ಬೆಂಗಳೂರು: ಬಿಬಿಎಂಪಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಇಮ್ರಾನ್ ಪಾಷಾ ಹಾಗೂ ಸಮಿತಿ ಸದಸ್ಯರು ಆಸ್ಟಿನ್ ಟೌನ್‌ನಲ್ಲಿರುವ ಬಿಬಿಎಂಪಿ ಬಾಲಕಿಯರ ಶಾಲೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ವಿದ್ಯಾರ್ಥಿನಿಯರು ಶಾಲೆಯ ಅವ್ಯವಸ್ಥೆಯ ಕುರಿತು ದೂರಿನ ಮಳೆಯನ್ನೇ ಸುರಿಸಿದ್ದಾರೆ. ಸಾರ್ ಶೌಚಾಲಯ ಇದೆ, ಆದರೆ, ಅದಕ್ಕೆ ಬಾಗಿಲಿಲ್ಲ. ಶಾಲಾ ಕಟ್ಟಡದ ಛಾವಣಿ ಬೀಳುವ ಸ್ಥಿತಿಯಲ್ಲಿದೆ. ಕುಡಿಯುವ ನೀರಿನ ಸೌಲಭ್ಯವೂ ಇಲ್ಲ, ಜತೆಗೆ ಶಾಲೆ ಪುಂಡರ ತಾಣವಾಗಿದೆ. ಈ ಕುರಿತು ಶಿಕ್ಷಕರ ಗಮನಕ್ಕೆ ತಂದರೂ, ಯಾವುದೇ ಪ್ರಯೋಜನವಾಗಿಲ್ಲ. ಈ ರೀತಿ ಯಾದರೆ ನಾವು ಕಾಲೇಜಿಗೆ ಬರುವು ದಾದರೂ ಹೇಗೆ ಎಂದು ಅಧ್ಯಕ್ಷರನ್ನೇ ಪ್ರಶ್ನಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ, ಕಟ್ಟಡ ಸುಮಾರು ಹತ್ತಾರು ವರ್ಷಗಳ ಹಳೆಯದ್ದಾಗಿದ್ದು, ಅದನ್ನು ಕೂಡಲೆ ದುರಸ್ತಿ ಪಡಿಸಲಾಗುವುದು. ಶಾಲೆಯ ಸುತ್ತಲಿನ ಪ್ರದೇಶಕ್ಕೆ ಅನಧಿಕೃತ ವ್ಯಕ್ತಿಗಳು ಬಾರದಂತೆ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು. ಶಾಲೆಗೆ ಭದ್ರತಾ ಸಿಬ್ಬಂದಿ ನೇಮಕ ಮಾಡಲಾಗುವುದು. ಪುಂಡರ ಹಾವಳಿ ಕುರಿತು ಸ್ಥಳೀಯ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಲಾಗುವುದು ಎಂದು ತಿಳಿಸಿದರು.
ನಾಡಗೀತೆ ಕುರಿತ ಪ್ರಶ್ನೆಗೆ ತಬ್ಬಿಬ್ಬಾದ ಪಾಷಾ:ಇಮ್ರಾನ್ ಪಾಷಾ ಮಂಗಳವಾರ ಆಸ್ಟಿನ್ ಟೌನ್‌ನಲ್ಲಿರುವ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿನಿಯೊಬ್ಬರು ಕೇಳಿದ ಪ್ರಶ್ನೆಗೆ ತಬ್ಬಿಬ್ಟಾದ ಪ್ರಸಂಗ ನಡೆದಿದೆ. ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ನಮ್ಮ ಪ್ರಧಾನಮಂತ್ರಿ ಯಾರು? ಮುಖ್ಯಮಂತ್ರಿ ಯಾರು? ಎಂಬ ಪ್ರಶ್ನೆಗಳನ್ನು ಇಮ್ರಾನ್ ಪಾಷಾ ಕೇಳಿದ್ದಾರೆ.
ಅದಕ್ಕೆ ಉತ್ತರಿಸಿದ ನಂತರ ವಿದ್ಯಾರ್ಥಿನಿಯೊಬ್ಬಳು ಪಾಷಾ ಅವರಿಗೆ ನಮ್ಮ ನಾಡಗೀತೆ ಬರೆದವರು ಯಾರು ಎಂದು ಮರು ಪ್ರಶ್ನೆಯನ್ನು ಕೇಳಿದ್ದಾಳೆ. ಈ ಪ್ರಶ್ನೆಗೆ ಅವರು ತಬ್ಬಿಬ್ಟಾಗಿ ಉತ್ತರಿಸಲು ಪೇಚಾಡಿದ್ದು ಕಂಡುಬಂದಿತು. ಈ ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರೇ ನಾಡಗೀತೆ ಬರೆದವರು ಯಾರೆಂದು ಹೇಳಲಾಗಿಲ್ಲವೆಂದ ಮೇಲೆ ಅವರು ಶಿಕ್ಷಣ ಸ್ಥಾಯಿ ಸಮಿತಿಗೆ ಅಧ್ಯಕ್ಷರಾಗಿದ್ದಾದರೂ ಹೇಗೆ? ಎಂಬ ಮಾತು ಕೇಳಿ ಬಂದಿವೆ.