Advertisement

ಉಪ ಕಸುಬಿನಿಂದ ರೈತರ ಆರ್ಥಿಕ ಸ್ಥಿತಿ ಸುಧಾರಣೆ

10:53 AM Jan 07, 2019 | Team Udayavani |

ಸಿಂಧನೂರು: ರೈತರು ಕೃಷಿ ಜೊತೆಗೆ ಇದಕ್ಕೆ ಪೂರಕವಾದ ಉಪ ಕಸುಬುಗಳನ್ನು ಮಾಡುವುದು ಇಂದಿನ ಅಗತ್ಯವಾಗಿದೆ.
ಇದರಿಂದ ಕೃಷಿಯಲ್ಲಿ ಹಾನಿ ತಪ್ಪುವ ಜೊತೆಗೆ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತದೆ ಎಂದು ಪಶು ಸಂಗೋಪನೆ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್‌ ನಾಡಗೌಡ ಹೇಳಿದರು.

Advertisement

ನಗರದ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ರಾಜ್ಯಮಟ್ಟದ ಪಶು ಹಾಗೂ ಮತ್ಸ್ಯ ಮೇಳದ ಎರಡನೇ ದಿನ ರವಿವಾರ ಶ್ವಾನ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯದಲ್ಲಿ ರೈತರು ಸಾಲ ಮತ್ತು ಕೃಷಿಯಲ್ಲಿ ಹಾನಿ ಅನುಭವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಹೆಚ್ಚುತ್ತಿದೆ. ಇದನ್ನು ಗಮನಿಸಿ ರೈತರನ್ನು ಉಪ ಕಸುಬಿನತ್ತ ಆಕರ್ಷಿಸುವ ಉದ್ದೇಶದಿಂದ ಸರ್ಕಾರ ಪಶು ಮತ್ತು ಮತ್ಸ್ಯ ಮೇಳ ಆಯೋಜಿಸಿದೆ. ಇದನ್ನು ಪ್ರತಿ ವರ್ಷ ಆಯೋಜಿಸಲಾಗುವುದು. ಪ್ರತಿಯೊಬ್ಬ ರೈತರು ಇಲ್ಲಿ ಮಾಹಿತಿ ಪಡೆದು ಉಪ ಕಸುಬಿನಲ್ಲಿ ತೊಡಗಬೇಕು. ಅಂದಾಗ ಮಾತ್ರ ಸರ್ಕಾರದ ಪ್ರಯತ್ನ ಸಾರ್ಥಕವಾಗುವ ಜೊತೆಗೆ ರೈತರ ಕುಟುಂಬಗಳು ಆರ್ಥಿಕವಾಗಿ ಸದೃಢವಾಗಲು ಸಾಧ್ಯವಾಗುತ್ತದೆ ಎಂದರು.
 
ಶ್ವಾನ ಪ್ರದರ್ಶನದಲ್ಲಿ ರಾಜ್ಯದ ವಿವಿಧ ಜಿಲ್ಲೆ, ತಾಲೂಕು ಕೇಂದ್ರಗಳಿಂದ 20ಕ್ಕೂ ಹೆಚ್ಚು ತಳಿಗಳು ಭಾಗವಹಿಸಿವೆ. ಒಂದೊಂದು ಶ್ವಾನ ತಳಿಗಳು ವಿಭಿನ್ನವಾಗಿವೆ. ಪಶು-ಮತ್ಸ್ಯ ಮೇಳದಲ್ಲಿ ಹಸು, ರಾಸುಗಳು, ಮೀನುಗಳು, ಮೊಲ, ಹಂದಿ, ಕೋಳಿ ಪ್ರದರ್ಶನದಲ್ಲಿಡಲಾಗಿದೆ. ಯುವಕರು, ರೈತರು ಇದರ ಪ್ರಯೋಜನ ಪಡೆದು ಪಶು, ಮೀನು ಸಾಕಾಣಿಕೆಯಲ್ಲಿ ತೊಡಗಿದರೆ ನಿರುದ್ಯೋಗ ಸಮಸ್ಯೆ ನಿವಾರಣೆ ಆಗಲಿದೆ.

ಹಾಗಾಗಿ ನಾವು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪ್ರದರ್ಶನ ವೀಕ್ಷಣೆಗೆ ಆಹ್ವಾನಿಸಿದ್ದೇವೆ. ರೈತರು ಆಸಕ್ತಿ ವಹಿಸಿ ಪ್ರದರ್ಶನ ವೀಕ್ಷಣೆಗೆ ಆಗಮಿಸುತ್ತಿರುವುದು ನೆಮ್ಮದಿ ತಂದಿದೆ ಎಂದರು.

ಮುಂದಿನ ದಿನಗಳಲ್ಲಿ ನಮ್ಮ ಇಲಾಖೆಯಿಂದ ಇನ್ನೂ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಇದಕ್ಕೆ ಸಿಎಂ ಕುಮಾರಸ್ವಾಮಿ ಸಹಕಾರ ನೀಡಲಿದ್ದಾರೆ. ಪ್ರತಿವರ್ಷ ಮೇಳ ನಡೆಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತದೆ ಎಂದರು.

Advertisement

ಪಶು ಸಂಗೋಪನೆ ಇಲಾಖೆ ಆಯುಕ್ತ ಯು.ಪಿ.ಸಿಂಗ್‌ ಮಾತನಾಡಿ, ಈ ಬಾರಿ ವಿಭಿನ್ನ ರೀತಿಯಲ್ಲಿ ಇಲಾಖೆಯಿಂದ ಪಶು-ಮತ್ಸ್ಯ ಮೇಳ ಆಯೋಜಿಸಿ ರೈತರಿಗೆ ಪ್ರೋತ್ಸಾಹಿಸುವ ಕೆಲಸ ಮಾಡಿದ್ದೇವೆ. ಇನ್ನುಮುಂದೆ ರಾಜ್ಯದ ಎಲ್ಲ ಗ್ರಾಮಗಳಲ್ಲೂ ಉಪ ಕಸುಬುಗಳ ಕುರಿತು ರೈತರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುವುದು ಎಂದರು.

ಜೆಡಿಎಸ್‌ ವಕ್ತಾರ ಬಸವರಾಜ ನಾಡಗೌಡ, ಸಿಪಿಐ ನಾಗರಾಜ ಕಮ್ಮಾರ, ಪಿಎಸ್‌ಐ ಮಂಜುನಾಥ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next