ನವದೆಹಲಿ: ಭಾರತದಲ್ಲಿ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ 13,387ಕ್ಕೆ ತಲುಪಿದೆ. ಕಳೆದ 24ಗಂಟೆಯಲ್ಲಿ ಒಂದು ಸಾವಿರ ಪಾಸಿಟಿವ್ ಪ್ರಕರಣಗಳ ವರದಿಯಾಗಿದೆ. ಈವರೆಗೆ ಒಟ್ಟು 437 ಮಂದಿ ಕೋವಿಡ್ 19 ವೈರಸ್ ಗೆ ಸಾವನ್ನಪ್ಪಿದ್ದಾರೆ. ಏತನ್ಮಧ್ಯೆ ಕೋವಿಡ್ ಸೋಂಕಿತರು ಹೆಚ್ಚಿನ ಪ್ರಮಾಣದಲ್ಲಿ ಚೇತರಿಸಿಕೊಳ್ಳುತ್ತಿರುವುದು ಯಶಸ್ಸಿನತ್ತ ಹೆಜ್ಜೆ ಹಾಕಿದಂತಾಗಿದೆ ಎಂದು ವರದಿ ತಿಳಿಸಿದೆ.
ಅಲ್ಲದೇ ಜಾಗತಿಕವಾಗಿ ಸೋಂಕಿತರು ಹಾಗೂ ಸಾವಿನ ಪ್ರಮಾಣ ಪರಿಗಣಿಸಿದರು ಕೂಡಾ ಭಾರತ ಗಮನಾರ್ಹ ಬೆಳವಣಿಗೆ ಸಾಧಿಸಿದೆ. ದೇಶದಲ್ಲಿ 6ಸಾವಿರದಿಂದ 13ಸಾವಿರದವರೆಗಿನ ಪ್ರಕರಣ ಹೆಚ್ಚಳವಾಗುವವರೆಗೆ ತೆಗೆದುಕೊಂಡ ದಿನ ನಿಧಾನವಾಗಿದೆ ಎಂದು ವರದಿ ಹೇಳಿದೆ.
ಅಮೆರಿಕ, ಬ್ರಿಟನ್ ಗಿಂತಲೂ ಮಿಗಿಲಾಗಿ ಭಾರತ ಹೆಚ್ಚಿನ ಸಂಖ್ಯೆಯ ಜನರನ್ನು ಪರೀಕ್ಷೆಗೆ ಒಳಪಡಿಸಿದೆ. ಭಾರತದಲ್ಲಿ ಕೋವಿಡ್ 19 ಸೋಂಕು ಪ್ರಕರಣ ದ್ವಿಗುಣಗೊಳ್ಳಲು ನಾಲ್ಕು ದಿನಗಳನ್ನು ತೆಗೆದುಕೊಂಡಿದ್ದರೆ, ನಂತರದಲ್ಲಿ ಅದು ಆರು ದಿನಗಳನ್ನು ತೆಗೆದುಕೊಂಡಿರುವುದಾಗಿ ವರದಿ ವಿವರಿಸಿದೆ.
ಏತನ್ಮಧ್ಯೆ ಅಮೆರಿಕದಲ್ಲಿ 24 ಗಂಟೆಯಿಂದ ಎರಡು ದಿನಗಳಲ್ಲಿಯೇ ಕ್ಷಿಪ್ರವಾಗಿ ಕೋವಿಡ್ ಸೋಂಕಿತರ ಪ್ರಕರಣ ಏಕಾಏಕಿ ಹೆಚ್ಚಳವಾಗಿದ್ದವು. ಇವೆಲ್ಲಕ್ಕಿಂತ ಹೆಚ್ಚಾಗಿ ಮುಖ್ಯವಾದ ಅಂಶವೆಂದರೆ ಭಾರತದಲ್ಲಿ ಸೋಂಕಿನ ಪ್ರಮಾಣ ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ ಒಂಬತ್ತು ಮಂದಿಯಂತಿದ್ದು, ಇದು ಜಾಗತಿಕವಾಗಿ 267 ಆಗಿದೆ ಎಂದು ತಿಳಿಸಿದೆ.
ಶೇಖಡವಾರು ಲೆಕ್ಕಾಚಾರದಲ್ಲಿಯೂ ಕೋವಿಡ್ ಸೋಂಕಿತರ ಚೇತರಿಕೆ ಸಂಖ್ಯೆ ಆಶಾದಾಯಕವಾಗಿದೆ. ಶುಕ್ರವಾರದಂದು ಕೋವಿಡ್ ಸೋಂಕಿತರಲ್ಲಿ ಚೇತರಿಸಿಕೊಂಡವರ ಸಂಖ್ಯೆ ಶೇ.13.06ರಷ್ಟಿದ್ದು, ಗುರುವಾರ ಶೇ.12.02ರಷ್ಟು, ಬುಧವಾರ ಶೇ.11.41ರಷ್ಟು, ಮಂಗಳವಾರ 9.99ರಷ್ಟಿದ್ದು, ಕಳೆದ 24ಗಂಟೆಯಲ್ಲಿ 260 ಕೋವಿಡ್ ರೋಗಿಗಳು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿರುವುದಾಗಿ ವರದಿ ಹೇಳಿದೆ.
ಗುರುವಾರದಂದು 183 ಮಂದಿ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿದ್ದಾರೆಂದು ವರದಿ ತಿಳಿಸಿದೆ. ಏಪ್ರಿಲ್ 20ರವರೆಗೆ ಲಾಕ್ ಡೌನ್ ಕಠಿಣವಾಗಿ ಮುಂದುವರಿಯಲಿದ್ದು, ಜಿಲ್ಲೆಗಳಲ್ಲಿ ವೈರಸ್ ಹಾಟ್ ಸ್ಪಾಟ್ ಎಂದು ಗುರುತಿಸಲ್ಪಟ್ಟ ಪ್ರದೇಶಗಳಲ್ಲಿ ಕೈಗಾರಿಕೆ, ಕಟ್ಟಡ ನಿರ್ಮಾಣ ಮತ್ತು ಉತ್ಪಾದನಾ ಚಟುವಟಿಕೆಗೆ ನಿರ್ಬಂಧ ವಿಧಿಸಲಾಗುವುದು ಎಂದು ತಿಳಿಸಿದೆ.