Advertisement

ಭಾರತದಿಂದ ಬಾಂಗ್ಲಾಗೆ ಜೀವರಕ್ಷಕ ಅನಿಲ : ಮೊದಲ ಬಾರಿಗೆ ರೈಲಲ್ಲಿ ವಿದೇಶಕ್ಕೆ ಆಮ್ಲಜನಕ ಪೂರೈಕೆ

09:48 PM Jul 24, 2021 | Team Udayavani |

ನವ ದೆಹಲಿ: ಸುಮಾರು 200 ಟನ್‌ ಗಳಷ್ಟು ದ್ರವೀಕೃತ ಆಮ್ಲಜನಕ ಹೊತ್ತ “ಆಕ್ಸಿಜನ್‌ ಎಕ್ಸ್‌ಪ್ರಸ್‌’ ರೈಲು ಭಾನುವಾರ ಭಾರತದಿಂದ ಬಾಂಗ್ಲಾದೇಶ ತಲುಪಲಿದೆ. ಈ ಮೂಲಕ ಭಾರತೀಯ ರೈಲ್ವೆಯು ಇದೇ ಮೊದಲ ಬಾರಿಗೆ ವಿದೇಶಕ್ಕೆ ಜೀವರಕ್ಷಕ ಅನಿಲವನ್ನು ಸರಬರಾಜು ಮಾಡಿದಂತಾಗಲಿದೆ.

Advertisement

ಜಾರ್ಖಂಡ್‌ನ‌ ಟಾಟಾನಗರದಿಂದ ಶನಿವಾರವೇ 10 ಕಂಟೈನರ್‌ ಗಳುಳ್ಳ ರೈಲು ಹೊರಟಿದ್ದು, ಭಾನುವಾರ ಬಾಂಗ್ಲಾದೇಶದ ಬೆನಪೋಲ್‌ಗೆ ತಲುಪಲಿದೆ. ಇದರಲ್ಲಿ 200 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಇರಲಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ಕೊರೊನಾ 2ನೇ ಅಲೆಯ ವೇಳೆ ಭಾರತದಲ್ಲಿ ಆಮ್ಲಜನಕಕ್ಕೆ ಬೇಡಿಕೆ ತೀವ್ರಗೊಂಡಾಗ, ಇಂತಹ ಸುಮಾರು 480 ರೈಲುಗಳ ಮೂಲಕ 36,841 ಮೆ.ಟನ್‌ ಆಕ್ಸಿಜನ್‌ ಅನ್ನು ಮೂಲೆ ಮೂಲೆಗೂ ರವಾನಿಸಲಾಗಿತ್ತು.

ಒಪ್ಪಂದ ರದ್ದು:
ಈ ನಡುವೆ, ಭಾರತ್‌ ಬಯೋಟೆಕ್‌ನ ಕೊವ್ಯಾಕ್ಸಿನ್‌ ಲಸಿಕೆಯ ಪ್ರಯೋಗವನ್ನು ಬ್ರೆಜಿಲ್‌ ಸ್ಥಗಿತಗೊಳಿಸಿದೆ. ಲಸಿಕೆ ಖರೀದಿ ಒಪ್ಪಂದದಲ್ಲಿ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಜತೆಗೆ, ಭಾರತ್‌ ಬಯೋಟೆಕ್‌ ಜತೆಗೆ ನಡೆದಿದ್ದ ಒಪ್ಪಂದವನ್ನೂ ರದ್ದುಮಾಡಲಾಗಿದೆ.

ಇದನ್ನೂ ಓದಿ :ಕಾಶಿ ದೇಗುಲ ಕಾರಿಡಾರ್‌ಗಾಗಿ 1,000 ಚದರಡಿ ಭೂಮಿ ನೀಡಿದ ಮಸೀದಿ

Advertisement

ನಿರ್ಬಂಧ ಸಡಿಲಿಕೆ:
ದೆಹಲಿಯಲ್ಲಿ ಕೊರೊನಾ ನಿರ್ಬಂಧಗಳನ್ನು ಮತ್ತಷ್ಟು ಸಡಿಲಿಸಲಾಗಿದೆ. ಸೋಮವಾರದಿಂದ ಮೆಟ್ರೋ ರೈಲುಗಳು ಶೇ.100ರ ಸಾಮರ್ಥ್ಯದಲ್ಲಿ ಸಂಚರಿಸಲಿವೆ. ಸ್ಪಾ, ಸಿನಿಮಾ ಹಾಲ್‌ ಗಳನ್ನು ತೆರೆಯಲೂ ಅನುಮತಿ ನೀಡಲಾಗಿದೆ. ದೇಶದಲ್ಲಿ ಶುಕ್ರವಾರದಿಂದ ಶನಿವಾರಕ್ಕೆ 39,097 ಕೊರೊನಾ ಪ್ರಕರಣ ಪತ್ತೆಯಾಗಿದ್ದು, 546 ಮಂದಿ ಸಾವಿಗೀಡಾಗಿದ್ದಾರೆ.

ಮಕ್ಕಳ ಮೇಲೆ ಪ್ರಯೋಗ: ಸೆಪ್ಟೆಂಬರ್‌ ನಲ್ಲಿ ಫ‌ಲಿತಾಂಶ
ಮಕ್ಕಳ ಮೇಲೆ ಭಾರತ್‌ ಬಯೋಟೆಕ್‌ನ ಕೊವ್ಯಾಕ್ಸಿನ್‌ ಲಸಿಕೆಯ ಪ್ರಯೋಗ ಪ್ರಕ್ರಿಯೆ ನಡೆಯುತ್ತಿದ್ದು, ಫ‌ಲಿತಾಂಶವು ಸೆಪ್ಟೆಂಬರ್‌ ವೇಳೆಗೆ ಹೊರಬರುವ ನಿರೀಕ್ಷೆಯಿದೆ ಎಂದು ಏಮ್ಸ್‌ ನಿರ್ದೇಶಕ ಡಾ. ರಣದೀಪ್‌ ಗುಲೇರಿಯಾ ಹೇಳಿದ್ದಾರೆ. ಮುಂದಿನ ವಾರವೇ 2-6 ವಯೋಮಾನದ ಮಕ್ಕಳ ಮೇಲೆ ಪ್ರಾಯೋಗಿಕವಾಗಿ 2ನೇ ಡೋಸ್‌ ಲಸಿಕೆ ನೀಡಲಾಗುತ್ತದೆ. 6-12ರ ವಯೋಮಾನದವರಿಗೆ ಈಗಾಗಲೇ 2ನೇ ಡೋಸ್‌ ಕೂಡ ಕೊಟ್ಟಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಎರಡೂ ಡೋಸ್‌ ಲಸಿಕೆ ಪಡೆದಿರುವ ಜನರಿಗೆ ಕೊರೊನಾ ನಿರ್ಬಂಧಗಳಿಂದ ವಿನಾಯ್ತಿ ನೀಡುವ ಕುರಿತು ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಹೀಗೆ ಮಾಡಿದರೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಲಸಿಕೆ ಸ್ವೀಕರಿಸಲು ಮುಂದೆ ಬರುತ್ತಾರೆ .
– ಅಜಿತ್‌ ಪವಾರ್‌, ಮಹಾರಾಷ್ಟ್ರ ಡಿಸಿಎಂ

Advertisement

Udayavani is now on Telegram. Click here to join our channel and stay updated with the latest news.

Next