Advertisement

ಜಿಲ್ಲೆಗೆ ದೊರೆತ ಮಹತ್ವದ ಸ್ಥಾನಗಳು

11:31 AM Apr 11, 2018 | |

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯ-ದೇಶದ ರಾಜಕೀಯ ರಂಗಕ್ಕೆ ಮಹಾ ಸಾಧಕರನ್ನು ನೀಡಿದೆ. (ರಾಜತಾಂತ್ರಿಕವಾಗಿ, ಉದ್ಯಮಿಗಳಾಗಿ, ರಾಯಭಾರಿಗಳಾಗಿ, ಆಡಳಿತಗಾರರಾಗಿ ಅನೇಕರು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಮಿಂಚಿದ್ದಾರೆ- ಮಿಂಚುತ್ತಿದ್ದಾರೆ.)ಕರ್ನಾಟಕ (ಮೊದಲು ಮೈಸೂರು – ಅದಕ್ಕೂ ಮೊದಲು ಸ್ವಲ್ಪ ಭಾಗ ಮದ್ರಾಸ್‌ ಪ್ರಸಿಡೆನ್ಸಿ) ವಿಧಾನಸಭೆಗೆ ಆಯ್ಕೆಯಾಗಿ ಇಲ್ಲಿನ ರಾಜಕೀಯ ನಾಯಕರು- ಮುತ್ಸದ್ದಿಗಳಲ್ಲಿ ಅನೇಕ ಮಂದಿ ಮಹತ್ವದ ಹುದ್ದೆಗಳನ್ನು ಪಡೆದಿದ್ದಾರೆ. ವಿಧಾನಸಭೆಗೆ ಆಯ್ಕೆಯಾಗಿಯೂ ಅವರ ಪಕ್ಷ ಅಧಿಕಾರಕ್ಕೆ ಬರದೆ ಸಚಿವ ಸ್ಥಾನ ಕಳೆದುಕೊಂಡವರೂ ಇದ್ದಾರೆ. ದೊರೆತ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಮಿಂಚಿದವರೂ ಸಾಕಷ್ಟು ಮಂದಿ ಇದ್ದಾರೆ. 

Advertisement

ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಬಂಟ್ವಾಳ ವೈಕುಂಠ ಬಾಳಿಗಾ (1895-1968) ಕಾನೂನು ಸಚಿವರಾಗಿದ್ದರು; ಬಳಿಕ ಮೈಸೂರು ವಿಧಾನಸಭೆಯ ಸ್ಪೀಕರ್‌ (1962-68) ಸ್ಪೀಕರ್‌ ಆಗಿದ್ದರು. ಎಂ. ವೀರಪ್ಪ ಮೊಯಿಲಿ ಮತ್ತು ಡಿ. ವಿ. ಸದಾನಂದ ಗೌಡ ಅವರು ಕರ್ನಾಟಕದ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದವರು. ಅದಕ್ಕೂ ಮೊದಲು ಉಭಯ ರಾಜ್ಯಗಳಲ್ಲಿ ಎ.ಬಿ. ಶೆಟ್ಟಿ ಸಚಿವರಾಗಿದ್ದರು. ಆಗಿನ ಪಾಣೆಮಂಗಳೂರು ಕ್ಷೇತ್ರದಿಂದ ಆಯ್ಕೆಯಾಗಿದ್ದ ಡಾ| ಕೆ. ನಾಗಪ್ಪ ಆಳ್ವ 1957-62ರಲ್ಲಿ ಆರೋಗ್ಯ ಸಚಿವರಾಗಿದ್ದರು. ಕಾರ್ಕಳದಿಂದ ಕೆ.ಕೆ. ಹೆಗ್ಡೆ ಅವರು ಸಚಿವರಾಗಿದ್ದರು.

ದೇವರಾಜ ಅರಸು ಸಂಪುಟದಲ್ಲಿ ಪುತ್ತೂರಿನಿಂದ ಎ. ಶಂಕರ ಆಳ್ವ ಸಚಿವರಾಗಿದ್ದರೆ 1967ರಲ್ಲಿ ವಿಠಲದಾಸ ಶೆಟ್ಟಿ ಸಹಕಾರ, ಆಹಾರ ಇಲಾಖೆಗಳನ್ನು ಹೊಂದಿದ್ದರು. ಅರಸು, ಗುಂಡೂರಾವ್‌, ವೀರೇಂದ್ರ ಪಾಟೀಲ್‌, ಬಂಗಾರಪ್ಪ ಸಂಪುಟದಲ್ಲಿ ವೀರಪ್ಪ ಮೊಯಿಲಿ ಸಚಿವರಾಗಿ ದ್ದರು. ಉಡುಪಿ ಕ್ಷೇತ್ರ ದಿಂದ ಆಯ್ಕೆಯಾದ ಮನೋರಮಾ ಮಧ್ವರಾಜ್‌, ಮಂಗಳೂರು ಕ್ಷೇತ್ರದ ಪಿ.ಎಫ್‌. ರಾಡ್ರಿಗಸ್‌ ಮತ್ತು ಬ್ಲೇಸಿಯಸ್‌ ಡಿ’ಸೋಜಾ, ಜನತಾದ ಆಳ್ವಿಕೆ ಸಂದರ್ಭ ಮೂಡಬಿದಿರೆಯಿಂದ ಕೆ. ಅಮರನಾಥ ಶೆಟ್ಟಿ, ಬ್ರಹ್ಮಾವರ
ದಿಂದ ಆಯ್ಕೆಯಾದ ಕೆ. ಜಯಪ್ರಕಾಶ್‌ ಹೆಗ್ಡೆ, ಸುರತ್ಕಲ್‌ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿ. ಸುಬ್ಬಯ್ಯ ಶೆಟ್ಟಿ; ಜೆ. ಕೃಷ್ಣ ಪಾಲೆಮಾರ್‌ ಅವರು ವಿವಿಧ ಇಲಾಖೆಗಳ ಸಚಿವರಾಗಿ ಸೇವೆ ಸಲ್ಲಿಸಿದವರು. 

2013ರಲ್ಲಿ ಸಿದ್ದರಾಮಯ್ಯ ಅವರ ಸರಕಾರದಿಂದ ಮೂಡಬಿದಿರೆಯಿಂದ ಕೆ. ಅಭಯಚಂದ್ರ ಜೈನ್‌, ಕಾಪು ಶಾಸಕ ವಿನಯಕುಮಾರ್‌ ಸೊರಕೆ ಸಚಿವರಾಗಿದ್ದರು. ಈಗ ಸರಕಾರದಲ್ಲಿ ಮಂಗಳೂರು (ಉಳ್ಳಾಲ) ಕ್ಷೇತ್ರದ ಯು. ಟಿ. ಖಾದರ್‌, ಉಡುಪಿ ಕ್ಷೇತ್ರದ ಪ್ರಮೋದ್‌ ಮಧ್ವರಾಜ್‌ ಅವರು ಸಚಿವ ರಾಗಿದ್ದಾರೆ. ಬಂಟ್ವಾಳ ಕ್ಷೇತ್ರದಿಂದ ಒಂದು ಬಾರಿ ಬಿ. ನಾಗರಾಜ ಶೆಟ್ಟಿ ಸಚಿವರಾಗಿದ್ದರು.

ಬಂಟ್ವಾಳದಿಂದ ಆರು ಬಾರಿ ಆಯ್ಕೆಯಾಗಿರುವ ಬಿ. ರಮಾನಾಥ ರೈ ಅವರು ಮೊಯಿಲಿ ಸಂಪುಟದಲ್ಲಿ ಸಚಿವರಾಗಿ ಸೇರ್ಪಡೆಯಾದರು. ಈಗ ಸಿದ್ದರಾಮಯ್ಯ ಸರಕಾರದಲ್ಲಿ ಅರಣ್ಯ, ಪರಿಸರ ಇಲಾಖೆಯ ಸಚಿವರಾಗಿದ್ದಾರೆ. ಡಾ| ವಿ.ಎಸ್‌. ಆಚಾರ್ಯ, ಕೋಟ ಶ್ರೀನಿವಾಸ ಪೂಜಾರಿ, ಬಿ.ಎ. ಮೊಯಿದಿನ್‌ ಅವರು ಸಚಿವರಾಗಿ ಸೇವೆ ಸಲ್ಲಿಸಿದ ಸಂದರ್ಭ ವಿಧಾನ ಪರಿಷತ್‌ ಸದಸ್ಯರಾಗಿದ್ದರು .

Advertisement

ಅಂದ ಹಾಗೆ …
ಡಾ| ಕೆ. ನಾಗಪ್ಪ ಆಳ್ವ ಮತ್ತು ಅವರ ಪುತ್ರ ಡಾ| ಜೀವರಾಜ ಆಳ್ವ ಅವರು ಸಚಿವರಾಗಿದ್ದರು. ನಾಗಪ್ಪ ಆಳ್ವ ಆಗಿನ ಪಾಣೆಮಂಗಳೂರಿನಿಂದ; ಜೀವರಾಜ ಆಳ್ವ ಬೆಂಗಳೂರಿನ ಜಯಮಹಲ್‌ನಿಂದ ಆಯ್ಕೆಯಾಗಿದ್ದರು. ಇಬ್ಬರೂ ವೈದ್ಯರು. ಉಡುಪಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಮನೋರಮಾ ಮಧ್ವರಾಜ್‌ ಹಾಗೂ ಪುತ್ರ ಪ್ರಮೋದ್‌ ಮಧ್ವರಾಜ್‌ ಸಚಿವರಾಗಿರುವುದು ಜಿಲ್ಲೆಯ ಸಚಿವ ಕುಟುಂಬಕ್ಕೆ ಸಂಬಂಧಿಸಿದ ಇನ್ನೊಂದು ದೃಷ್ಟಾಂತ.

 ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next