Advertisement

ಪಾಕ್‌ ಸರಕಾರ ಪತನಕ್ಕೆ ವಿದೇಶಿ ಸಂಚು: ಆರೋಪ

11:49 PM Mar 31, 2022 | Team Udayavani |

ಇಸ್ಲಾಮಾಬಾದ್‌: ಪಾಕಿಸ್ಥಾನದ ಪ್ರಧಾನಿ ಇಮ್ರಾನ್‌ ಸರ್ಕಾರ ಪತನದಂಚಿಗೆ ಬಂದಿರು­ವಂತೆಯೇ ಗುರುವಾರ ಹೊಸ ಬೆಳವಣಿಗೆಗಳು ನಡೆದಿವೆ. ಪಾಕ್‌ ಸರ್ಕಾರವನ್ನು ಪತನಗೊಳಿಸಬೇಕು ಎಂಬ ಆಜ್ಞೆ ಅಮೆರಿಕದಿಂದಲೇ ಬಂದಿತ್ತು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

Advertisement

“ವಿದೇಶಿ ಸಂಚು’ ವಿಚಾರ ಬಹಿರಂಗವಾಗುತ್ತಲೇ ಅಲ್ಲಿನ ಸುಪ್ರೀಂ ಕೋರ್ಟ್‌ಗೆ ಅರ್ಜಿಯೊಂದು ಸಲ್ಲಿಕೆಯಾಗಿದ್ದು, ಇಮ್ರಾನ್‌ ಖಾನ್‌ ವಿರುದ್ಧದ ಅವಿಶ್ವಾಸ ಗೊತ್ತುವಳಿ ಕುರಿತ ಮತದಾನಕ್ಕೆ ತಡೆಯಾಜ್ಞೆ ತರಬೇಕು ಎಂದು ಮನವಿ ಮಾಡಲಾಗಿದೆ. ಅಷ್ಟೇ ಅಲ್ಲದೆ, ವಿದೇಶಿ ಸಂಚು ಕುರಿತು ತನಿಖೆಗೆ ಆದೇಶಿಸುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ. ದೇಶವಾಸಿಗಳಲ್ಲಿ ಮೂಡಿರುವ ಅನಿಶ್ಚಿತತೆಗೆ ಅಂತ್ಯ ಹಾಡಬೇಕೆಂದರೆ ಕೂಡಲೇ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸಬೇಕು ಎಂದೂ ಅರ್ಜಿದಾರರು ಮನವಿ ಮಾಡಿದ್ದಾರೆ.

ಅಮೆರಿಕದ ವಿರುದ್ಧ ದೋಷಣೆ: ವಿದೇಶವೊಂ­ದರ(ಅಮೆರಿಕ) ಹಿರಿಯ ಅಧಿಕಾರಿಯೊಬ್ಬರಿಂದ ಪಾಕಿಸ್ತಾನದ ರಾಯಭಾರಿಗೆ ಬಂದಿರುವ ಪತ್ರವನ್ನು ಗುರುವಾರ ಇಮ್ರಾನ್‌ ಖಾನ್‌ ಬಹಿರಂಗಪಡಿಸಿದ್ದಾರೆ. ಅದರಲ್ಲಿ ಈಗಿರುವ ಪಾಕ್‌ ಸರ್ಕಾರವನ್ನು ಪತನಗೊಳಿಸಿ, ಹೊಸ ಸರ್ಕಾರ ರಚನೆ ಪ್ರಕ್ರಿಯೆ ನಡೆಸುವಂತೆ “ಬೆದರಿಕೆ’ ಮಾದರಿಯಲ್ಲಿ ಸೂಚಿಸಲಾಗಿತ್ತು ಎಂದೂ ಹೇಳಲಾಗಿದೆ.

ಇದರ ಬೆನ್ನಲ್ಲೇ, ಇಮ್ರಾನ್‌ ಖಾನ್‌ ಅವರು ಸಂಜೆ ರಾಷ್ಟ್ರೀಯ ಭದ್ರತಾ ಸಮಿತಿಯ ಮಹತ್ವದ ಸಭೆ ಕರೆದಿದ್ದರು. ಆದರೆ, ಪ್ರತಿಪಕ್ಷಗಳು ಈ ಸಭೆಯನ್ನು ಬಹಿಷ್ಕರಿಸಿದವು. ಸಭೆಯ ವೇಳೆ, ಅಮೆರಿಕದಿಂದ ಬಂದಿದೆ ಎನ್ನಲಾದ ಪತ್ರದ ಮಾಹಿತಿಯನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರು ಭದ್ರತಾ ಸಮಿತಿಯ ಮುಂದೆ ಇಟ್ಟಿದ್ದಾರೆ. ಪತ್ರದಲ್ಲಿ ವಿದೇಶಿ ಅಧಿಕಾರಿ ಬಳಸಿರುವ ಭಾಷೆಯು “ರಾಜತಾಂತ್ರಿಕವಾಗಿಲ್ಲ’. ಅಲ್ಲದೇ, ಪಾಕ್‌ನ ಆಂತರಿಕ ವಿಚಾರದಲ್ಲಿ ಮತ್ತೂಂದು ದೇಶ ಮೂಗು ತೂರಿಸುವುದನ್ನು ಸಹಿಸಲು ಆಗುವುದಿಲ್ಲ ಎಂದೂ ಭದ್ರತಾ ಸಲಹೆಗಾರರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತಾ ಸಮಿತಿಯು, ಅಮೆರಿಕದ ಪ್ರಮುಖ ರಾಜತಾಂತ್ರಿಕ ಅಧಿಕಾರಿಗೆ ಸಮನ್ಸ್‌ ಜಾರಿ ಮಾಡಿ ತೀವ್ರ ಆಕ್ಷೇಪ ಸಲ್ಲಿಸಲು ನಿರ್ಧರಿಸಿದೆ.

ಎ.3ಕ್ಕೆ ಮುಂದೂಡಿಕೆ :

Advertisement

ಗುರುವಾರ ಪಾಕ್‌ನ ರಾಷ್ಟ್ರೀಯ ಅಸೆಂಬ್ಲಿ ಅಧಿವೇಶನವು ಆರಂಭವಾದ ಮೂರೇ ನಿಮಿಷಗಳಲ್ಲಿ ಮುಂದೂಡಿಕೆಯಾಗಿದೆ. ಎ.3ರ ಭಾನುವಾರ ಕಲಾಪ ಮತ್ತೆ ಸಮಾವೇಶ ಗೊಳ್ಳಲಿದೆ. ಗುರುವಾರ ಕಲಾಪ ಆರಂಭವಾಗುತ್ತಿದ್ದಂತೆ, ಇಮ್ರಾನ್‌ ಖಾನ್‌ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿ ಕೂಡಲೇ ಮತದಾನ ಆರಂಭಿಸಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದವು. ಆದರೆ ಸ್ಪೀಕರ್‌ ಅದಕ್ಕೆ ಒಪ್ಪಲಿಲ್ಲ. ಆಕ್ರೋಶಗೊಂಡ ಪ್ರತಿಪಕ್ಷ ಸದಸ್ಯರು ಗದ್ದಲವೆಬ್ಬಿಸಿದರು. ಕೂಡಲೇ ಸ್ಪೀಕರ್‌ ಸದನದ ಕಲಾಪವನ್ನು ಭಾನುವಾರಕ್ಕೆ ಮುಂದೂಡಿದರು.  ಸದನ ಮುಂದೂಡಿಕೆಯಾಗುತ್ತಿದ್ದಂತೆ, ಹೊಸ ಪ್ರಧಾನಮಂತ್ರಿಯನ್ನು ಚುನಾಯಿಸಬೇಕು ಎಂದು ಕೋರಿ ರಾಷ್ಟ್ರೀಯ ಅಸೆಂಬ್ಲಿಗೆ ಪ್ರತಿಪಕ್ಷಗಳು ಅರ್ಜಿ ಸಲ್ಲಿಸಿವೆ.

ಲಾಸ್ಟ್‌ ಬಾಲ್‌ವರೆಗೂ ಆಡುವೆ :

ಗುರುವಾರ ರಾತ್ರಿ ಮತ್ತೆ ದೇಶವನ್ನುದ್ದೇಶಿಸಿ ಮಾತನಾಡಿರುವ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌, ರಾಜೀನಾಮೆ ನೀಡುವುದಿಲ್ಲ ಎಂಬ ಸುಳಿವನ್ನು ನೀಡಿದ್ದಾರೆ. “ನಾನು 20 ವರ್ಷಗಳ ಕಾಲ ಕ್ರಿಕೆಟ್‌ ಆಡಿದ್ದೇನೆ. ಕೊನೆಯ ಎಸೆತದವರೆಗೂ ಆಡುತ್ತಿದ್ದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಈಗಲೂ ಅಷ್ಟೆ, ಲಾಸ್ಟ್‌ ಬಾಲ್‌ವರೆಗೂ ಆಡುತ್ತೇನೆ. ನಾನು ಜೀವನದಲ್ಲಿ ಎಂದೂ ಸೋಲೊಪ್ಪಿಕೊಂಡಿಲ್ಲ. ಅವಿಶ್ವಾಸ ಮತದಾನದ ಫ‌ಲಿತಾಂಶ ಏನೇ ಬರಲಿ, ನಾನು ಮತ್ತಷ್ಟು ಗಟ್ಟಿಯಾಗಿ ಬರುತ್ತೇನೆ’ ಎಂದಿದ್ದಾರೆ. “ರಾಜಕೀಯಕ್ಕೆ ಎಂಟ್ರಿಯಾದಾಗ 3 ಉದ್ದೇಶಗಳನ್ನಿಟ್ಟುಕೊಂಡು ಬಂದಿದ್ದೆ. ನ್ಯಾಯ, ಮಾನವೀಯತೆ ಮತ್ತು ಸ್ವಾವಲಂಬನೆಯನ್ನು ಸಾಧಿಸುವುದೇ ನನ್ನ ಗುರಿಯಾಗಿತ್ತು. ಈಗ ದೇಶವು ಇತಿಹಾಸದಲ್ಲೇ ಮೊದಲ ಬಾರಿಗೆ ನಿರ್ಣಾಯಕ ಹಂತಕ್ಕೆ ಬಂದು ತಲುಪಿದೆ. ಕೆಲವರು ಈ ದೇಶವನ್ನು ಮಾರಾಟ ಮಾಡುವಲ್ಲಿಯವರೆಗೆ ಹೋಗಿದ್ದಾರೆ. ಅವರನ್ನು ದೇಶ ಎಂದಿಗೂ ಕ್ಷಮಿಸುವುದಿಲ್ಲ. ಜನ ಎಲ್ಲವನ್ನೂ ನೆನಪಿಟ್ಟುಕೊಳ್ಳುತ್ತಾರೆ’ ಎಂದಿದ್ದಾರೆ.

ಇಮ್ರಾನ್‌ ಖಾನ್‌ಗೆ ಈಗ ಓಡಿ ಹೋಗಲೂ ಯಾವುದೇ ದಾರಿಯಿಲ್ಲ. ತನ್ನ ಮುಖ ಉಳಿಸಿಕೊಳ್ಳಲು ಬೇರೆ ಆಯ್ಕೆಯೂ ಇಲ್ಲ. -ಬಿಲಾವಲ್‌ ಭುಟ್ಟೋ ಜರ್ದಾರಿ, ಪಿಪಿಪಿ ಮುಖ್ಯಸ್ಥ

Advertisement

Udayavani is now on Telegram. Click here to join our channel and stay updated with the latest news.