Advertisement

ಎಕ್ಸ್‌ಪ್ರೆಶನ್‌ನಲ್ಲಿ ಮನ ಸೆಳೆದ ಕಲಾಕೃತಿಗಳು 

06:00 AM Nov 02, 2018 | Team Udayavani |

ಸುತ್ತಲಿನ ಸಮಾಜದ ಯಾವುದೇ ಒಂದು ಘಟನೆ, ವಿಚಾರ ಯಾ ವಸ್ತುಗಳು ಮನದ ಮೇಲೆ ಎಂತಹ ಪ್ರಭಾವ ಬೀರಿದೆ ಎನ್ನುವುದನ್ನು ಕಲಾವಿದ ಕೃತಿಗಳ ಮೂಲಕ ಅಭಿವ್ಯಕ್ತಿಗೊಳಿಸುವುದೇ “ಎಕ್ಸ್‌ಪ್ರೆಶನಿಸಮ್‌’. ಇದು ಕಾಲಘಟ್ಟಕ್ಕೆ ಸಮನಾಗಿ ಸಮಕಾಲೀನ ಕಲೆಯೂ ಎನಿಸಬಹುದು. ಇದನ್ನೇ ಆಧರಿಸಿ ಉಡುಪಿಯ ಚಿತ್ರಕಲಾ ಮಂದಿರ ಕಲಾ ವಿದ್ಯಾಲಯ, ಜಂಗಮ ಮಠ, ಇಲ್ಲಿನ ಹನ್ನೊಂದು ವಿದ್ಯಾರ್ಥಿಗಳು ಈ ಬಾರಿ “ಎಕ್ಸ್‌ಪ್ರೆಶನ್‌ 18′ ಎನ್ನುವ ಕಲಾ ಪ್ರದರ್ಶನವನ್ನು ವಿಭೂತಿ ಆರ್ಟ್‌ ಗ್ಯಾಲರಿಯಲ್ಲಿ ನಾಲ್ಕು ದಿನಗಳ ಕಾಲ ಏರ್ಪಡಿಸಿದರು. 

Advertisement

ವಿದ್ಯಾರ್ಥಿಗಳು ಧಾರ್ಮಿಕ, ಸಾಂಸ್ಕೃತಿಕ, ಪೌರಾಣಿಕ ಮತ್ತು ಸಾಮಾಜಿಕ ವಿಷಯಗಳನ್ನು ಸಮಕಾಲೀನ ಚಿಂತನೆಗೆ ಸಮೀಕರಿಸಿ ಕ್ಯಾನ್ವಾಸಿನ ಮೇಲೆ ಅಭಿವ್ಯಕ್ತಿಗೊಳಿಸಿದ್ದರು. ಪ್ರಶಾಂತ್‌ ಅವರು ಭಾರತೀಯ ನಾರಿ ಕೃತಿಯಲ್ಲಿ ನಾರಿ ತನಗೆ ವಿಧಿಸಿದ ಕಟ್ಟುಪಾಡುಗಳ ನಡುವೆಯೂ ಹೊಂದಿಕೊಂಡು ಬಾಳುವ ಸಹನಾಮಯಿಯಾಗಿರುವುದನ್ನು ತೋರಿಸಿದರೆ, ಮೇಘಾ ಅವರ ಹೋಪ್ಸ್‌ ಆಫ್ ಟ್ರೇಡಿಷನ್‌ನಲ್ಲಿ ಸಂಪ್ರದಾಯ ಮತ್ತು ಆಧುನಿಕ ಸಮಾಜದ ಮುಖಾಮುಖೀ ಇದೆ. ಭರತ್‌ ಹಾವಂಜೆಯವರ ಮೈಂಡ್‌ ಸೆಟ್‌ ಕೃತಿಯಲ್ಲಿ ರೋಗಿಯ ಮನೋದೌರ್ಬಲ್ಯ ಮತ್ತು ವೈದ್ಯರ ಚಿಕಿತ್ಸೆಯ ನಡುವಿನ ಹಂತಗಳ ಅನಾವರಣವಾದರೆ, ಅಶ್ವತ್‌ ಕುಮಾರ್‌ ಅವರ ಆಂತರಿಕ ಮನಸ್ಸು ಕೃತಿಯಲ್ಲಿ ತನ್ನ ಮನಸ್ಸಿನಲ್ಲಿ ತನ್ನನ್ನು ಪ್ರತ್ಯೇಕಿಸಿ ತನ್ನನ್ನೇ ಅರಿಯಲು ಹೊರಟಿರುವ ವ್ಯಕ್ತಿ ಇದ್ದರೆ, ಪ್ರದೀಪ್‌ ಅವರ ಸ್ಟ್ರೆಸ್‌ ಬಿಯಾಂಡ್‌ ದ ವರ್ಡ್‌ ಇಂದಿನ ಒತ್ತಡದ ಬದುಕನ್ನು ಮಾರ್ಮಿಕವಾಗಿ ಹೇಳುತ್ತಿದೆ. ಮನೋಜ್‌ರವರು ಅಡ್ವೆಂಚರ್‌ ಕೃತಿಯಲ್ಲಿ ಗಂಗಾವತರಣಯುವ ಮನಸ್ಸಿನ ಸಾಧನೆಗೆ ಪ್ರೇರಕ ಶಕ್ತಿಯಾಗಿರುವುದನ್ನು ಬಿಂಬಿಸಿದರೆ, ತೇಜ್‌ರಾಜ್‌ ಇನ್‌ ದ ಟೆಂಪಲ್‌ ಕೃತಿಯಲ್ಲಿ ಶಿಲ್ಪ ಕಲಾಕೃತಿಗಳು ತನ್ನ ಮನವನ್ನು ಪ್ರಭಾವಿಸಿದ ರೀತಿಯನ್ನು ಅಭಿವ್ಯಕ್ತಿಗೊಳಿಸಿದ್ದಾರೆ. ಹಾಗೆಯೇ ಕೀರ್ತಿಯವರ ಮೈ ವರ್ಲ್ಡ್, ಜಾನ್ಹವಿಯವರ ಕಥಕ್ಕಳಿ, ಪಾರ್ವತಿ ಮತ್ತು ರಾಘವೇಂದ್ರ ಅವರ ಮಿನಿಯೇಚರ್‌ ಕೃತಿಗಳ ಜೊತೆಗೆ ಭಾರತೀಯ ಜನಪದ, ಸಾಂಪ್ರದಾಯಿಕ, ಕಂಬಳ, ಸ್ಟಿಲ್‌ ಲೈಫ್, ನೈಜ ಮತ್ತು ಸೃಜನಶೀಲ ಕೃತಿಗಳನ್ನೂ ಪ್ರದರ್ಶಿಸಿದ್ದರು. 

ಕೆ. ದಿನಮಣಿ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next