ನೆಲಮಂಗಲ: ರೈತರ ಆರ್ಥಿಕ ಅಭಿವೃದ್ಧಿಗೆ ಹಾಲು ಉತ್ಪಾದನೆ ಪೂರಕವಾಗಿದೆ. ಇದರಿಂದ ಲಾಭ ಪಡೆಯಲು ಹಸುಗಳು ಆರೋಗ್ಯವಾಗಿರಬೇಕು ಎಂದು ಬಮೂಲ್ ನಿರ್ದೇಶಕ ಬಿ.ಆರ್.ಭಾಸ್ಕರ್ ಸಲಹೆ ನೀಡಿದರು.
ತಾಲೂಕಿನ ಮಹದೇವಪುರ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಬೆಂಗಳೂರು ಸಹಕಾರ ಹಾಲು ಒಕ್ಕೂಟದಿಂದ ನಡೆದ ಪಶುಗಳ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದ ಅವರು ಮಾತನಾಡಿ, ಹಾಲು ಕೊಡುವ ಹಸುಗಳಲ್ಲಿ ಅನೇಕ ರೀತಿಯ ಕಾಯಿಲೆಗಳು ಬರುತ್ತವೆ. ಅದಕ್ಕೆ ಮುಂಜಾಗೃತಾ ಕ್ರಮವಾಗಿ ಅನೇಕ ವಿಧಾನಗಳನ್ನು ರೈತರು ಅನುಸರಿಸಬೇಕು. ಹಾಲು ಒಕ್ಕೂಟ ಈಗಾಗಲೇ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಶು ಆರೋಗ್ಯ ತಪಾಸಣೆ ಹಾಗೂ ಔಷಧಿಗಳನ್ನು ರಿಯಾಯಿತಿ ಬೆಲೆಯಲ್ಲಿ ನೀಡಲಾಗುತ್ತಿದೆ. ಗುಣಮಟ್ಟದ ಹಾಲು ಸಂಗ್ರಹವಾಗಲು ಹಸುಗಳು ಆರೋಗ್ಯವಾಗಿರಬೇಕು ಎಂದು ಹೇಳಿದರು.
ಶಿಬಿರದಿಂದ ರೈತರಿಗೆ ಉಪಯೋಗ: ಬಮೂಲ್ ತಾಲೂಕು ಉಪವ್ಯವಸ್ಥಾಪಕ ಗೋಪಾಲ ಗೌಡ ಮಾತನಾಡಿ, ಬರಡು ರಾಸುಗಳು ಚಿಕಿತ್ಸೆ, ಕರುಗಳಿಗೆ ಜಂತು ನಿವಾರಣೆ ಔಷಧಿ, ಕೆಚ್ಚಲು ಬಾವು ನಿಯಂತ್ರಣದ ಬಗ್ಗೆ ಅರಿವು ಮೂಡಿಸಲಾಗಿದೆ. ಶುದ್ಧ ಮತ್ತು ಗುಣಮಟ್ಟದ ಹಾಲು ಉತ್ಪಾದನೆಗೆ ಸಮತೋಲನ ಆಹಾರ ಮಿಶ್ರಣದ ಮಾಹಿತಿಯನ್ನು ನೀಡಿದ್ದಾರೆ. ಪಶು ಆರೋಗ್ಯ ತಪಾಸಣೆಗೆ ಕೆಎಂಎಫ್ನ ಪಶುವೈದ್ಯರು ಮಹದೇವಪುರಕ್ಕೆ ಆಗಮಿಸಿರುವುದು ರೈತರಿಗೆ ಬಹಳಷ್ಟು ಉಪಯೋಗವಾಗಿದೆ ಎಂದು ತಿಳಿಸಿದರು.
ಹಸುಗಳ ಆರೋಗ್ಯಕ್ಕಾಗಿ ಶಿಬಿರ: ಮಹದೇವಪುರ ಹಾಲು ಉತ್ಪಾದಕರ ಸಹಕಾರ ಸಂಘದ ವ್ಯಾಪ್ತಿಯಲ್ಲಿ 650ಕ್ಕೂ ಹೆಚ್ಚು ಹಸುಗಳಿವೆ. 2000ಕ್ಕೂ ಹೆಚ್ಚು ಲೀಟರ್ ಹಾಲನ್ನು ಉತ್ಪಾದನೆ ಮಾಡಲಾಗುತ್ತಿದೆ. ಆದ್ದರಿಂದ ಹಸುಗಳ ಆರೋಗ್ಯ ಸುಧಾರಣೆಗಾಗಿ ಪಶು ಆರೋಗ್ಯ ತಪಾಸಣಾ ಶಿಬಿರವನ್ನು ಕೆಎಂಎಫ್ ಪಶು ವೈದ್ಯರ ಮೂಲಕ ನಡೆಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಚಂದ್ರಶೇಖರ್ ತಿಳಿಸಿದರು.
ಈ ಸಂದರ್ಭದಲ್ಲಿ ಬಮೂಲ್ ತಾಲೂಕು ಸಹಾಯಕ ವ್ಯವಸ್ಥಾಪಕ ಡಾ.ಆದರ್ಶ, ಪಶು ವೈದ್ಯಾಧಿಕಾರಿ ಡಾ.ಮನು, ವಿಸ್ತರಣಾಧಿಕಾರಿ ಅಶೋಕ್, ಕೆಎಂಎಫ್ ವೈದ್ಯರಾದ ಡಾ.ರಮೇಶ್, ಡಾ.ತಾರಾನಾಥ್, ಸಂಘದ ಅಧ್ಯಕ್ಷ ಉಮೇಶ್ ಬಿ.ಜಿ, ಉಪಾಧ್ಯಕ್ಷ ನಂಜೇಗೌಡ, ನಿರ್ದೇಶಕರಾದ ಕೋಡಿ ಮಲ್ಲೇಶಯ್ಯ, ಚಿಕ್ಕಣ್ಣ, ಮಲ್ಲೇಶಯ್ಯ, ಬಾಲಾಜಿ, ಹಾಲು ಪರೀಕ್ಷಕಿ ಚೈತ್ರಾ ಸೇರಿದಂತೆ ಅನೇಕರು ಹಾಜರಿದ್ದರು.