ಹಿರೇಕೆರೂರ: ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ. ಆದ್ದರಿಂದ, ವಿದ್ಯಾರ್ಥಿ ದಿಸೆಯಲ್ಲಿ ಕ್ರೀಡಾಕೂಟಗಳಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುವ ಮೂಲಕ ದೈಹಿಕ ಬೆಳವಣಿಗೆ ಹಾಗೂ ಮನೋ ಸದೃಢತೆ ಹೆಚ್ಚಿಸಿಕೊಳ್ಳಬೇಕೆಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲಾ ಅವರಣದಲ್ಲಿ ನಡೆದ ತಾಲೂಕು ಮಟ್ಟದ ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕ್ರೀಡೆಗಳು ಮಕ್ಕಳನ್ನು ಸದೃಢಗೊಳಿಸುತ್ತವೆ. ಅಲ್ಲದೇ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ, ದೈಹಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸೋಲು, ಗೆಲುವನ್ನು ಲೆಕ್ಕಿಸದೇ ಸ್ಪರ್ಧಾ ಮನೋಭಾವದಿಂದ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು. ಸೋಲಿನಿಂದ ಹತಾಶರಾಗದೇ, ಮತ್ತೆ ಗೆಲ್ಲುವ ಪ್ರಯತ್ನದೊಂದಿಗೆ ಮುನ್ನಡೆಯಬೇಕು. ಗೆದ್ದವರು ಮುಂದಿನ ಹಂತದಲ್ಲಿ ಪಾಲ್ಗೊಂಡು ವಿಜೇತರಾಗುವ ಛಲ ಹೊಂದಬೇಕೆಂದು ಕಿವಿಮಾತು ಹೇಳಿದರು.
ಸರ್ಕಾರ ಕ್ರೀಡಾಪಟುಗಳಿಗೆ ಹಲವು ಯೋಜನೆಗಳ ಮೂಲಕ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಎಲ್ಲ ಯೋಜನೆಗಳ ಪ್ರಯೋಜನ ಪಡೆದುಕೊಂಡು ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತರಬೇಕೆಂದರು. ಕ್ರೀಡಾಸಕ್ತರಿಗೆ ಅನಕೂಲವಾಗುವಂತೆ ತಾಲೂಕು ಕ್ರೀಡಾಂಗಣಕ್ಕೆ 2 ಕೋಟಿ ರೂ. ಮಂಜೂರಾಗಿದ್ದು, ಕೂಡಲೇ ಅಭಿವೃದ್ಧಿಪಡಿಸಿ ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.
ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪಠ್ಯದ ಜೊತಗೆ ಪಠ್ಯೇತರ ಚಟುವಟಕೆಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಕ್ರೀಡೆಯಲ್ಲಿ ಸೋಲು, ಗೆಲುವು ಸಾಮಾನ್ಯ. ಆದರೆ, ಪಾಲ್ಗೊಳ್ಳುವುದು ಮುಖ್ಯ. ವಿದ್ಯಾರ್ಥಿಗಳು ಕ್ರೀಡಾ ಆಸಕ್ತಿ ಹೆಚ್ಚಿಸಿಕೊಂಡು, ಕ್ರೀಡಾ ಕೌಶಲ್ಯಗಳನ್ನು ತಿಳಿದುಕೊಂಡು ಮಾಗದರ್ಶನ ಪಡೆದು ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕು ಎಂದರು.
ತೀರ್ಪುಗಾರರು ನ್ಯಾಯಯುತ ತೀರ್ಪುಗಳನ್ನು ನೀಡುವ ಮೂಲಕ ಉತ್ತಮ ಕ್ರೀಡಾಪಟುಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಮೂಲಕ ದೇಶಕ್ಕೆ ಉತ್ತಮ ಕ್ರೀಡಾಪಟುಗಳನ್ನು ನೀಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷ ಕಂಠಾಧರ ಅಂಗಡಿ, ಸೃಷ್ಟಿ ಪಾಟೀಲ, ಗುರುಶಾಂತ ಯತ್ತಿನಹಳ್ಳಿ, ಹನುಮಂತಪ್ಪ ಕುರುಬರ, ರಮೇಶ ಕೋಡಿಹಳ್ಳಿ, ಚಂದ್ರಕಲಾ ಕೋರಿಗೌಡ್ರ, ಶಿವಕುಮಾರ ತಿಪ್ಪಶೆಟ್ಟಿ, ಹೊನ್ನಪ್ಪ ಸಾಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ, ಮುಖ್ಯಶಿಕ್ಷಕ ಎನ್. ಸುರೇಶಕುಮಾರ, ಅಕ್ಷರ ದಾಸೋಹ ಅಧಿಕಾರಿ ಮಾರುತೆಪ್ಪ ಕೆ.ಎಚ್. ಸೇರಿದಂತೆ ಎಸ್‌ಡಿಎಂಸಿ ಪದಾಧಿಕಾರಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು, ವಿವಿಧ ಶಾಲೆಗಳ ಶಿಕ್ಷಕರು, ಕ್ರೀಡಾಪಟುಗಳು ಇದ್ದರು.