Advertisement

ಟ್ರಂಪ್‌ ವಿರುದ್ಧ ತೆರಿಗೆ ವಂಚನೆ ಆರೋಪ; ಪಾವತಿಸಿದ ತೆರಿಗೆ ಕೇವಲ 55 ಸಾವಿರ ರೂ.!

03:40 PM Sep 28, 2020 | Karthik A |

ಮಣಿಪಾಲ: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌  ಟ್ರಂಪ್‌ ಅವರು ತೆರಿಗೆ ವಂಚಿಸಿದ್ದಾರೆ ಎಂದು “ದಿ ನ್ಯೂಯಾರ್ಕ್‌ ಟೈಮ್ಸ್‌ ‘ ಗಂಭೀರ ಆರೋಪ ಮಾಡಿದೆ.

Advertisement

ಈ ಕುರಿತಂತೆ ವರದಿಯೊಂದನ್ನು ಪ್ರಕಟಿಸಿರುವ ದಿ ನ್ಯೂಯಾರ್ಕ್‌ ಟೈಮ್ಸ್, 2016ರಲ್ಲಿ ಟ್ರಂಪ್‌ ಶ್ವೇತಭವನವನ್ನು ಪ್ರವೇಶಿಸಿದಾಗ ಅವರು ಆ ವರ್ಷ (2016-17) 750 ಡಾಲರ್ ‌(ಸುಮಾರು 55,000 ರೂ.) ತೆರಿಗೆಯನ್ನು ಪಾವತಿಸಿದ್ದರು. 2017ರಲ್ಲಿಯೂ ಅವರು 750 ಡಾಲರ್‌ ತೆರಿಗೆ ಮಾತ್ರ ಪಾವತಿಸಿದ್ದರು. ಆದರೆ ಟ್ರಂಪ್‌ ಒಡೆತನದ ಸಂಸ್ಥೆಯು  ಭಾರತದಲ್ಲಿ ಅದೇ ಅವಧಿಗೆ 1,45,400 ಡಾಲ್‌ (ಸುಮಾರು 1.07 ಕೋಟಿ ರೂ.) ತೆರಿಗೆ ಪಾವತಿಸಿದೆ ಎಂದು ದಿ ನ್ಯೂಯಾರ್ಕ್‌ ಟೈಮ್ಸ್  ಹೇಳಿದೆ.

ವರದಿಯ ಪ್ರಕಾರ ಕಳೆದ 15 ವರ್ಷಗಳಲ್ಲಿ 10 ವರ್ಷ ಅವರು ಯಾವುದೇ ತೆರಿಗೆಯನ್ನು ಪಾವತಿಸಿಲ್ಲ. ಇದು ಈಗ ಅಮೆರಿಕದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದ್ದು, ಟ್ರಂಪ್‌ ಎರಡನೇ ಬಾರಿಗೆ ಚುನಾವಣಾ ರಂಗದಲ್ಲಿ ಸ್ಪರ್ಧಿಸುತ್ತಿರುವಾಗ ತೆರಿಗೆ ಪಾವತಿಗೆ ಸಂಬಂಧಿಸಿದ ವಿಷಯ ಬಂದಿದೆ. ಇದು ಟ್ರಂಪ್‌ಗೆ ನುಂಗಲಾರದ ತುತ್ತಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಆದರೆ ನ್ಯೂಯಾರ್ಕ್‌ ಟೈಮ್ಸ್  ವರದಿಯನ್ನು ಟ್ರಂಪ್‌ ಸುಳ್ಳು ಎಂದಿದ್ದಾರೆ. ಅದರ ಜತೆಗೆ ಯು.ಎಸ್‌.ಎ. ಅಧ್ಯಕ್ಷರು ತಮ್ಮ ವೈಯಕ್ತಿಕ ಹಣಕಾಸಿನ ವಿವರಗಳನ್ನು ಬಿಡುಗಡೆ ಮಾಡುವುದು ಅನಿವಾರ್ಯವಲ್ಲ ಎಂದು ಟ್ರಂಪ್‌ ಹೇಳಿದ್ದಾರೆ. ಆದರೆ ರಿಚರ್ಡ್‌ ನಿಕ್ಸನ್‌ (1969-74)ರಿಂದ ಬರಾಕ್‌ ಒಬಾಮ (2008-16)ರ ವರೆಗಿನ ಅಧ್ಯಕ್ಷರು ವೈಯಕ್ತಿಕ ಹಣಕಾಸು ಖಾತೆಗಳ ವಿವರಗಳನ್ನು ನೀಡಿದ್ದಾರೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ನಿರಾಕರಿಸುವ ಮೂಲಕ ಟ್ರಂಪ್‌ ಈ ಸಂಪ್ರದಾಯವನ್ನು ಮುರಿದಿದ್ದಾರೆ ಎಂದು ವಿಪಕ್ಷ ಮುಗಿಬಿದ್ದಿದೆ. ಟ್ರಂಪ್‌ ಅವರ ತೆರಿಗೆ ರಿಟರ್ನ್ಸ್ 2016ರ ಚುನಾವಣೆಯಲ್ಲಿ ಒಂದು ಪ್ರಮುಖ ವಿಷಯವಾಗಿತ್ತು.

Advertisement

ಅಧ್ಯಕ್ಷೀಯ ಚುನಾವಣೆಯ ಸಂದರ್ಭ ಅಮೆರಿಕದಲ್ಲಿ ಸಾಮಾನ್ಯವಾಗಿ ಪ್ರತಿಸ್ಪರ್ಧಿಯ ಜತೆ ಸಾರ್ವಜನಿಕವಾಗಿ ಚರ್ಚೆಗಳು ನಡೆಯುತ್ತವೆ. ಇದನ್ನು ಅಲ್ಲಿ traditional presidential debate ಎಂದು ಕರೆಯಲಾಗುತ್ತದೆ. ಈ ಬಾರಿ ಆ ಚರ್ಚೆಯ ಮೊದಲು ಈ ವರದಿ ಪ್ರಕಟವಾಗಿದ್ದು, ಸಹಜವಾಗಿ ಟ್ರಂಪ್‌ ಅವರಿಗೆ ಆರಂಭಿಕ ಹಿನ್ನಡೆ ಎಂದೇ ಪರಿಗಣಿಸಲಾಗಿದೆ. ಮೊದಲ ಚರ್ಚೆ ಸೆಪ್ಟೆಂಬರ್‌ 29 ರಂದು ಓಹಿಯೋದಲ್ಲಿ ನಡೆಯಲಿದೆ. ಎರಡನೇ ಚರ್ಚೆ ಅಕ್ಟೋಬರ್‌ 15ರಂದು ಮತ್ತು ಮೂರನೆಯದು ಅಕ್ಟೋಬರ್‌ 22ರಂದು ನಡೆಯಲಿದೆ. ಏತನ್ಮಧ್ಯೆ ಡೆಮಾಕ್ರಟಿಕ್‌ ಅಭ್ಯರ್ಥಿ ಜೋ ಬಿಡನ್‌ ಅವರೂ ಈ ವರದಿಯ ಕುರಿತಾಗಿ ಟ್ರಪ್‌ ಮೇಲೆ ಆರೋಪಗಳು ಸುರಿಮಳೆಗೈಯುತ್ತಿದ್ದಾರೆ.

ಸೋಷಿಯಲ್‌ ಮೀಡಿಯಾ ಮೂಲಕ ಟ್ರಂಪ್‌ ಅವರ ಈ ನಡವಳಿಕೆಯನ್ನು ಡೆಮಾಕ್ರಟ್ಸ್‌ ಟೀಕಿಸಿದ್ದಾರೆ. ಟ್ರಂಪ್‌ , 1970ರ ಬಳಿಕ ತಮ್ಮ ತೆರಿಗೆ ರಿಟರ್ನ್ ಅನ್ನು ಬಹಿರಂಗಗೊಳಿಸದ ಅಮೆರಿಕದ ಮೊದಲ ಅಧ್ಯಕ್ಷರಾಗಿದ್ದಾರೆ ಎಂದು ಹೇಳಿದ್ದಾರೆ. ಈ ವರದಿಯನ್ನು ಬಹಿರಂಗಗೊಳಿಸುವುದು ಕಾನೂನಾತ್ಮಕವಾಗಿ ತಪ್ಪಲ್ಲದಿದ್ದರೂ ಟ್ರಂಪ್‌ ಅಮೆರಿಕದ ಸಂಪ್ರದಾಯವನ್ನು ಮುರಿದಿದ್ದಾರೆ ಎನ್ನುವುದು ಅವರ ವಾದ.

 

Advertisement

Udayavani is now on Telegram. Click here to join our channel and stay updated with the latest news.

Next