ಇಸ್ಲಾಮಾಬಾದ್ : ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನದ ಬಳಿಕ ಪಾಕಿಸ್ಥಾನದ ಅಧಿಕಾರಿಗಳು ಗುರುವಾರ ಅವರ ಬೆಂಬಲಿಗರ ವಿರುದ್ಧ ಕಾರ್ಯಾಚರಣೆ ನಡೆಸಿದ್ದು, ರಾತ್ರೋ ರಾತ್ರಿ ನಡೆಸಿದ ದಾಳಿಗಳಲ್ಲಿ ಸಾವಿರಾರು ಜನರನ್ನು ಬಂಧಿಸಿದ್ದು, ಭುಗಿಲೆದ್ದಿರುವ ಹಿಂಸಾಚಾರದ ಅಲೆಯನ್ನು ನಿಯಂತ್ರಿಸಲು ದೇಶಾದ್ಯಂತ ಸೈನ್ಯವನ್ನು ನಿಯೋಜಿಸಲಾಗಿದೆ.
ಮಿಲಿಟರಿ ಸ್ವಾಧೀನ, ರಾಜಕೀಯ ಬಿಕ್ಕಟ್ಟು ಮತ್ತು ಹಿಂಸಾಚಾರಕ್ಕೆ ಒಗ್ಗಿಕೊಂಡಿರುವ ಪಾಕ್ ನಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ರಾವಲ್ಪಿಂಡಿಯ ಗ್ಯಾರಿಸನ್ ಸಿಟಿಯಲ್ಲಿ ಚುನಾವಣಾ ರ‍್ಯಾಲಿಯಲ್ಲಿ 2007 ರಲ್ಲಿ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಹತ್ಯೆಯ ನಂತರದ ಅಶಾಂತಿಯ ವಾತಾವರಣ ಮತ್ತೆ ನಿರ್ಮಾಣವಾಗಿದೆ.
ಮಂಗಳವಾರ ಖಾನ್ ಅವರ ನಾಟಕೀಯ ಬಂಧನದ ನಂತರ ಪೊಲೀಸರೊಂದಿಗೆ ಘರ್ಷಣೆಗಳು ಅವರ ಕನಿಷ್ಠ ಎಂಟು ಬೆಂಬಲಿಗರನ್ನು ಬಲಿ ಪಡೆದಿವೆ. ನೂರಾರು ಜನರು ಗಾಯಗೊಂಡಿದ್ದಾರೆ. ಐದು ಸಾವುಗಳು ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ವರದಿಯಾಗಿದೆ, ಎರಡು ಪೂರ್ವ ನಗರವಾದ ಲಾಹೋರ್‌ನಲ್ಲಿ ಮತ್ತು ಒಬ್ಬ ನೈಋತ್ಯ ನಗರವಾದ ಕ್ವೆಟ್ಟಾದಲ್ಲಿ ಸಾವನ್ನಪ್ಪಿದ್ದಾರೆ. 200ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಬುಧವಾರ ರಾತ್ರಿ ರಾಜಧಾನಿ ಇಸ್ಲಾಮಾಬಾದ್‌ನ ಹೊರವಲಯದಲ್ಲಿರುವ ರೈಲು ನಿಲ್ದಾಣವನ್ನು ಪ್ರತಿಭಟನಾಕಾರರು ಸುಟ್ಟು ಹಾಕಿದ್ದಾರೆ.
ಪಾಕ್ ಸೇನೆಯ ಮಾಧ್ಯಮ ವಿಭಾಗವಾದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR ) ಮೇ 9 ರಂದು ನಡೆದ ಘಟನೆಗಳನ್ನು ದೇಶದ ಇತಿಹಾಸದಲ್ಲಿ “ಕಪ್ಪು ಅಧ್ಯಾಯ” ಎಂದು ಬಣ್ಣಿಸಿದೆ ಎಂದು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಪ್ರತಿಭಟನೆಗಳು ನಿರ್ದಿಷ್ಟವಾಗಿ ಸೇನೆಯ ಆಸ್ತಿ ಮತ್ತು ಸ್ಥಾಪನೆಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಹೇಳಿದೆ.
ಖಾನ್ ಬಂಧನ ನಂತರ, ಸೇನೆಯ ಆಸ್ತಿಗಳು ಮತ್ತು ಸ್ಥಾಪನೆಗಳ ಮೇಲೆ ಸಂಘಟಿತ ದಾಳಿಗಳು ನಡೆದವು ಮತ್ತು ಸೈನ್ಯ ವಿರೋಧಿ ಘೋಷಣೆಗಳನ್ನು ಕೂಗಲಾಗಿದೆ. ಸೇನೆಯು ಅತ್ಯಂತ ಸಹನೆ, ತಾಳ್ಮೆ ಮತ್ತು ಸಂಯಮವನ್ನು ತೋರಿಸಿದೆ ಮತ್ತು ದೇಶದ ಹಿತದೃಷ್ಟಿಯಿಂದ ಅತ್ಯಂತ ತಾಳ್ಮೆ ಮತ್ತು ಸಹಿಷ್ಣುತೆಯಿಂದ ಕೆಲಸ ಮಾಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪಿಎಎಫ್‌ಎಂಎಂ ಆಲಂ ಏರ್ ಬೇಸ್ ಮಿಯಾನ್‌ವಾಲಿಯಲ್ಲಿ ಪಿಟಿಐ ಕಾರ್ಯಕರ್ತರ ದಾಳಿ ಮತ್ತು ವಿಧ್ವಂಸಕ ಕೃತ್ಯಗಳು ವರದಿಯಾಗಿವೆ ಎಂದು ಪಾಕಿಸ್ಥಾನ್ ಡೈಲಿ ಟ್ವೀಟ್‌ನಲ್ಲಿ ವರದಿ ಮಾಡಿದೆ.