ಇಸ್ಲಾಮಾಬಾದ್ : ಪಾಕ್ ಪ್ರಧಾನಿ ಇಮ್ರಾನ್ ಖಾನ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ತೀವ್ರ ಮುಖಭಂಗ ಉಂಟಾಗಿದೆ. ಅವರ ನೇತೃತ್ವದ ಸರಕಾರದ ವಿರುದ್ಧದ ಅವಿಶ್ವಾಸ ಗೊತ್ತುವಳಿಯನ್ನು ರದ್ದುಪಡಿಸಿದ ಉಪಸ್ಪೀಕರ್ ಅವರ ನಿಲುವನ್ನು ಸುಪ್ರೀಂ ಕೋರ್ಟ್ ಸಾರಾಸಗಟಾಗಿ ತಳ್ಳಿಹಾಕಿದೆ. ಅಲ್ಲದೆ ಎ. 9ರಂದೇ ಅವಿಶ್ವಾಸ ಗೊತ್ತುವಳಿ ಸಂಬಂಧ ಮತದಾನ ನಡೆಸಬೇಕು ಮತ್ತು ರಾಷ್ಟ್ರೀಯ ಸಂಸತ್ತನ್ನು ಪುನರ್ ಸ್ಥಾಪಿಸಬೇಕು ಎಂದು ಕೋರ್ಟ್ ಆದೇಶಿಸಿದೆ.
ಗುರುವಾರ ರಾತ್ರಿ ಭಾರೀ ಭದ್ರತೆಯೊಂದಿಗೆ ಅವಿಶ್ವಾಸ ಗೊತ್ತುವಳಿ ರದ್ದು ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌ನ ಪಂಚಸದಸ್ಯರ ಪೀಠ ನೀಡಿದ ಈ ತೀರ್ಪಿನಿಂದ ಅಲ್ಪಮತಕ್ಕೆ ಕುಸಿದಿರುವ ಮೈತ್ರಿಕೂಟ ಸರಕಾರಕ್ಕೆ ತೀವ್ರ ಹಿನ್ನಡೆ ಆಗಿದೆ.
ಸಂಸತ್ ವಿಸರ್ಜನೆ ಮತ್ತು ಅವಿಶ್ವಾಸ ಗೊತ್ತುವಳಿ ರದ್ದುಪಡಿಸಲು ಸೂಚಿಸಲು ಇಮ್ರಾನ್ ಖಾನ್‌ಗೆ ಅಧಿಕಾರವಿಲ್ಲ. ಅವಿಶ್ವಾಸ ಮಂಡನೆ ದಿನ ಯಾವುದೇ ಸದಸ್ಯರು ಮತದಾನ ಮಾಡದಂತೆ ತಡೆಯಲು ಯಾರಿಗೂ ಅಧಿಕಾರವಿಲ್ಲ ಎಂದು ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಈ ಹಿಂದೆ ಮಾ. 25ರಂದು ಅವಿಶ್ವಾಸ ಮಂಡನೆ ನಿಗದಿಯಾಗಿದ್ದಾಗ ಮೈತ್ರಿಯಿಂದ ದೂರವುಳಿದ ಸಂಸದರಿಗೆ ಸರಕಾರದ ವಿರುದ್ಧ ಮತ ಚಲಾಯಿಸದಂತೆ ಇಮ್ರಾನ್ ಸೂಚಿಸಿದ್ದರು. ಅನಂತರ ಅವಿಶ್ವಾಸ ಮಂಡನೆ ದಿನಾಂಕ ಮುಂದೂಡಲ್ಪಟ್ಟು ಪಾಕ್‌ನಲ್ಲಿ ಹೈಡ್ರಾಮಾ ಸೃಷ್ಟಿಯಾಗಿತ್ತು.
ವಿಪಕ್ಷಗಳಿಗೆ ಮೇಲುಗೈ
342 ಸ್ಥಾನವುಳ್ಳ ಪಾಕ್‌ನ ಸಂಸತ್ತಿನಲ್ಲಿ ಮೈತ್ರಿಕೂಟ ಸರಕಾರದ ಬಹುಮತಕ್ಕೆ 172 ಸ್ಥಾನಗಳು ನಿಚ್ಚಳವಾಗಿ ಬೇಕು. ಆದರೆ ಇಮ್ರಾನ್ ಬಳಿಯಿರುವ ಸಂಸದರ ಬಲ 157ಕ್ಕೂ ಕಡಿಮೆ. ಎ. 9ರಂದು ಅವಿಶ್ವಾಸ ಮತದಾನದ ವೇಳೆ ಪಿಎಂಎಲ್- ಎನ್, ಪಿಪಿಪಿ, ಎಂಎಂಎ ಒಳಗೊಂಡ ವಿಪಕ್ಷಗಳು ಮ್ಯಾಜಿಕ್ ಸಂಖ್ಯೆಯನ್ನು ದಾಟಿ ಸರಕಾರದ ವಿರುದ್ಧ ಬಲ ಕ್ರೋಡೀಕರಿಸುವ ಸಾಧ್ಯತೆ ಇದೆ.
ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುವ ಇಮ್ರಾನ್ ಖಾನ್‌ಗೂ ಹಿಟ್ಲರ್‌ಗೂ ಯಾವುದೇ ವ್ಯತ್ಯಾಸವಿಲ್ಲ. ಸುಪ್ರೀಂ ಕೋರ್ಟ್‌ನ ತೀರ್ಪು ಪಾಕ್ ಜನತೆಯ ಪರವಾಗಿದೆ.
– ಶೆಹಬಾಜ್ ಷರೀಫ್, ವಿಪಕ್ಷ ನಾಯಕ
ಸುಪ್ರೀಂ ಹೇಳಿದ್ದೇನು?
– ಅವಿಶ್ವಾಸ ಮಂಡನೆ ರದ್ದುಪಡಿಸಿದ ಉಪಸ್ಪೀಕರ್ ಆದೇಶ ಸಿಂಧುವಲ್ಲ
– ಎ. 9ರಂದೇ ಇಮ್ರಾನ್ ಖಾನ್ ವಿಶ್ವಾಸಮತ ಸಾಬೀತುಪಡಿಸಬೇಕು
– ಮತ ಚಲಾವಣೆ ತಡೆಯಲು ಯಾರಿಗೂ ಅಧಿಕಾರವಿಲ್ಲ.