Advertisement

ಆಗದ ಭೂಸ್ವಾಧೀನ : ಹೆಮ್ಮಾಡಿ ಜಂಕ್ಷನ್‌ ಅಭಿವೃದ್ಧಿಗೆ ತಡೆ!

08:49 PM Dec 11, 2019 | mahesh |

ಹೆಮ್ಮಾಡಿ: ಕುಂದಾಪುರ- ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಹೆಮ್ಮಾಡಿಯಲ್ಲಿ ವಾಹನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಇರುವುದರಿಂದ ಮತ್ತಷ್ಟು ಅಪಾಯಕಾರಿಯಾಗಿ ಪರಿಣಮಿಸಿದೆ. ಸಾವಿರಾರು ವಾಹನಗಳು ಸಂಚರಿಸುವ, ಕೊಲ್ಲೂರಿಗೆ ಸಂಪರ್ಕಿಸುವ ಪ್ರಮುಖ ಜಂಕ್ಷನ್‌ ಇದಾಗಿದ್ದು, ಇಲ್ಲಿ ಸುವ್ಯಸ್ಥಿತ ಜಂಕ್ಷನ್‌ ನಿರ್ಮಾಣದ ಬೇಡಿಕೆ ಯಿದೆ. ಆದರೆ ಅದಕ್ಕಾಗಿ ಸರಕಾರದಿಂದ ಇನ್ನೂ ಕೂಡ ಭೂಸ್ವಾಧೀನ ಪ್ರಕ್ರಿಯೆಯೇ ಆಗಿಲ್ಲದೆ ಇರುವುದರಿಂದ ಜಂಕ್ಷನ್‌ ಅಭಿವೃದ್ಧಿ ಕಾರ್ಯ ಮತ್ತಷ್ಟು ವಿಳಂಬಗೊಳ್ಳುವ ಸಾಧ್ಯತೆಗಳಿವೆ.

Advertisement

ಹೆಮ್ಮಾಡಿಯಲ್ಲಿ ಜಂಕ್ಷನ್‌ ಅಭಿವೃದ್ಧಿ ಪಡಿಸಲು ಹೆದ್ದಾರಿ ಬದಿಯಲ್ಲಿರುವ 8-10 ಮನೆಗಳ ತೆರವು ಪ್ರಕ್ರಿಯೆ ಆಗಬೇಕು. ಆದರೆ ಆ ಮನೆಯವರು ಸರಕಾರದಿಂದ ಸರಿಯಾದ ಪರಿಹಾರವೇ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ತೆರವು ಮಾಡಿಲ್ಲ. ಅದಾದ ಬಳಿಕವಷ್ಟೇ ಅಲ್ಲಿನ ಭೂಸ್ವಾಧೀನ ಪ್ರಕ್ರಿಯೆ ಆಗಬೇಕು. ಅದು ಕೂಡ ತ್ವರಿತಗತಿಯಲ್ಲಿ ನಡೆಯುವ ಸಾಧ್ಯತೆಯಿಲ್ಲ. ಇದರಿಂದ ಹೆಮ್ಮಾಡಿಯಲ್ಲಿ ಜಂಕ್ಷನ್‌ ನಿರ್ಮಾಣ ಕಾಮಗಾರಿ ಸದ್ಯಕ್ಕಂತೂ ಕಷ್ಟ.

ಜಂಕ್ಷನ್‌ ಯಾಕೆ?
ಕುಂದಾಪುರದಿಂದ ಬೈಂದೂರು ಕಡೆಗೆ ಸಂಚರಿಸುವ ವಾಹನಗಳಿಗೆ ದ್ವಿಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡ ಲಾಗಿದೆ. ಕೊಲ್ಲೂರು ರಸ್ತೆಯಿಂದ ಹೆಮ್ಮಾಡಿ ಲಕ್ಷ್ಮೀ ನಾರಾಯಣ ದೇವಸ್ಥಾನ ಹಾಗೂ ಗ್ರಾ.ಪಂ. ಕಚೇರಿ ಕಡೆಯ ರಸ್ತೆಗೆ ಪ್ರಯಾಣಿಸಬೇಕಾದರೆ ಪ್ರಯಾಸ ಪಡಬೇಕು. ಇನ್ನು ಪಾದಚಾರಿಗಳಂತೂ ರಸ್ತೆ ದಾಟಲು ಸಾಧ್ಯವೇ ಇಲ್ಲದಂತಾಗಿದೆ. ವಾಹನಗಳ ಸಂಖ್ಯೆ ಕಡಿಮೆಯಿದ್ದಾಗ ಹೇಗಾದರೂ ರಸ್ತೆ ದಾಟಬಹುದು. ಆದರೆ ವಾಹನಗಳ ಸಂಖ್ಯೆ ಹೆಚ್ಚಿರುವ ಬೆಳಗ್ಗೆ ಹಾಗೂ ಸಂಜೆ ವೇಳೆ ರಸ್ತೆ ದಾಟಲು ಪಾದಚಾರಿಗಳು ತುಂಬಾ ಕಷ್ಟ ಅನುಭವಿ ಸುತ್ತಿದ್ದಾರೆ. ಅದರಲ್ಲೂ ಶಾಲಾ – ಕಾಲೇಜು ಮಕ್ಕಳು, ಮಹಿಳೆಯರು, ವೃದ್ಧರ ಪಾಡಂತೂ ಹೇಳತೀರದಂತಾಗಿದೆ.

ವೇಗಕ್ಕೆ ಬೇಕು ಬ್ರೇಕ್‌
ಇದು ರಾಷ್ಟ್ರೀಯ ಹೆದ್ದಾರಿಯಾಗಿರು ವುದರಿಂದ ಪ್ರತಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಈಗ ಎರಡೂ ಕಡೆಗಳಿಂದ ಸಂಚಾರಕ್ಕೆ ತೆರೆದಿರು ವುದರಿಂದ ಸಮಸ್ಯೆಯಾಗುತ್ತಿದೆ. ಎರಡೂ ಕಡೆಯೂ ವೇಗ ತಡೆ ನಿಯಂತ್ರಕಗಳಾದ ಬ್ಯಾರಿಕೇಡ್‌ ಅಥವಾ ಇನ್ನಿತರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.

ಕೊಲ್ಲೂರು ಅಥವಾ ಹೆಮ್ಮಾಡಿ ಪಂಚಾಯತ್‌ ಕಡೆಯಿಂದ ಬರುವಂತಹ ವಾಹನಗಳು ಏಕಾಏಕಿ ಹೆದ್ದಾರಿ ಪ್ರವೇಶಿಸಿದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆಗಳು ಹೆಚ್ಚು. ಹಾಗಾಗಿ ಕೂಡಲೇ ಪೊಲೀಸ್‌ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿ ಬ್ಯಾರಿಕೇಡ್‌ ಅಳವಡಿಸಲಿ ಎಂಬುದು ಸ್ಥಳೀಯರ ಆಗ್ರಹವಾಗಿದೆ.

Advertisement

ಗೊಂದಲ, ಅಪಘಾತ
ಹೆಮ್ಮಾಡಿ ಜಂಕ್ಷನ್‌ ಇತಿಹಾಸ ಪ್ರಸಿದ್ಧ ಕೊಲ್ಲೂರು ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಪ್ರಮಖ ಜಂಕ್ಷನ್‌ ಆಗಿರುವ ಕಾರಣ ಪ್ರತಿ ನಿತ್ಯ ನೂರಾರು ವಾಹನಗಳು, ವಿಶೇಷ ದಿನಗಳಲ್ಲಿ ಸಾವಿರಾರು ವಾಹನಗಳು ಈ ಮಾರ್ಗವಾಗಿ ಸಂಚರಿಸುತ್ತವೆ. ಇದರಿಂದ ಯಾವ ಕಡೆಗಳಿಂದ ವಾಹನ ಬರುತ್ತದೋ ಎನ್ನುವ ಗೊಂದಲ ಉಂಟಾಗುತ್ತಿದ್ದು, ಪ್ರತಿ ನಿತ್ಯವೂ ಸಣ್ಣ ಪುಟ್ಟ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ.

ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ
ಕುಂದಾಪುರ, ತ್ರಾಸಿ, ಕೊಲ್ಲೂರು, ಲಕ್ಷ್ಮಿನಾರಾಯಣ ದೇವಸ್ಥಾನ ಹೀಗೆ 4 ಕಡೆಗಳಿಂದಲೂ ವಾಹನಗಳು ಸಂಚರಿಸುತ್ತವೆ. ಆದರೆ ಯಾವ ಕಡೆಯಿಂದಲೂ ವೇಗಕ್ಕೆ ತಡೆಯಿಲ್ಲ. ನಿಗದಿತ ಕೆಲಸ ನಿಮಿತ್ತ ರಸ್ತೆ ದಾಟುವ ಧಾವಂತದಲ್ಲಿ ಯಾವ ಕಡೆಯಿಂದ ವಾಹನ ಬರುತ್ತದೋ ಎಂದು ತಿಳಿಯದೇ ರಸ್ತೆ ದಾಟಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಅವಘಡ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ.
-ದಿನೇಶ್‌ ಕೊಠಾರಿ ಹೆಮ್ಮಾಡಿ, ವ್ಯಾಪಾರಸ್ಥರು

ಭೂಸ್ವಾಧೀನ ಆಗಬೇಕು
ಹೆಮ್ಮಾಡಿಯಲ್ಲಿ ಹೆದ್ದಾರಿ ಎರಡೂ ಕಡೆಗಳ ಕಾಮಗಾರಿ ಪೂರ್ಣಗೊಂಡಿದೆ. ಸಂಚಾರಕ್ಕೂ ಮುಕ್ತಗೊಳಿಸಲಾಗಿದೆ. ಆದರೆ ಇಲ್ಲಿ ಜಂಕ್ಷನ್‌ ಅಭಿವೃದ್ಧಿಪಡಿಸಲು ಭೂಸ್ವಾಧೀನ ಪ್ರಕ್ರಿಯೆ ಆಗಿಲ್ಲ. ಮನೆ ತೆರವು ಕಾರ್ಯ ಕೂಡ ನಡೆದಿಲ್ಲ. ಇದರಿಂದ ಜಂಕ್ಷನ್‌ ಕಾಮಗಾರಿ ವಿಳಂಬವಾಗುತ್ತಿದೆ. ಸರ್ವಿಸ್‌ ರಸ್ತೆಗೆ ಎಂಜಿನಿಯರ್‌ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ಮಂಜೂರಾತಿ ಸಿಕ್ಕಿಲ್ಲ.
-ಯೋಗೇಂದ್ರಪ್ಪ, ಐಆರ್‌ಬಿ ಪ್ರಾಜೆಕ್ಟ್ ಮ್ಯಾನೇಜರ್‌

- ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next