ಬೇಲೂರು: ಪಟ್ಟಣದಲ್ಲಿನ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಲೋಕಾಯುಕ್ತ ಇನ್ಸ್‌ಪೆಕ್ಟರ್ ರೇವಣ್ಣ, ಶುಚಿತ್ವ ಕಾಪಾಡದ ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಆಸ್ಪತ್ರೆಯಲ್ಲಿನ ಚುಚ್ಚು ಮದ್ದು ಕೊಠಡಿ, ಪ್ರಯೋಗಾಲಯ, ಪುರುಷರು, ಮಹಿಳೆಯರು, ಮಕ್ಕಳ ವಾರ್ಡ್, ಡಯಾಲಿಸಿಸ್ ಕೇಂದ್ರ, ಎಕ್ಸರೆ ವಿಭಾಗ ಮತ್ತು ಉಪಾಹಾರ ಗೃಹಕ್ಕೆ ಭೇಟಿ ನೀಡಿದ ಇನ್ಸ್‌ಪೆಕ್ಟರ್ ಪರಿಶೀಲಿದರು. ಆಸ್ಪತ್ರೆ ಕೊಠಡಿಗಳ ಕಿಟಕಿ ಗಾಜುಗಳು ಹೊಡೆದಿದ್ದು, ಹಾಸಿಗೆ ಹರಿದು ಹೋಗಿರುವುದನ್ನು ಕಂಡು ಆಸ್ಪತ್ರೆಯ ಸ್ವಚ್ಛತೆ ಕಾಪಾಡಲು ವಿಫಲವಾಗಿರುವ ವೈದ್ಯರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ಗುತ್ತಿಗೆ ಪಡೆದಿರುವ ಟೆಂಡರ್‌ದಾರನಿಗೆ ಸ್ವಚ್ಛತೆ ಕಾಪಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ತಾಕೀತು ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಾಯುಕ್ತ ಇನ್ಸ್‌ಪೆಕ್ಟರ್ ರೇವಣ್ಣ, ಸರ್ಕಾರಿ ಆಸ್ಪತ್ರೆಯ ವೈದ್ಯರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಮೆಚ್ಚುಗೆ ಮಾತು ಸಾರ್ವಜನಿಕರಿಂದ ಕೇಳಿ ಬಂದಿದೆ. ಆದರೆ, ಆಸ್ಪತ್ರೆಯಲ್ಲಿನ ಸ್ವಚ್ಛತೆಗೆ ಹೆಚ್ಚು ಕಾಳಜಿವಹಿಸುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ ಎಂದರು.
ಸ್ವಚ್ಛತೆಗೆ ಆದ್ಯತೆ ನೀಡಿ: ರೋಗ ಗುಣಪಡಿಸುವುದು ವೈದ್ಯರ ಕರ್ತವ್ಯ. ಆದರೆ, ರೋಗಬಾರದ ರೀತಿ ಸ್ವಚ್ಛತೆ ಕಾಪಾಡುವುದು ಬಹುಮುಖ್ಯವಾದ ಕೆಲಸ. ಶೌಚಾಲಯ ಹಾಗೂ ಕೊಠಡಿಗಳಲ್ಲಿ ಸ್ವಚ್ಛತೆಯ ಇಲ್ಲ, ಪ್ರಯೋಗ ಶಾಲೆಯಲ್ಲಿ ಎಲ್ಲಂದರಲ್ಲಿ ರೋಗಿಗಳು ಉಪಯೋಗಿಸಿದ ಹತ್ತಿ ಬಿದ್ದಿದೆ. ಇದರಿಂದ ಬೇರೆಯವರಿಗೂ ಕಾಯಿಲೆ ಹರಡುವ ಸಾಧ್ಯತೆ ಇದೆ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದರು.
ಖಾಸಗಿ ಮೆಡಿಕಲ್‌ಗೆ ಕಳುಹಿಸಬೇಡಿ: ಬಡ ರೋಗಿಗಳ ಪಾಲಿಗೆ ಸರ್ಕಾರಿ ಆಸ್ಪತ್ರೆಗಳು ದೇವಾಲಯಗಳಾಗಿವೆ. ವೈದ್ಯರು ಯಾವುದೇ ಕಾರಣಕ್ಕೂ ಖಾಸಗಿ ಮೆಡಿಕಲ್ ಶಾಪ್‌ಗ್ಳಿಗೆ ಚೀಟಿ ಬರೆದುಕೊಡುವುದನ್ನು ನಿಲ್ಲಿಸಬೇಕು. ಸರ್ಕಾರ ಎಲ್ಲಾ ಕಾಯಿಲೆಗಳಿಗೂ ಔಷಧಿ, ಮಾತ್ರೆಗಳನ್ನು ಪೂರೈಕೆ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಬಡ ರೋಗಿಗಳನ್ನು ಹೊರಗಡೆ ಕಳುಹಿಸಬಾರದು ಎಂದು ಹೇಳಿದರು.
ಚಾಲಕನ ವರ್ಗಾವಣೆ ಮಾಡಿ: ವೈದ್ಯರನ್ನೇ ಜನರು ದೇವರು ಎಂದು ನಂಬಿದ್ದಾರೆ. ಹೀಗಾಗಿ ವೈದ್ಯರು ರೋಗಿಗಳಿಗೆ ಉತ್ತಮ ಸೇವೆ ನೀಡಬೇಕು. ಆಸ್ಪತ್ರೆಗೆ ಅಗತ್ಯ ಸೌಲಭ್ಯ ಒದಗಿಸುವ ಬಗ್ಗೆ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿಯೂ ತಿಳಿಸಿದರು. ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಒದಗಿಸುತ್ತಿರುವ ಆ್ಯಂಬುಲೆನ್ಸ್ ಚಾಲಕನ ಮೇಲೆ ಸಾಕಷ್ಟು ದೂರು ಕೇಳಿಬಂದಿವೆ. ಎರಡು ತಿಂಗಳ ಒಳಗೆ ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ ನೀವೇ ಜವಾಬ್ದಾರಿ ಹೊರಬೇಕು ಎಂದು ವೈದ್ಯ ನರಸೇಗೌಡರಿಗೆ ಸೂಚನೆ ನೀಡಿದರು.