Advertisement

ಶಬರಿಮಲೆ: ಮಹಿಳಾ ಯಾತ್ರಿಗಳಿಗೆ ಪ್ರತ್ಯೇಕ ಸರತಿ ಸಾಲು ಕಷ್ಟ

08:00 AM Oct 03, 2018 | Team Udayavani |

ತಿರುವನಂತಪುರ: ಶಬರಿ ಮಲೆಯ ಅಯ್ಯಪ್ಪ ಸ್ವಾಮಿ ದೇಗುಲವನ್ನು ಸಂದರ್ಶಿಸುವ ಮಹಿಳೆಯರಿಗೆ  ಹೆಚ್ಚು ಉತ್ತಮ ಸೌಲಭ್ಯಗಳನ್ನು ಕಲ್ಪಿಸಲು ನಿರ್ಧರಿಸಲಾಗಿದೆಯಾದರೂ ಅವರಿಗೆ ಪ್ರತ್ಯೇಕ ಸರತಿಸಾಲನ್ನು ಕಲ್ಪಿಸುವುದು ಕಷ್ಟವೆಂದು ರಾಜ್ಯ ಸರಕಾರ ಹೇಳಿದೆ. ಎಲ್ಲ ವಯೋಮಾನದ ಮಹಿಳೆಯರಿಗೆ ಶಬರಿಮಲೆಗೆ ಪ್ರವೇಶಾವಕಾಶ ಕಲ್ಪಿಸಿ ಸುಪ್ರೀಂಕೋರ್ಟು ನೀಡಿದ ತೀರ್ಪನ್ನನುಸರಿಸಿ ಮಹಿಳಾ ಯಾತ್ರಿಗಳಿಗೆ ಕಲ್ಪಿಸಬೇಕಾದ ವಿವಿಧ ಏರ್ಪಾಡುಗಳ ಕುರಿತು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದ ಉನ್ನತಾಧಿಕಾರದ ಸಮಿತಿ ಸೋಮವಾರ ಇಲ್ಲಿ ಚರ್ಚೆ ನಡೆಸಿತು. ದೇಗುಲ ಸಮುಚ್ಚಯದ ಸನ್ನಿಧಾನಮ್‌ನಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸರತಿ ಸಾಲಿನ ವ್ಯವಸ್ಥೆಯನ್ನು ಜಾರಿಗೆ ತರಲು ಕಷ್ಟವೆಂದು ಸಭೆಯಲ್ಲಿ ಅಭಿಪ್ರಾಯಪಡಲಾಯಿತು.

Advertisement

‘ಭಕ್ತರು ದರ್ಶನಕ್ಕಾಗಿ 8-10 ತಾಸುಗಳ ಕಾಲ ಸುದೀರ್ಘ‌ ಸಾಲುಗಳಲ್ಲಿ ಕಾಯಬೇಕಾಗುತ್ತದೆ ಮತ್ತು ಮಹಿಳಾ ಯಾತ್ರಿಗಳು ಕೂಡ ಇದಕ್ಕೆ ಸಿದ್ಧರಾಗಬೇಕಾಗುತ್ತದೆ. ಈ ವಿಚಾರದಲ್ಲಿ ನಮಗೆ ಏನೂ ಮಾಡಲು ಸಾಧ್ಯವಿಲ್ಲ. ಉದ್ದನೆಯ ಸರತಿ ಸಾಲುಗಳಲ್ಲಿ ತಾಸುಗಟ್ಟಲೆ ಕಾಯಲು ಸಿದ್ಧರಿರುವರು ಮಾತ್ರ ಶಬರಿಮಲೆಗೆ ಬರಬೇಕು’ ಎಂದು ದೇವಸ್ವಂ ಸಚಿವ ಕದಕಂಪಲ್ಲಿ ಸುರೇಂದ್ರನ್‌ ಅವರು ಸಭೆಯ ಬಳಿಕ ಸುದ್ದಿಗಾರರೊಂದಿಗೆ ಹೇಳಿದರು.

ಮಹಿಳಾ ಯಾತ್ರಿಗಳ ಜತೆ ಹೆಚ್ಚಾಗಿ ಅವರ ಪುರುಷ ಸಂಬಂಧಿಕರು ಹಾಗೂ ಇತರ ಭಕ್ತರು ಇರುತ್ತಾರೆ. ಪ್ರತ್ಯೇಕ ಸರತಿ ಸಾಲು ಕಲ್ಪಿಸಿದಲ್ಲಿ ಅವರು ತಮ್ಮ ಕುಟುಂಬ ಸದಸ್ಯರಿಂದ ಬೇರ್ಪಡುವ ಸಾಧ್ಯತೆಯಿದೆ ಎಂದ ಸಚಿವರು, ಆದರೆ ಮಹಿಳಾ ಯಾತ್ರಿಗಳಿಗೆ ಪ್ರತ್ಯೇಕ ವಾಶ್‌ರೂಮ್‌ ಮತ್ತು ಸ್ನಾನಘಟ್ಟಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.

ಮಹಿಳಾ ಯಾತ್ರಿಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಹಿನ್ನೆಲೆಯಲ್ಲಿ ಮಹಿಳಾ ಪೊಲೀಸ್‌ ಸಿಬಂದಿಯ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಅಲ್ಲದೆ ದೇಗುಲ ಸಮುತ್ಛಯಕ್ಕೆ ಸಾಗುವ ಹಾದಿಯಲ್ಲಿ ಇನ್ನಷ್ಟು ಸಿಸಿಟಿವಿ ಕೆಮರಾಗಳನ್ನು ಅಳವಡಿಸಲಾಗುವುದು. ಅವಶ್ಯವೆನಿಸಿದರೆ ‘ಪದಿನಾಟ್ಟಂ ಪದಿ’ (18 ಮೆಟ್ಟಿಲುಗಳು)ಯಲ್ಲಿ ಮಹಿಳಾ ಪೊಲೀಸ್‌ ಸಿಬಂದಿಯನ್ನು ನಿಯೋಜಿಸಲಾಗುವುದು ಎಂದವರು ಹೇಳಿದರು. ಮುಖ್ಯ ಕಾರ್ಯದರ್ಶಿ ಟಾಮ್‌ ಜೋಸ್‌, ಮುಖ್ಯಮಂತ್ರಿಯವರ ಖಾಸಗಿ ಕಾರ್ಯದರ್ಶಿ ಎಂವಿ ಜಯರಾಜನ್‌, ತಿರುವಾಂಕೂರು ದೇವಸ್ವಂ ಮಂಡಲಿ ಸದಸ್ಯ ಕೆಪಿ ಶಂಕರದಾಸ್‌ ಮತ್ತು ಡಿಜಿಪಿ ಲೋಕನಾಥ್‌ ಬೆಹರಾ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ರಾಜ್ಯವ್ಯಾಪಿ ಚಳವಳಿ: ಬಿಜೆಪಿ
ಇದೇ ಸಮಯ ರಾಜ್ಯ ಬಿಜೆಪಿ ಅಧ್ಯಕ್ಷ ಎಸ್‌,ಶ್ರೀಧರನ್‌ ಪಿಳ್ಳೆ ಅವರು ಶಬರಿಮಲೆ ಭಕ್ತರ ಹಿತಾಸಕ್ತಿಗಳ ರಕ್ಷಣೆಗಾಗಿ ಪಕ್ಷ ರಾಜ್ಯವ್ಯಾಪಿ ಚಳವಳಿಯೊಂದನ್ನು ಆರಂಭಿಸಲು ಉದ್ದೇಶಿಸಿದೆ. ಸುಪ್ರೀಂಕೋರ್ಟಿನ ತೀರ್ಪಿನ ನೆಪದಲ್ಲಿ ಶಬರಿಮಲೆಯನ್ನು ನಾಶಪಡಿಸುವ ಸಿಪಿಎಂ ಯತ್ನಗಳನ್ನು ತಡೆಯಲು ಬಿಜೆಪಿ ಕ್ರಮಗಳನ್ನು ಕೈಗೊಳ್ಳಲಿದೆ. ಬೆಟ್ಟ ದೇಗುಲದ ಮಹತ್ವ ಹಾಗೂ ವಿಶಿಷ್ಟ ಅಂಶಗಳ ಕುರಿತು ಕೋರ್ಟಿಗೆ ಮನವರಿಕೆ ಮಾಡಲು ಸರಕಾರ ವಿಫ‌ಲವಾದ್ದರಿಂದಲೇ ಇಂಥ ತೀರ್ಪು ಹೊರಬಿದ್ದಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next