ಬೆಂಗಳೂರು: ಫೋಟೋ ಶೂಟ್ ನೆಪದಲ್ಲಿ ಮಾಡೆಲ್ ಒಬ್ಬರ ಜತೆ ಅಸಭ್ಯವಾಗಿ ವರ್ತಿಸಿದ ಆರೋಪ ಪ್ರಕರಣದಲ್ಲಿ ಫೋಟೋಗ್ರಾಫರ್‌ನನ್ನು ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಂಕರಮಠದ ನಿವಾಸಿ ಶರತ್‌ಕುಮಾರ್ (28) ಬಂಧಿತ ಆರೋಪಿ. ಮಹಾಲಕ್ಷ್ಮೀ ಲೇಔಟ್‌ನಲ್ಲಿ ಗೋಲ್ಡನ್ ಲೈಟ್ ಕ್ರಿಯೇಷನ್ಸ್ ಹೆಸರಿನ ಸ್ಟುಡಿಯೋ ಇಟ್ಟುಕೊಂಡಿರುವ ಶರತ್‌ಕುಮಾರ್ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿದ್ದರು.
ಜಾಹೀರಾತೊಂದಕ್ಕೆ ಮಾಡೆಲ್ ಅಗತ್ಯವಿದ್ದು, ಫೋಟೋಶೂಟ್ ಮಾಡಬೇಕಿದೆ ಎಂದು ನಂಬಿಸಿ ಜು.3ರಂದು ಸ್ಟುಡಿಯೋಗೆ ಕರೆದಿದ್ದರು. ಹೀಗಾಗಿ ಫೋಟೋಶೂಟ್‌ಗೆ ತೆರಳಿದ ವೇಳೆ ಸ್ಟುಡಿಯೋದಲ್ಲಿದ್ದವರನ್ನು ಹೊರಗೆ ಕಳುಹಿಸಿದ ಶರತ್‌ಕುಮಾರ್,
ಫೋಟೋ ಶೂಟ್ ನೆಪದಲ್ಲಿ ಖಾಸಗಿ ಅಂಗಗಳನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಆರೋಪಿ ವರ್ತನೆಯಿಂದ ಗಾಬರಿಗೊಂಡು ಕಿರುಚಿಕೊಂಡು ಹೊರಬಂದಿದ್ದೇನೆ ಎಂದು ಸಂತ್ರಸ್ತೆ ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿ ಶರತ್‌ಕುಮಾರ್ ಸಂತ್ರಸ್ತೆ ಮಾಡಿರುವ ಆರೋಪವನ್ನು ನಿರಾಕರಿಸಿದ್ದಾರೆ. ಆಕೆ ಸುಳ್ಳು ಆರೋಪ ಮಾಡಿರುವುದಾಗಿ ತಿಳಿಸಿದ್ದಾರೆ. ಸದ್ಯ, ಶರತ್‌ಕುಮಾರ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ತನಿಖೆ ಮುಂದುವರಿಸಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.