ಧಾರವಾಡ: ಜಿಲ್ಲೆಗೆ ಮಂಜೂರಾಗಿದ್ದ 15 ಇಂದಿರಾ ಕ್ಯಾಂಟೀನ್‌ಗಳಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ 12 ಕ್ಯಾಂಟೀನ್‌ಗಳ ಪೈಕಿ 9 ಕ್ಯಾಂಟೀನ್‌ಗಳು ಅಂತಿಮ ರೂಪ ಪಡೆದಿದ್ದು, ಆದರೆ ಈವರೆಗೂ ಲೋಕಾರ್ಪಣೆಯಾಗಿಲ್ಲ. ಧಾರವಾಡ ನಗರಕ್ಕೆ ಮಂಜೂರಾಗಿದ್ದ ನಾಲ್ಕು ಕ್ಯಾಂಟೀನ್‌ಗಳ ಪೈಕಿ ಮಿನಿ ವಿಧಾನಸೌಧ ಆವರಣ ಹಾಗೂ ಹೊಸ ಬಸ್ ನಿಲ್ದಾಣದ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಸುಸಜ್ಜಿತವಾಗಿ ಸಂಪೂರ್ಣ ಸಿದ್ಧವಾಗಿ ನಿಂತಿವೆ. ಅದೇ ರೀತಿ ಹುಬ್ಬಳ್ಳಿಯಲ್ಲಿ ನಿಗದಿ ಮಾಡಿದ್ದ 8 ಕ್ಯಾಂಟೀನ್‌ಗಳ ಪೈಕಿ 7 ಕ್ಯಾಂಟೀನ್ ಸಿದ್ಧಗೊಂಡಿದ್ದು, ಒಂದು ಕ್ಯಾಂಟೀನ್ ಕಾರ್ಯವಷ್ಟೇ ಬಾಕಿ ಉಳಿದಿದೆ.
ಮಾಸ್ಟರ್ ಕಿಚನ್ ಸಿದ್ಧ: ಇದಲ್ಲದೇ ಧಾರವಾಡದ ಮಿನಿ ವಿಧಾನಸೌಧ ಆವರಣ ಹಾಗೂ ಹುಬ್ಬಳ್ಳಿಯ ಬೆಂಗೇರಿಯಲ್ಲಿ ಮಾಸ್ಟರ್ ಕಿಚನ್‌ಗಳೂ ತಯಾರಾಗಿದ್ದು, ಈ ಮಾಸ್ಟರ್ ಕಿಚನ್‌ಗಳಿಂದಲೇ ಅವಳಿನಗರದ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆ ಆಗಲಿದೆ. ಇದಕ್ಕಾಗಿ ಕರೆಯಲಾಗಿದ್ದ ಟೆಂಡರ್ ಸಹ ಮುಗಿದಿದ್ದು, ಧಾರವಾಡದ ಆದಿತ್ಯ ಮಯೂರ ಅವರಿಗೆ ಟೆಂಡರ್ ದೊರೆತಿದೆ. ಕ್ಯಾಂಟೀನ್‌ನಲ್ಲಿ ವಿತರಿಸುವ ಆಹಾರದ ಮೆನು ಇನ್ನೂ ಅಂತಿಮವಾಗಿಲ್ಲ.
ಸ್ಥಳಕ್ಕಾಗಿ ಹುಡುಕಾಟ: ಧಾರವಾಡ ನಗರದಲ್ಲಿ ಉಳಿದ ಎರಡು ಕ್ಯಾಂಟೀನ್ ನಿರ್ಮಾಣಕ್ಕಾಗಿ ಕಲಾಭವನ ಆವರಣದಲ್ಲಿ ವಿರೋಧ ಹಾಗೂ ಶಿವಾಜಿ ವೃತ್ತದಲ್ಲಿ ತಾಂತ್ರಿಕ ದೋಷ ಉಂಟಾದ ಹಿನ್ನೆಲೆಯಲ್ಲಿ ಬೇರೆ ಸ್ಥಳದ ಹುಡುಗಾಟದಲ್ಲಿದೆ ಅಧಿಕಾರಿಗಳ ತಂಡ. ಸದ್ಯ ಅವಳಿನಗರದ ಎಲ್ಲ ಕ್ಯಾಂಟೀನ್‌ಗಳ ನಿರ್ಮಾಣ ಕೈಗೊಂಡು ಕಾರ್ಯಾರಂಭ ಮಾಡಿದ ಬಳಿಕ ನವಲಗುಂದ, ಕುಂದಗೋಳ ಹಾಗೂ ಕಲಘಟಗಿ ತಾಲೂಕಿನಲ್ಲಿ ಮಂಜೂರಾಗಿರುವ ಇಂದಿರಾ ಕ್ಯಾಂಟೀನ್ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆಯಲಿದೆ.
ಲೋಕಾರ್ಪಣೆ ಯಾವಾಗ?
ಚುನಾವಣೆ ಘೋಷಣೆ ಪೂರ್ವವೇ ಕಾರ್ಯಾರಂಭ ಮಾಡಲು ಉದ್ದೇಶಿಸಲಾಗಿದ್ದ ಈ ಕ್ಯಾಂಟೀನ್‌ಗಳ ನಿರ್ಮಾಣ ಕಾರ್ಯ ಹೊಸ ತಂತ್ರಜ್ಞಾನ ಪದ್ಧತಿ ಅಳವಡಿಕೆಯಿಂದ ವೇಗ ಪಡೆದುಕೊಂಡಿತ್ತು. ಆದರೆ ಚುನಾವಣೆ ಘೋಷಣೆಯಾದ ಬಳಿಕ ಗುತ್ತಿಗೆದಾರರ ಆತಂಕದಿಂದ ಕಾಮಗಾರಿಗಳು ನಿಧಾನವೇ ಪ್ರಧಾನ ಆಗುವಂತಾಗಿತ್ತು. ಈಗ ಸದ್ಯ ಅಂತಿಮ ಹಂತಕ್ಕೆ ಬಂದು ನಿಂತಿರುವ ಈ ಕಟ್ಟಡಗಳಿಗೆ ಚುನಾವಣೆ ಮುಗಿದು ತಿಂಗಳಾದರೂ ಲೋಕಾರ್ಪಣೆಯ ಭಾಗ್ಯವಿಲ್ಲದಂತಾಗಿದೆ. ಇದಕ್ಕೆ ಕಾರಣ ಜನಪ್ರತಿನಿಧಿಗಳ ನಿರ್ಲಕ್ಷ್ಯವೋ ಅಥವಾ ಅಧಿಕಾರಿ ವರ್ಗದ ವಿಳಂಬ ನೀತಿಯೋ ಎಂಬುದು ಸಾರ್ವಜನಿಕರಿಗೆ ತಿಳಿಯದಾಗಿದೆ.
ಜಿಲ್ಲೆಗೆ ಮಂಜೂರಾಗಿದ್ದ 15 ಕ್ಯಾಂಟೀನ್ ಪೈಕಿ 9 ಸಿದ್ಧವಾಗಿದ್ದು, ಸದ್ಯ ಅವುಗಳ ಕಾರ್ಯಾರಂಭಕ್ಕೆ ದಿನಾಂಕ ನಿಗದಿ ಮಾಡಬೇಕಿದೆ. ಉಳಿದ ಕ್ಯಾಂಟೀನ್‌ಗಳನ್ನು ಬೇಗ ನಿರ್ಮಿಸಲು ಸೂಚನೆ ನೀಡಲಾಗಿದೆ.
ವಿ.ಜೆ. ಜೋಶಿ,
ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತ,
ಜಿಲ್ಲಾ ನಗರಾಭಿವೃದ್ಧಿ ಕೋಶ, ಧಾರವಾಡ