Advertisement

ಆಲಂಕಾರು ಗ್ರಾ.ಪಂ.ಗೆ ಸುಸಜ್ಜಿತ ತ್ಯಾಜ್ಯ ವಿಲೇವಾರಿ ಘಟಕ

11:35 PM Oct 24, 2019 | mahesh |

ಆಲಂಕಾರು: ಹಲವು ವರ್ಷಗಳಿಂದ ಆಲಂಕಾರು ಗ್ರಾಮ ಪಂಚಾಯತ್‌ಗೆ ಸವಾಲಾಗಿದ್ದ ಘನ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿದಿದೆ. ಗ್ರಾ.ಪಂ. ಸುಸಜ್ಜಿತ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಿಕೊಂಡಿರುವ ಕಾರಣ ತ್ಯಾಜ್ಯ ವಿಲೇವಾರಿ ಸರಾಗವಾಗಿದೆ. ಮುಂದಿನ ದಿನಗಳಲ್ಲಿ ಆಲಂಕಾರು ಸ್ವತ್ಛ ಗ್ರಾಮವಾಗಿ ಮೂಡಿಬರಲಿದೆ.

Advertisement

ಜಿ.ಪಂ. ನೈರ್ಮಲ್ಯ ಯೋಜನೆಯಡಿ ಈ ಘಟಕಕ್ಕೆ 15.97 ಲಕ್ಷ ರೂ. ಅನುದಾನ ನೀಡಿದೆ. ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡ ಸ್ಥಳೀಯಾಡಳಿತ 15 ಮೀ. ಉದ್ದ 6 ಮೀ. ಅಗಲದ ಸುಸಜ್ಜಿತ ಘಟಕವನ್ನು ಶೌಚಾಲಯದೊಂದಿಗೆ ನಿರ್ಮಿಸಿದೆ. ಈ ಘಟಕದಲ್ಲಿ ಹಸಿ ಕಸವನ್ನು ಸಾವಯವ ಗೊಬ್ಬರ ಮಾಡುವ ಉದ್ದೇಶ ಹೊಂದಿದ್ದು, ಕೆಲವೇ ದಿನಗಳಲ್ಲಿ ಯಂತ್ರೋಪಕರಣ ಅಳವಡಿಸಲಿದೆ.

8 ಕಂಪಾರ್ಟ್‌ಮೆಂಟ್‌
ಎಂಟು ಕಂಪಾರ್ಟ್‌ಮೆಂಟ್‌ಗಳಿರುವ ಈ ಘಟಕದಲ್ಲಿ ಒಣಕಸ, ಹಸಿಕಸ, ಪ್ಲಾಸ್ಟಿಕ್‌ ಕಸಗಳನ್ನು ಬೇರೆ ಬೇರೆಯಾಗಿ ವಿಂಗಡಿಸಿ ರಸಗೊಬ್ಬರಕ್ಕೆ ಸೂಕ್ತವಾಗುವಂತೆ ನವೀಕರಿಸಲಾಗುವುದು. ಪೇಟೆ, ಗ್ರಾಮೀಣ ಪ್ರದೇಶದ ಕಸಗಳನ್ನು ಘಟಕಕ್ಕೆ ಸಾಗಿಸುವ ಉದ್ದೇಶಕ್ಕೆ 4.25 ಲಕ್ಷ ರೂ. ಮೌಲ್ಯದ ಪಿಕಪ್‌ ವಾಹನ ಖರೀದಿಸಲಾಗಿದೆ. ಇದಕ್ಕಾಗಿ 3.25 ಲಕ್ಷ ರೂ. ಅನುದಾನವನ್ನು ಜಿ.ಪಂ. ನೀಡಿದ್ದು, ಉಳಿದ ಮೊತ್ತವನ್ನು ಗ್ರಾ.ಪಂ. ಭರಿಸಿದೆ.

ಇಬ್ಬರಿಗೆ ಉದ್ಯೋಗ
ಈ ಘಟಕ ನಿರ್ಮಾಣದಿಂದ ಗ್ರಾಮದ ಇಬ್ಬರಿಗೆ ಉದ್ಯೋಗ ಲಭ್ಯವಾಗಿದೆ. ಓರ್ವ ಚಾಲಕ ಹಾಗೂ ಓರ್ವ ಸಹಾಯಕ ಹುದ್ದೆಗಳು ಭರ್ತಿಯಾಗಿವೆ. ಈ ಬಗ್ಗೆ ಯಾವುದೇ ಅಧಿಕೃತ ನಿರ್ಣಯ ಕೈಗೊಳ್ಳದಿದ್ದರೂ ಘಟಕದ ಸಾಧಕ ಬಾಧಕಗಳನ್ನು ನೋಡಿಕೊಂಡು ಕ್ರಮ ಕೈಗೊಳ್ಳಲು ಸ್ಥಳೀಯಾಡಳಿತ ಚಿಂತನೆ ನಡೆಸಿದೆ. ಘಟಕ ನಿರ್ವಹಣೆಗಾಗಿ ಗ್ರಾಮಸ್ಥರನ್ನು ಸೇರಿಸಿಕೊಂಡು ಸಮಿತಿ ರಚಿಸಲು ನಿರ್ಣಯಿಸಲಾಗಿದೆ.

ಘಟಕಕ್ಕೆ ಹಾಕುವ ಕಸವನ್ನು ಹಸಿ ಕಸ, ಒಣ ಕಸ ಹಾಗೂ ಪ್ಲಾಸ್ಟಿಕ್‌ ಮುಕ್ತ ಕಸಗಳಾಗಿ ವಿಭಾಗಿಸಿ ಕೊಡಬೇಕಾಗುತ್ತದೆ. ಪ್ಲಾಸ್ಟಿಕ್‌ ನಿರ್ವಹಣೆಗೆ ಪ್ರತ್ಯೇಕ ಘಟಕ ಇರುವುದರಿಂದ ಪ್ಲಾಸ್ಟಿಕನ್ನು ಪ್ರತ್ಯೇಕ ವಾಗಿ ನೀಡಬೇಕಾಗುತ್ತದೆ. ಕಸವನ್ನು ಸುರಿ ಯುವವರೇ ಬೇರೆ ಬೇರೆ ವಿಭಾಗ ಗಳಾಗಿ ವಿಂಗಡಿಸಿ ಕೊಡ ಬೇಕಾಗಿರುವುದ ರಿಂದ ಘಟಕ ನಿರ್ವಹಣೆ ಗ್ರಾ.ಪಂ.ಗೆ ಸುಲಭ ವಾಗಲಿದೆ. ಇಲ್ಲಿ ಬಹು ಮುಖ್ಯವಾಗಿ ಕೋಳಿ ತ್ಯಾಜ್ಯ ನಿರ್ವಹಣೆ ಸ್ಥಳೀಯಾಡಳಿತಕ್ಕೆ ಬಿಡಿಸಲಾಗದ ಒಗಟಾಗಿದೆ.

Advertisement

ಸಮರ್ಪಕವಾಗಿ ಬಳಸಿಕೊಳ್ಳಬಹುದೇ?
ಕೆಲವು ವರ್ಷಗಳ ಹಿಂದೆ ಕೋಳಿ ತ್ಯಾಜ್ಯ ವಿಲೇವಾರಿಗಾಗಿ ಗ್ರಾ.ಪಂ. ಸುಸಜ್ಜಿತ ಇಂಗು ಗುಂಡಿಯೊಂದನ್ನು ನಿರ್ಮಿಸಿಕೊಟ್ಟಿತ್ತು. ಆದರೆ ಕೋಳಿ ವ್ಯಾಪಾರಿಗಳು ಇಂಗು ಗುಂಡಿಯ ಮುಚ್ಚಳವನ್ನು ತೆರೆಯದೆ ಗುಂಡಿಯ ಮೇಲಾºಗದಲ್ಲಿಯೇ ಕೋಳಿ ತ್ಯಾಜ್ಯ ಸುರಿದ ಪರಿಣಾಮ ಇಂಗು ಗುಂಡಿ ಕೋಳಿ ತ್ಯಾಜ್ಯದಿಂದಲೇ ಮುಚ್ಚಿ ಹೋಯಿತು. ಇದೀಗ ಅದೇ ಜಾಗದ ಬಳಿಯಲ್ಲೇ ಘನತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಿದ್ದು, ಜನತೆ ಇದನ್ನು ಸಮರ್ಪಕವಾಗಿ ಬಳಸಿಕೊಳ್ಳುವರೆ ಎನ್ನುವ ಪ್ರಶ್ನೆ ಮೂಡಿದೆ.

ಬೇಲಿ ಹಾಕಲಾಗಿದೆ: ಸುನಂದಾ ಬಾರ್ಕುಲಿ
ಇಂಗುಗುಂಡಿಗಳನ್ನು ನಿರ್ಮಿಸಿಕೊಂಡು ಕೋಳಿ ತ್ಯಾಜ್ಯ ವಿಲೇವಾರಿ ಮಾಡಬೇಕು. ಯಾವುದೇ ಕಾರಣಕ್ಕೂ ಗ್ರಾ.ಪಂ. ತ್ಯಾಜ್ಯ ಘಟಕದ ಬಳಿ ಕೋಳಿ ತ್ಯಾಜ್ಯ ಹಾಕಬಾರದು ಎಂದು ನಿರ್ಣಯಿಸಿ ಕೋಳಿ ವ್ಯಾಪಾರಿಗಳಿಗೆ ನೋಟಿಸ್‌ ಜಾರಿ ಮಾಡಿದ ಬಳಿಕ ಕೋಳಿ ತ್ಯಾಜ್ಯ ಹಾಕುವವರ ಸಂಖ್ಯೆ ಕಡಿಮೆಯಾಗಿದೆ. ಗ್ರಾ.ಪಂ.ನ ಜಾಗಕ್ಕೆ ಬೇಲಿ ಮತ್ತು ವ್ಯವಸ್ಥಿತ ಗೇಟ್‌ ನಿರ್ಮಿಸಿ ಬೀಗ ಜಡಿಯಲಾಗಿದೆ. ಗ್ರಾ.ಪಂ. ಪರವಾನಿಗೆ ನೀಡಿದವರಿಗೆ ಮಾತ್ರ ಒಳಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಶರವೂರು ವ್ಯಾಪ್ತಿಯ ರಸ್ತೆ ಬದಿಗಳಲ್ಲಿ ಕಸದ ಗೋಣಿ ಚೀಲಗಳು ಅಲ್ಲಲ್ಲಿ ಕಾಣಸಿಗುತ್ತಿವೆ. ಕಸ ಹಾಕುವವರನ್ನು ಪತ್ತೆ ಹಚ್ಚುವುದಕ್ಕಾಗಿ ತಂಡವೊಂದನ್ನು ರಚಿಸಿ ಗಸ್ತಿಗೆ ವ್ಯವಸ್ಥೆ ಮಾಡಲಾಗಿದೆ. ಕಸ ಹಾಕುವವರು ಯಾರೇ ಆಗಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪೇಟೆಯ ವ್ಯಾಪಾರಿಗಳಾಗಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಪರವಾನಿಗೆ ರದ್ದುಗೊಳಿಸಲಾಗುವುದು ಎಂದು ಆಲಂಕಾರು ಗ್ರಾ.ಪಂ. ಅಧ್ಯಕ್ಷೆ ಸುನಂದಾ ಬಾರ್ಕುಲಿ ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next