ನವದೆಹಲಿ: ಸುಪ್ರೀಂಕೋರ್ಟ್‌ನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಂಗಳವಾರದಿಂದ ಪ್ರಮುಖ ಪ್ರಕರಣಗಳ ವಿಚಾರಣೆಯ ನೇರ ಪ್ರಸಾರ ಆರಂಭವಾಗಿದೆ.
2018 ಸೆ.27ರಂದು ಸುಪ್ರೀಂಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿಯಾಗಿದ್ದ ದೀಪಕ್ ಮಿಶ್ರಾ ಅವರು ಸಾಂವಿಧಾನಿಕ ಮಹತ್ವದ ಪ್ರಕರಣಗಳ ವಿಚಾರಣೆಯನ್ನು ನೇರ ಪ್ರಸಾರ ಮಾಡುವ ಬಗ್ಗೆ ತೀರ್ಪು ನೀಡಿ “ಸೂರ್ಯನ ಬೆಳಕೇ ಅತ್ಯುತ್ತಮ ಸೋಂಕು ನಿವಾರಕ’ ಎಂದು ಅಭಿಪ್ರಾಯಪಟ್ಟಿದ್ದರು.
ಅದರಂತೆ, ಮಂಗಳವಾರ “ನಿಜವಾದ ಶಿವಸೇನೆ ಯಾರದ್ದು’ ಎಂಬ ಪ್ರಕರಣದ ವಿಚಾರಣೆಯು ನೇರ ಪ್ರಸಾರಗೊಂಡಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಮತ್ತು ಮಾಜಿ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಬಣ ಸಲ್ಲಿಸಿದ ಅರ್ಜಿಗಳ ವಿಚಾರಣೆಯನ್ನು ನ್ಯಾ.ಡಿ.ವೈ. ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠ ಕೈಗೆತ್ತಿಕೊಂಡಿತು.
ನ್ಯಾ.ಎನ್.ವಿ.ರಮಣ ಮುಖ್ಯ ನ್ಯಾಯಮೂರ್ತಿಯಾಗಿದ್ದ ವೇಳೆ ಆ.26ರಂದು ಮೊದಲ ಬಾರಿಗೆ ವೆಬ್‌ಕಾಸ್ಟ್ ಪೋರ್ಟಲ್‌ನಲ್ಲಿ ಕಲಾಪವನ್ನು ಪ್ರಸಾರ ಮಾಡಲಾಗಿತ್ತು. ಆ ದಿನ ನ್ಯಾ.ರಮಣ ಅವರಿಗೆ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿದ್ದುದನ್ನು ನೇರ ಪ್ರಸಾರ ಮಾಡಲಾಗಿತ್ತು.
ಸಾಂವಿಧಾನಿಕ ಪೀಠದಲ್ಲಿ ನಡೆಯುವ ಪ್ರಕರಣಗಳ ನೇರ ಪ್ರಸಾರ ನೋಡಲು//webcast.gov.in/scindia/ ವೆಬ್‌ಸೈಟ್‌ಗೆ ಲಾಗ್‌ಇನ್ ಆಗಬಹುದು.