ಲಂಡನ್ : ರಾಜಕಾರಣಿಯಾಗಿ ಪರಿವರ್ತಿತರಾಗಿ ಈಚೆಗಷ್ಟೇ ತನ್ನ 65ರ ಹರೆಯದಲ್ಲಿ ಮೂರನೇ ಮದುವೆಯಾಗಿರುವ ಪಾಕಿಸ್ಥಾನದ ಮಾಜಿ ಕ್ರಿಕೆಟಿಗ ಹಾಗೂ ತೆಹರೀಕ್ ಎ ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ “ಇಮ್ರಾನ್ ಖಾನ್, ಪತಿಯಾಗಿ ಒಬ್ಬ ಪ್ರಾಮಾಣಿಕ ಪುರುಷನಲ್ಲ; ಆತ ಅಪ್ರಾಮಾಣಿಕ; ನನ್ನನ್ನು ಮದುವೆಯಾಗಿರುತ್ತಲೇ ಆತ ಹೊಸ ಪತ್ನಿ ಬುಷ್‌ರಾ ಮೇಲೆ ಕಣ್ಣು ಹಾಕಿದ್ದ’ ಎಂದು ಎರಡನೇ ಪತ್ನಿ, ಬ್ರಿಟಿಷ್-ಪಾಕ್ ಪತ್ರಕರ್ತೆ, ರೆಹಾಮ್ ಖಾನ್ ಹೇಳಿದ್ದಾಳೆ.
ಈ ನಡುವೆ ಇಮ್ರಾನ್ ಖಾನ್ ಮೂರನೇ ವಿವಾಹ ವಿಶ್ವಾದ್ಯಂತ ಮಾಧ್ಯಮಗಳಲ್ಲಿ ಮುಖ್ಯ ಶೀರ್ಷಿಕೆಯಾಗಿ ಪ್ರಕಟಗೊಂಡಿದೆ. ಬುರ್ಖಾಧಾರಿ ಪತ್ನಿ ಬುಷ್‌ರಾ ಜತೆಗಿನ ಇಮ್ರಾನ್ ಕುಟುಂಬದ ವೈವಾಹಿಕ ಫೋಟೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು ಅದನ್ನೀಗ ತಡೆ ಹಿಡಿಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಎರಡನೇ ಪತ್ನಿ ರೆಹಾಮ್ ಖಾನ್ ಜತೆಗಿನ ಇಮ್ರಾನ್ ಖಾನ್ ಎರಡನೇ ಮದುವೆ 2015ರಲ್ಲಿ ವಿಚ್ಛೇದನದಲ್ಲಿ ಕೊನೆಗೊಂಡಿತ್ತು. “ದಿ ಟೈಮ್ಸ್’ ಜತೆಗೆ ಮಾತನಾಡುತ್ತಾ ರೆಹಾಮ್ ಖಾನ್, “ಇಮ್ರಾನ್ ಖಾನ್ ಅಪ್ರಾಮಾಣಿಕ ಮನುಷ್ಯ; ಮೂರನೇ ಪತ್ನಿ ಬುಷ್‌ರಾ ಜತೆಗೆ ಆತ 2018ರ ಜನವರಿ 1ರಂದು ಮದುವೆಯಾಗಿದ್ದ ; ಆದರೆ ಅದನ್ನು ಸ್ವಲ್ಪ ಕಾಲಾನಂತರವೇ ಬಹಿರಂಗ ಮಾಡಿದ್ದ. ಸುಮಾರು ಎರಡು ತಿಂಗಳ ಕಾಲ ಇಮ್ರಾನ್ ತನ್ನ 3ನೇ ಮದುವೆಯನ್ನು ಮುಚ್ಚಿಟ್ಟಿದ್ದ’ ಎಂದು ಹೇಳಿದಳು.
ಇಮ್ರಾನ್ ಮತ್ತು ಬುಷ್‌ರಾ ವಿವಾಹ ಸುದ್ದಿ ಬಹಿರಂಗವಾಗುವುದಕ್ಕೆ ಕೆಲ ದಿನಗಳ ಹಿಂದೆ ರೆಹಾಮ್ ಗೆ ಬೆದರಿಕೆ ಕರೆಗಳು ಬಂದಿದ್ದವು; ಪರಿಣಾಮವಾಗಿ ಆಕೆ ಪಾಕಿಸ್ಥಾನವನ್ನು ತೊರೆದಿದ್ದಳು.
ಪಾಕ್ ದೈನಿಕ ಡಾನ್, ರೆಹಾಮ್ ಖಾನ್ ಳನ್ನು ಉಲ್ಲೇಖೀಸಿ ಮಾಡಿರುವ ವರದಿಯಲ್ಲಿ “ರೆಹಾಮ್ ತಾನು ತಾತ್ಕಾಲಿಕವಾಗಿ ತನ್ನ ಮಕ್ಕಳ ಭದ್ರತೆಗಾಗಿ ದೇಶ ತೊರೆಯುತ್ತಿದ್ದೇನೆ; ಮತ್ತೆ ಖಂಡಿತವಾಗಿಯೂ ದೇಶಕ್ಕೆ ಮರಳಲಿದ್ದೇನೆ” ಎಂದು ಹೇಳಿರುವುದಾಗಿ ತಿಳಿಸಿದೆ.
ರೆಹಾಮ್ ಇಮ್ರಾನ್ ಖಾನ್ ಜತೆಗಿನ ತನ್ನ ಮದುವೆಯ ಕುರಿತಾಗಿ ಪುಸ್ತಕವನ್ನೇ ಬರೆದಿದ್ದಾಳೆ; ಅದು ಸದ್ಯದಲ್ಲೇ ಪ್ರಕಟಗೊಂಡು ಬೆಳಕು ಕಾಣಲಿದೆ. ಈ ಪುಸ್ತಕ ಇಮ್ರಾನ್ ಬದುಕಲ್ಲೂ ಅಲ್ಲೋಕ ಕಲ್ಲೋಲ ಉಂಟುಮಾಡಲಿದೆ ಎಂದು ಭಾವಿಸಲಾಗಿದೆ.