ಮಡಿಕೇರಿ: ಗಸ್ತು ಸಿಬಂದಿ ತಮ್ಮ ಕಾರ್ಯವನ್ನು ಸೂಕ್ತವಾಗಿ ನಿರ್ವಹಿಸುತ್ತಿದ್ದಾರೆಯೇ ಇಲ್ಲವೆ ಎಂಬ ಬಗ್ಗೆ ತಿಳಿಯಲು ಸುಬಾಹು ಇ-ಬೀಟ್ ತಂತ್ರಾಂಶ ಸಹಕಾರಿಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್ ಅವರು ತಿಳಿಸಿದ್ದಾರೆ.
ಬೆಂಗಳೂರು ಮೂಲದ ಸ್ಮಾರ್ಟ್ ಸೆಕ್ಯೂರ್ ಎಂಬ ಸಂಸ್ಥೆಯು ರೂಪಿಸಿರುವ ಸುಬಾಹು ಇ-ಬೀಟ್ ತಂತ್ರಾಂಶವನ್ನು ಶುಕ್ರವಾರ ನಗರದ ಜಿಲ್ಲಾ ಪೊಲೀಸ್ ಕ್ರೀಡಾಂಗಣದಲ್ಲಿರುವ ಕಾನ್ಫರೆನ್ಸ್ ಹಾಲ್‌ನಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಜಿಲ್ಲಾ ಪೊಲೀಸ್ ವತಿಯಿಂದ ಇ-ಬೀಟ್ ಜಾರಿ ಕುರಿತು, ತಂತ್ರಜ್ಞಾನ ಅಳವಡಿಸಿಕೊಂಡು ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ಸುಬಾಹು-ಇ ಬೀಟ್ ತಂತ್ರಾಂಶ ಕಾರ್ಯಾರಂಭ ಮಾಡಿದೆ. ಈ ಹಿಂದೆ ರಾತ್ರಿ ಗಸ್ತನ್ನು ಕೈಬರಹದ ಮೂಲಕ ದಾಖಲಿಸಲಾಗುತ್ತಿತ್ತು. ಸಿಬ್ಬಂದಿಗಳು ನಿಗದಿತ ಸ್ಥಳಗಳಿಗೆ ತೆರಳಿ ಅಲ್ಲಿ ಸಹಿ ಮಾಡುವ ವ್ಯವಸ್ಥೆ ಇತ್ತು. ಇದೀಗ ಸುಬಾಹು ಇ-ಬೀಟ್ ಮುಖಾಂತರ ಸಿಬ್ಬಂದಿಗಳು ತಮ್ಮ ಸ್ಮಾರ್ಟ್ ಫೋನ್ ಬಳಸಿ ಕ್ಯು ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬಹುದಾಗಿದೆ. ನಿಗದಿತ ಸ್ಥಳಗಳಲ್ಲಿ ಅಂದರೆ ಗಸ್ತು ತೆರಳುವ ಮಾರ್ಗಗಳಲ್ಲಿ ಕ್ಯು ಆರ್ ಕೋಡ್ ಅನ್ನು ಸಿಬ್ಬಂದಿಗಳು ಸ್ಕ್ಯಾನ್ ಮಾಡಬೇಕಿದೆ.
ಇದರಿಂದ ಸಿಬ್ಬಂದಿಗಳೂ ಸಹ ಸೂಕ್ತ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ ಎಂದರು.
ಸಾರ್ವಜನಿಕರು ಸುಬಾಹು ರೆಸಿಡೆಂಟ್ ಆಪ್ ಅನ್ನು ಉಚಿತವಾಗಿ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ದೂರದ ಊರಿಗೆ ತೆರಳುವ ಮುನ್ನ ಹತ್ತಿರದ ಪೊಲೀಸ್ ಠಾಣೆಗೆ ಈ ತಂತ್ರಾಂಶದ ಮೂಲಕ ಮಾಹಿತಿ ನೀಡಬಹುದಾಗಿದೆ. ಇದರಿಂದ ದೂರ ಪ್ರಯಣ ಕೈಗೊಂಡ ಸಂಧರ್ಭದಲ್ಲಿ ಬೀಟ್ ಪೊಲೀಸರು ಮನೆಯ ಬಳಿಯೂ ಬಂದು ಗಸ್ತು ತಿರುಗಲಿದ್ದಾರೆ ಎಂದು ತಿಳಿಸಿದರು.
ಸ್ಮಾರ್ಟ್ ಸೆಕ್ಯೂರ್ ಸಂಸ್ಥೆಯ ಮಹೇಂದ್ರ ಅವರು, ಪೊಲೀಸ್ ಇಲಾಖೆಗೆ ಈ ತಂತ್ರಾಂಶದ ಬಳಕೆ ಅತ್ಯಂತ ಅವಶ್ಯಕವಾಗಿದೆ. ಸುಬಾಹು ಅಡ್ಮಿನ್ ಅನ್ನು ಹಿರಿಯ ಅಧಿಕಾರಿಗಳಿಗಾಗಿ ಮತ್ತು ಸುಬಾಹು ಬೀಟ್ ಅನ್ನು ಬೀಟ್ ಅಧಿಕಾರಿಗಳಿಗಾಗಿ ವಿನ್ಯಾಸಗೊಳಿಸಿದ್ದು ಮೊಬೈಲ್ ಮುಖಾಂತರವೇ ಅನೇಕ ಮಾಹಿತಿ ಪಡೆಯಲು ಪೂರಕವಾಗಿದೆ ಎಂದರು.
ಇನ್ನು ಸುಬಾಹು ತಂತ್ರಾಂಶ ಹೇಗೆ ಬಳಸಬೇಕು. ಯಾವ ರೀತಿ ಮಾಹಿತಿ ಸಂಗ್ರಹಿಸಬೇಕು ಎಂಬ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಸಂಕ್ಷಿಪ್ತ ತರಬೇತಿ ನೀಡಲಾಯಿತು. ವಿರಾಜಪೇಟೆ ಉಪ ವಿಭಾಗದ ಉಪ ಪೊಲೀಸ್ ಅಧೀಕ್ಷಕ ಜಯಕುಮಾರ್ ಮತ್ತು ಜಿಲ್ಲೆಯ ವಿವಿಧ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು ದಿನೇಶ್ ಕುಮಾರ್ ಅವರು ಸ್ವಾಗತಿಸಿದರು. ಸೋಮೇಗೌಡ ಅವರು ವಂದಿಸಿದರು. ಜಯರಾಮ್ ಕಕಾರ್ಯಕ್ರಮ ನಿರೂಪಿಸಿದರು.