದಲ್ಲಿಯೇ ಅತಿ ವೇಗದ ರೈಲುಗಳ ಚಕ್ರದ ಉತ್ಪಾದನಾ ಘಟಕ ಸ್ಥಾಪಿಸಲು ಕೇಂದ್ರ ಸರ್ಕಾರ ಟೆಂಡರ್ ಕರೆದಿದೆ. ಘಟಕವು ವರ್ಷಕ್ಕೆ ಕನಿಷ್ಠ 80,000 ಗಾಲಿಗಳನ್ನು ಉತ್ಪಾದಿಸಬೇಕು ಹಾಗೂ ವಿದೇಶಕ್ಕೂ ರಫ್ತು ಮಾಡುವುದಕ್ಕೆ ಸಿದ್ಧವಾಗಿರುವಂತೆ ಈ ಅವಕಾಶ ಕಲ್ಪಿಸಲಾಗುತ್ತದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೈಸ್ಪೀಡ್ ರೈಲುಗಳು ಸಂಚರಿಸಲಿವೆ. ಅದಕ್ಕೆ ಪೂರಕವಾಗಿ ಪ್ರತಿ ವರ್ಷ ಭಾರತೀಯ ರೈಲ್ವೆಗೆ 80 ಸಾವಿರ ಗಾಲಿಗಳ ಅಗತ್ಯವಿದೆ. ಹೊಸತಾಗಿ ನಿರ್ಮಾಣ ಮಾಡಲಿರುವ ಘಟಕದಲ್ಲಿ ಎಲ್‌ಎಚ್‌ಬಿ ಕೋಚ್‌ಗಳನ್ನೂ ಮೇಕ್ ಇನ್ ಇಂಡಿಯಾ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದರು.
ಖಾಸಗಿಯವರಿಂದ 600 ಕೋಟಿ ರೂ. ನೀಡಿ ಅದನ್ನು ಖರೀದಿಸಲಾಗುತ್ತದೆ. ರೈಲ್ವೇ ಇಲಾಖೆ ಇದೇ ಮೊದಲ ಬಾರಿಗೆ ಗಾಲಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಖಾಸಗಿಯವರಿಗೆ ಟೆಂಡರ್ ನೀಡಲು ತೀರ್ಮಾನಿಸಿದೆ. ಅದು ಹೈಸ್ಪೀಡ್ ಟ್ರೈನ್‌ಗಳಿಗೆ ಬೇಕಾದ ಗಾಲಿಗಳನ್ನು ಉತ್ಪಾದಿಸಲಿದೆ. ದೇಶದ ರೈಲ್ವೇ ಜಾಲಕ್ಕೆ ಪ್ರತಿ ವರ್ಷ 2 ಲಕ್ಷ ಗಾಲಿಗಳ ಅವಶ್ಯಕತೆಯಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತೀಯ ಉಕ್ಕು ಪ್ರಾಧಿಕಾರದ ರಾಷ್ಟ್ರೀಯ ಇಸ್ಪತ್ ನಿಗಮವು ಒಂದಷ್ಟು ಸಂಖ್ಯೆಯ ಗಾಲಿಗಳನ್ನು ನಿರ್ಮಿಸುತ್ತದೆ ಎಂದರು.
ದೇಶ ಸದ್ಯ ಉಕ್ರೇನ್, ಜರ್ಮನಿ, ಜೆಕ್ ರಿಪಬ್ಲಿಕ್‌ನಿಂದ ಚಕ್ರಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಆದರೆ ಉಕ್ರೇನ್-ರಷ್ಯಾ ಯುದ್ಧದಿಂದಾಗಿ ಈ ಪ್ರಕ್ರಿಯೆಗೆ ತೊಂದರೆ ಉಂಟಾಗಿದೆ. ಹಾಗೆಯೇ ಒಂದು ಗಾಲಿಯನ್ನು ಭಾರತಕ್ಕೆ ತರಿಸಿಕೊಳ್ಳಲು ಸರಿಸುಮಾರು 70,000 ರೂ. ಖರ್ಚು ಬೀಳುತ್ತಿದ್ದು, ಈ ಹೊರೆಯಿಂದ ತಪ್ಪಿಸಿಕೊಳ್ಳಲು ಕೇಂದ್ರ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ರೈಲ್ವೇ ಸಚಿವರು ತಿಳಿಸಿದ್ದಾರೆ.
ಅಕ್ಟೋಬರ್‌ನಲ್ಲಿ ವಂದೇ ಭಾರತ್ ರೈಲು ನಿರ್ಮಾಣ:
ಭಾರತೀಯ ರೈಲ್ವೆಯು ಅಕ್ಟೋಬರ್ ತಿಂಗಳಿಂದ ವಂದೇ ಭಾರತ್ ರೈಲುಗಳ ನಿರ್ಮಾಣ ಕೆಲಸ ಆರಂಭಿಸಲಿದೆ ಎಂದು ಸಚಿವರು ತಿಳಿಸಿದ್ದಾರೆ. ಮೊದಲಿಗೆ ತಿಂಗಳಿಗೆ 2-3 ರೈಲುಗಳನ್ನು ನಿರ್ಮಿಸಲಾಗುವುದು. ನಂತರ ಅದನ್ನು 5-8ಕ್ಕೆ ಏರಿಸಲಾಗುವುದು. 2023ರ ಆಗಸ್ಟ್‌ನೊಳಗಾಗಿ 75 ವಂದೇ ಭಾರತ್ ರೈಲು ನಿರ್ಮಾಣದ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.