ಅಲ್ ಅಮೆರತ್: ಲೆಜೆಂಡ್ಸ್ ಲೀಗ್ ಕ್ರಿಕೆಟ್ ಪ್ರತಿದಿನವೂ ಬ್ಯಾಟಿಂಗ್ ವೈಭವಕ್ಕೆ ಸಾಕ್ಷಿಯಾಗುತ್ತಿದೆ. ಶನಿವಾರ ನಡೆದ ಇಂಡಿಯಾ ಮಹಾರಾಜಾಸ್ ಮತ್ತು ವರ್ಲ್ಡ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ ರನ್ ಹೊಳೆ ಹರಿದಿದೆ. ಇಮ್ರಾನ್ ತಾಹಿರ್ ಬ್ಯಾಟಿಂಗ್ ಪರಾಕ್ರಮದ ಕಾರಣದಿಂದ ವರ್ಲ್ಡ್ ಜೈಂಟ್ಸ್ ತಂಡ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿ ಇಂಡಿಯಾ ಮಹಾರಾಜಾಸ್ 209 ರನ್ ಗಳಿಸಿದರೆ, ವರ್ಲ್ಡ್ ಜೈಂಟ್ಸ್ ತಂಡವು ಇನ್ನೂ ಮೂರು ಎಸೆತ ಬಾಕಿ ಇರುವಂತೆ ಗುರಿ ತಲುಪಿತು.
15 ರನ್ ಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಇಂಡಿಯಾ ತಂಡಕ್ಕೆ ನಮನ್ ಓಜಾ ಮತ್ತು ನಾಯಕ ಕೈಫ್ ನೆರವಾದರು. ಇವರಿಬ್ಬರೂ ಮೂರನೇ ವಿಕೆಟ್ ಗೆ 187 ರನ್ ಗಳ ಜೊತೆಯಾಟವಾಡಿದರು. ಆಕರ್ಷಕ ಶತಕ ಬಾರಿಸಿದ ನಮನ್ ಓಜಾ ಕೇವಲ 69 ಎಸೆತಗಳಲ್ಲಿ 9 ಸಿಕ್ಸರ್ ನೆರವಿನಿಂದ 140 ರನ್ ಗಳಿಸಿದರು. ನಾಯಕ ಕೈಫ್ ಅಜೇಯ 53 ರನ್ ಗಳಿಸಿದರು.
ಇದನ್ನೂ ಓದಿ:ಟೀಂ ಇಂಡಿಯಾ ಹಾರಾಟಕ್ಕೆ ಉಡುಗಿಹೋದ ಉಗಾಂಡ: ಅ.19 ಹುಡುಗರಿಗೆ 326 ರನ್ ಅಂತರದ ಜಯ
ದೊಡ್ಡ ಗುರಿ ಬೆನ್ನತ್ತಿದ್ದ ವರ್ಲ್ಡ್ ಜೈಂಟ್ಸ್ ಗೆ ಪೀಟರ್ಸನ್ ಹೊರತುಪಡಿಸಿ ಬೇರೆ ಯಾರಿಂದಲೂ ಉತ್ತಮ ಬೆಂಬಲ ಸಿಗಲಿಲ್ಲ. ಪೀಟರ್ಸನ್ 27 ಎಸೆತಗಳಲ್ಲಿ ಆರು ಸಿಕ್ಸರ್ ನೆರವಿನಿಂದ 53 ರನ್ ಗಳಿಸಿದರು. ನಾಯಕ ಸ್ಯಾಮಿ 28 ರನ್ ಗಳಿಸಿದರು. ಆದರೆ ಕೊನೆಯಲ್ಲಿ ಸಿಡಿದು ನಿಂತ ಇಮ್ರಾನ್ ತಾಹಿರ್ ಭರ್ಜರಿ ಬ್ಯಾಟ್ ಬೀಸಿದರು. ಕೇವಲ 19 ಎಸೆತ ಎದುರಿಸಿದ ತಾಹಿರ್ ಐದು ಸಿಕ್ಸರ್ ನೆರವಿನಿಂದ 52 ರನ್ ಗಳಿಸಿದರು. ಕೊನೆಯ ಓವರ್ ನಲ್ಲಿ 12 ರನ್ ಬೇಕಾಗಿದ್ದಾಗ ಎರಡು ಸಿಕ್ಸರ್ ಬಾರಿಸಿದ ತಾಹಿರ್ ಒಮಾನ್ ಮೈದಾನದಲ್ಲಿ ಮ್ಯಾಜಿಕ್ ಮಾಡಿದರು.