Advertisement

ಆಸನಗಳೊಂದಿಗೆ ಯೋಗದ ಮಹತ್ವ ಅರಿಯೋಣ

02:53 AM Jun 21, 2021 | Team Udayavani |

ಯೋಗಾಸನಗಳ ಮಹತ್ವ ಜಗದ್ವಿಖ್ಯಾತ ವಾಗುತ್ತಿರುವುದು ಶುಭಕರವೇ. ಸನಾತನ ಸಂಸ್ಕೃತಿಯ ವಿಚಾರವೊಂದು ದೇಶ ವಿದೇಶಗಳ ಮಂದಿಗೆ ಪ್ರಿಯವಾಗುತ್ತಿರುವುದು, ನಾನಾ ಕಾಯಿಲೆಗಳಿಗೆ ಔಷಧವಾಗಿ ಪರಿಣಮಿಸಿರುವುದು ಭಾರತೀಯರಾದ ನಮಗೆಲ್ಲ ಸಂತಸ ತರುವ ವಿಚಾರವೇ ಸರಿ. ಇಂದು ವಿಶ್ವಾದ್ಯಂತ ಯೋಗ ಥೆರಪಿಗಳು, ಯೋಗ ಸೆಂಟರ್‌ಗಳು, ಉಚಿತ ಯೋಗ ಶಿಬಿರಗಳು.. ಹೀಗೆ ಹತ್ತು ಹಲವಾರು ರೀತಿಯಲ್ಲಿ ಯೋಗ ವಿಚಾರಗಳು ನಡೆಯುತ್ತಿವೆ ಎಂದರೆ ಅದಕ್ಕೆ ಕಾರಣ ಭಾರತ.

Advertisement

ವಿಷಯ ಅದಲ್ಲ. ಬದಲಾಗಿ ಇಂದು ಯೋಗ ಎನ್ನುವುದನ್ನು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿಕೊಂಡು ಅದರ ಜಾಗದಲ್ಲಿ ಬರೇ ಆಸನಗಳನ್ನಷ್ಟೇ ಎತ್ತಿಹಿಡಿದಿರುವುದು ಅದೆಷ್ಟು ಸಮಂಜಸವೆಂಬುದು?! ಅಂದರೆ ವಿಶಾಲಾರ್ಥದ ಯೋಗವನ್ನು ಬರೇ ದೈಹಿಕ ಕಸರತ್ತಿಗೆ ಇಂದು ಸೀಮಿತಗೊಳಿಸಿರುವುದು ನಿಜಕ್ಕೂ ಸರಿಯಾದ ಬೆಳವಣಿಗೆ ಎನ್ನಿಸದು. ಇದು ನಾವೇ ಯೋಗವನ್ನು ಸಂಕುಚಿತಗೊಳಿಸಿದ ಹಾಗೆ. ಯೋಗ ಶಿಬಿರವಿದೆ ಎಂದು ಎಲ್ಲರನ್ನು ಕೂಡಿ ಹಾಕಿ ನಡೆಸುವ ಇಂದಿನ ಬಹುತೇಕ ಶಿಬಿರದೊಳಗೂ ಇಂದು ಯೋಗಾಸನಗಳನ್ನಷ್ಟೇ ಹೇಳಿಕೊಡಲಾಗುತ್ತಿದೆ ಎಂಬುದು ಸತ್ಯ.ಯೋಗಾಸನಗಳು ಯೋಗ ಎಂಬ ಮಹತ್ತರವಾದ ಸಮುದ್ರದ ಒಂದು ಸಣ್ಣ ಹನಿಯಷ್ಟೇ ಎಂಬ ಸಣ್ಣ ಸೂಚನೆಯೂ ಕೂಡ ಇಲ್ಲಿ ಇದ್ದಂತಿಲ್ಲ!

ಹೌದು, ಯೋಗ ಎಂದರೆ ಬರೇ ಯೋಗಾ ಸನವಷ್ಟೇ ಅಲ್ಲ ಎಂಬುದನ್ನು ನಾವು ಮೊದಲು ಅರಿತುಕೊಳ್ಳಬೇಕಿದೆ. ಶಾಬ್ದಿಕವಾಗಿ ನೋಡುವುದಾದರೆ “ಯೋಗ’ ಎನ್ನುವ ಪದವು ಸಂಸ್ಕೃತದ ಯಜು ಎಂಬ ಶಬ್ದದಿಂದ ಹೊರಬಿದ್ದಿದೆ. ಇದರ ಅರ್ಥ ಕೂಡು, ಒಂದಾಗು ಎಂದು. ಇಲ್ಲಿ ಒಂದಾಗು ಎಂದರೆ ದೇವರ ಜತೆ ಒಂದಾಗು ಎಂದರ್ಥ. ವಿಸ್ತಾರವಾಗಿ ಹೇಳುವುದಾದರೆ ಯೋಗವು ಮನಸ್ಸು ಹಾಗೂ ದೇಹ; ಮನುಷ್ಯ ಹಾಗೂ ಪ್ರಕೃತಿಯನ್ನು ಸೇರಿಸುವ, ಒಂದಾಗಿಸುವ ಒಂದು ಸಾಧನ. ಭೌತಿಕದಿಂದ ಅಭೌತಿಕದೆಡೆಗೆ ನಡೆಸುವ ಪಯಣಕ್ಕೆ ಈ ಯೋಗವೇ ಮಾರ್ಗದರ್ಶಕ. ಮನಸ್ಸು-ದೇಹಗಳನ್ನು ಲಯದೊಳಗೆ ತಂದುಕೊಂಡು, ಅವುಗಳ ನಡುವೆ ಒಂದು ತಾದಾತ್ಮéವನ್ನು ಬೆಸೆದು ಬ್ರಹ್ಮಜ್ಞಾನವನ್ನು ಪಡೆಯಲು ಅನುವಾಗಿಸುವುದೇ ಯೋಗದ ಹಿಂದಿರುವ ಬಲು ದೊಡ್ಡ ಉದ್ದೇಶ. ಇದರಲ್ಲಿ ಸಂಪೂರ್ಣತೆಯನ್ನು ಸಾಧಿಸುವುದು ಜನಸಾಮಾನ್ಯರಿಗೆ ತುಸು ಕಷ್ಟವಿರಬಹುದು, ತುಸು ತ್ರಾಸದಾಯಕ ಎಂದೆನ್ನಿಸಲೂಬಹುದು. ಆದರೆ ಅಸಾಧ್ಯವಂತೂ ಅಲ್ಲವೇ ಅಲ್ಲ. ಇದರಲ್ಲಿ ಸಂಪೂರ್ಣತೆಯನ್ನು ಸಾಧಿಸಿದವನು ಬ್ರಹ್ಮ ಜ್ಞಾನವನ್ನು ಪಡೆಯುತ್ತಾನೆ. ಅಧ್ಯಾತ್ಮದ ಸೂಕ್ಷ್ಮ ಸತ್ಯವನ್ನು ಅರಿತುಕೊಳ್ಳುತ್ತಾನೆ. ಯೋಗವನ್ನು ಹಿಡಿದು ಪರಿಪೂರ್ಣತೆಯನ್ನು ಪಡೆಯುವ ಸಾಧಕನೇ ಯೋಗಿ ಎಂದೆನ್ನಿಸಿಕೊಳ್ಳುತ್ತಾನೆ. ಇಷ್ಟೆಲ್ಲ ಕಠಿನ ಸಾಧನೆಯನ್ನು ಈ ಭೌತಿಕ ಪ್ರಪಂಚದಲ್ಲಿ ಎಲ್ಲರಿಗೂ ಮಾಡಲು ಕಷ್ಟವಿರಬಹುದು. ಆದರೆ ಯೋಗದ ಎಲ್ಲ ಮಜಲುಗಳನ್ನು ಅರಿತುಕೊಂಡು ಒಂದಷ್ಟು ಅಭ್ಯಾಸದಲ್ಲಿ ನಿಯಮಿತವಾಗಿ, ನಿಯಮಬದ್ಧವಾಗಿ ತೊಡಗಿಸಿಕೊಂಡಿದ್ದೇ ಅದರೆ ಯೋಗಿಯಾಗದಿದ್ದರೂ ರೋಗಿಯಾಗಿ (ದೈಹಿಕ/ಮಾನಸಿಕ) ನರಳಾಡುವುದನ್ನಂತೂ ತಪ್ಪಿಸಬಹುದು ಎಂದೆನ್ನುತ್ತದೆ ಅನುಭಾವಿಕ ಪ್ರಪಂಚ.

ಯೋಗ, ಅದು ಇಂದು ನಿನ್ನೆಯ ವಿಚಾರವೇನಲ್ಲ ಎಂಬುದು ಎಲ್ಲರಿಗೂ ಗೊತ್ತಿರುವಂಥದ್ದೇ. ವೇದಗಳ ಕಾಲಕ್ಕಿಂತಲೂ ಪೂರ್ವದಲ್ಲಿತ್ತಂತೆ ಈ ಯೋಗವಿಜ್ಞಾನ. ಜ್ಞಾನಯೊಗ, ಭಕ್ತಿಯೋಗ, ಕರ್ಮಯೋಗಗಳು ಅಂದು ಗುರಮುಖೇನ ಕಲಿಸಲಾಗುತ್ತಿದ್ದ ವಿದ್ಯೆಗಳು. ಶಿವನನ್ನು ಆದಿ ಗುರು ಎಂದು ಕರೆಯಲಾಗುತ್ತದೆ. ಶಿವನಿಂದಲೇ ಸಪ್ತ ಋಷಿಗಳಿಗೆ ಯೋಗ ಜ್ಞಾನದ ಅರಿವು ಧಾರೆಯೆರೆಯಲ್ಪಟ್ಟಿತ್ತು ಮತ್ತು ಮುಂದೆ ಈ ಸಪ್ತ ಋಷಿಗಳು ಪ್ರಪಂಚದಾದ್ಯಂತ ಯೋಗದ ಜ್ಞಾನ ಸುಧೆಯನ್ನು ಹರಿಸಿದರು ಎಂಬುದಾಗಿ ನಂಬಲಾಗಿದೆ. ಆದಿಯಲ್ಲಿ ಯೋಗವು ಅದ್ಯಾವ ಸ್ತರದಲ್ಲಿತ್ತು ಎಂಬುದನ್ನು ವಿಶ್ಲೇಷಿಸುವುದು ಕಷ್ಟ.

ಆದರೆ ಬಳಿಕದ ವರ್ಷಗಳಲ್ಲಿ ಯೋಗವು ಹಠಯೋಗ, ರಾಜಯೋಗ, ಪತಂಜಲಿ ಯೋಗ, ಧ್ಯಾನಯೋಗ, ಕುಂಡಲಿನಿ ಯೋಗ ಹೀಗೆ ವಿವಿಧ ಶಾಖೆಗಳಾಗಿ ಬೆಳೆದು ನಿಂತವು. ಆದರೆ ಇವುಗಳು ವೈರುಧ್ಯಗಳಲ್ಲ. ಬದಲಾಗಿ ಎಲ್ಲವುಗಳು ಅಂತಿಮವಾಗಿ ಪ್ರಯತ್ನಿಸುವುದು ಮನಸ್ಸನ್ನು ಅಂತರ್ಮುಖೀಯಾಗಿಸಿ ಪರಮಾತ್ಮನಲ್ಲಿ ವಿಲೀನಗೊಳಿಸುವುದಕ್ಕೆ. ಓಂ ಕಾರದಿಂದ ಮನಸ್ಸನ್ನು ಕೇಂದ್ರೀಕರಿಸುತ್ತಾ ಸಾಗುವ ಈ ಯೋಗದ ಪಯಣಕ್ಕೆ ಆಸನಗಳು (ಯೋಗಾಸನಗಳು) ಬರೇ ಹೆಜ್ಜೆಗಳು ಮಾತ್ರ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಎಂಬ ಅಷ್ಟಾಂಗ ಸೂತ್ರವನ್ನು ರಾಜಯೋಗವು ವಿವರಿಸಿದಂತೆ ಯೋಗವು ಒಂದು ಡೊಡ್ಡ ಮಟ್ಟದ, ಹಂತಹಂತವಾಗಿ ಕೈಗೊಳ್ಳಬೇಕಾಗಿರುವ ಒಂದು ಆಧ್ಯಾತ್ಮದ ಸಾಧನೆಯೇ ಹೊರತು ದೈಹಿಕ ವ್ಯಾಯಾಮದಲ್ಲಿ ಮುಗಿಸಿ ಕೈತೊಳೆದುಕೊಳ್ಳುವ ಕ್ರಿಯೆಯಲ್ಲ. ಇಲ್ಲಿ ದೈಹಿಕ ವ್ಯಾಯಾಮವು ದೇಹವನ್ನು ಪ್ರಕೃತಿಗೆ ಸಕಾರಾತ್ಮಕವಾಗಿ ಒಗ್ಗಿಸಿಕೊಳ್ಳುವ ಸಲುವಾಗಿ ಇರುವ ಕ್ರಿಯೆಯಷ್ಟೇ. ಪ್ರಾಣಾಯಾಮ ಹಾಗೂ ಆಸನಗಳ ಮುಖಾಂತರವೇ ಯೋಗಿಗಳು ಅತೀ ಶೀತ ಪ್ರದೇಶದಲ್ಲೂ ತುಂಡು ಬಟ್ಟೆಯ ನೆರವಿನಿಂದ ಆರಾಮವಾಗಿ ಬೆಚ್ಚಗೆ ಇರುತ್ತಿದ್ದರು. ದಿನಗಟ್ಟಲೆ ಕುಂತಲ್ಲೇ ಕುಳಿತು ಭೌತಿಕವನ್ನು ಮರೆತು ಪರಮಾತ್ಮನೊಡನೆ ಅನುಸಂಧಾನಗೊಳ್ಳುವ ಸಮಾಧಿ ಸ್ಥಿತಿಯನ್ನು ಕಾಣುತ್ತಿದ್ದರು. ಇವೆಲ್ಲವನ್ನೂ ಯೋಗಿಗೆ ಸಾಧ್ಯವಾಗಿಸಿದ್ದು ಆಸನಗಳು. ಹಾಗಂತ ಆಸನಗಳನ್ನೇ ಯೋಗವೆಂದು ಪರಿಭಾವಿಸಿಕೊಂಡರೆ ಅದು ಮೂರ್ಖತನವಾಗುತ್ತದೆ.

Advertisement

ಇಂದು ವಿಶ್ವವು ಕೊರೊನಾ ಎಂಬ ಮಹಾಮಾ ರಿಗೆ ತಲ್ಲಣಿಸುತ್ತಿರುವ ಸಂದರ್ಭದಲ್ಲಿ ನಾವು ಮತ್ತೆ ಯೋಗದ ಕಡೆಗೆ ಮನಸು ಮಾಡಬೇಕಿದೆ. ಪ್ರಾಣಾಯಾಮವನ್ನು ಕನಿಷ್ಠ ದಿನಕ್ಕೆರಡು ಬಾರಿಯಂತೆ ಮಾಡುತ್ತಾ, ಧಾರಣ (ಒಂದು ನಿರ್ದಿಷ್ಟ ಬಿಂದುವಿನ ಮೇಲೆ ಮನಸ್ಸನ್ನು ಕೇಂದ್ರೀ ಕರಿಸುವುದು)-ಧ್ಯಾನದ ಮೂಲಕ ಮನಸ್ಸನ್ನು ಸಕಾರಾತ್ಮಕವಾಗಿ ಅಣಿಗೊಳಿಸುತ್ತಾ ಗಟ್ಟಿಯಾದರೆ ಈ ರೋಗದ ವೈರಾಣು ದೇಹ ಸೇರಿದರೂ ಸೋತು ಹೋಗುವುದು ಖಂಡಿತ. ಸಕಾರಾತ್ಮಕ ಚಿಂತನೆಗಳಿಗೆ ಯೋಗ ಅನಿವಾರ್ಯ.

ಪ್ರಸ್ತುತ ಸಮಾಜವು ದಿಕ್ಕು ತಪ್ಪಿರುವುದೇ ನಕರಾತ್ಮಕ ಚಿಂತನೆ ಗಳಿಂದ ಹಾಗೂ ಅವುಗಳಿಗೆ ಪ್ರೇರೇಪಣೆ ಕೊಡುವ ವಿಚಾರಗಳಿಂದ ಎಂಬುದು ಸತ್ಯ. ವಿಜ್ಞಾನ ಎಂಬ ಹೆಸರಲ್ಲಿ ಹೇಳಿದನ್ನೆಲ್ಲ ನಂಬುವ ಪ್ರಪಂಚ ನಮ್ಮ ಕಣ್ಣ ಮುಂದೆ ಇದೆ. ವಿಮರ್ಶೆಯಾಗಲಿ, ವಿಶ್ಲೇಷಣೆಯಾಗಲಿ ಇಲ್ಲವೇ ಇಲ್ಲ. ರೋಗಕ್ಕೆ ಹೆದರಿ ಹೇಳಿದ ಕೇಳಿದ ಅದೆಲ್ಲ ರೀತಿಯ ಕಷಾಯ ಮಾಡಿ ಕುಡಿದು ಬಿಟ್ಟಿದ್ದೇವೆ! ಆದರೆ ಒಂದ್ಹತ್ತು ನಿಮಿಷ ಪ್ರಾಣಾಯಾಮ ಮಾಡಿ ಹಿತ ಮಿತ ಆಹಾರ ಸೇವಿಸುತ್ತೇವೆ ಎಂದು ಹೊರಟವರು ತೀರಾ ಕಡಿಮೆಯೇ! ಭಯ ಭೀತಿಯಿಂದಲೇ ಬದುಕು ತ್ತಿರುವ ಸಮಾಜ ದೊಡ್ಡದಾಗುತ್ತಿದೆ. ಯೋಗ ವೆಂದು ಯೋಗಾಸನದ ತರಗತಿಗಳಿಗೆ ಸೇರುವವರ ಸಂಖ್ಯೆಯೇನೂ ನಮ್ಮಲ್ಲಿ ಕಡಿಮೆಯಿಲ್ಲ. ಆದರೆ ಮನುಷ್ಯನ ಸ್ವಾರ್ಥತೆ ಮಾತ್ರ ಎಳ್ಳಷ್ಟೂ ಕಡಿಮೆಯಾಗಿಲ್ಲ ಎಂಬುದು ಕೂಡ ಅಷ್ಟೇ ಸತ್ಯ.

ಮನಸ್ಸನ್ನು ಕೇಂದ್ರೀಕರಿಸುವ ಯೋಗಕ್ಕೆ ಖಂಡಿ ತವಾಗಿಯೂ ಮನುಷ್ಯನನ್ನು ಬದಲಾಯಿ ಸುವ ಶಕ್ತಿಯಿದೆ. ಸಮಾಜವನ್ನು ಶೌಚಗೊಳಿಸುವ ಶಕ್ತಿಯಿದೆ. ಹೌದು ಯೋಗವು ಸಮಾಜದೊಳಗೆ ಇನ್ನಷ್ಟು ಹರಡಬೇಕಿದೆ. ಜನರ ದಿನಚರಿ ಯಾಗಿ ಯೋಗವು (ಯೋಗಾಸನವಷ್ಟೇ ಅಲ್ಲ) ಸೇರಿಕೊಂಡು ಜನರ ಭಯ ಭೀತಿಯನ್ನು ದೂರಗೊಳಿಸಬೇಕಿದೆ, ಶಿಸ್ತುಬದ್ಧ ಜೀವನ ನಮ್ಮ ಸಮಾಜದ್ದಾಗಬೇಕಿದೆ. ಗಲ್ಲಿ ಗಲ್ಲಿಗಳಲ್ಲಿ ತಲೆ ಎತ್ತುತ್ತಿರುವ ಯೋಗ ಶಿಬಿರಗಳು ಯೋಗಾಸನಗಳ ಜತೆಗೆ ಯೋಗದ ಎಲ್ಲ ಆಯಾಮಗಳನ್ನು ನೀಡುವತ್ತ ಗಮನ ಹರಿಸುವಂತಾಗಬೇಕು. ಆರೋಗ್ಯ, ಆಯುಷ್ಯ, ಮಾನಸಿಕ ನೆಮ್ಮದಿ, ನಿಸ್ವಾರ್ಥ ಮನಸು ಇವೆಲ್ಲವುಗಳನ್ನು ಯೋಗಾ ಭ್ಯಾಸಿಗನು ಪಡೆಯಬಲ್ಲನು. ಒಟ್ಟಿನಲ್ಲಿ ಆರೋಗ್ಯ ಕರವಾಗಿರುವ, ಸಚ್ಚಾರಿತ್ರ್ಯವುಳ್ಳ ಒಳ್ಳೆಯ ಸಮಾಜದ ನಿರ್ಮಾಣಕ್ಕಂತೂ ಯೋಗವೇ ದಿವ್ಯಔಷಧ ಎಂದರೆ ತಪ್ಪಾಗದು.

– ಪ್ರಸಾದ್‌ ಕುಮಾರ್‌ ಮಾರ್ನಬೈಲ್‌

Advertisement

Udayavani is now on Telegram. Click here to join our channel and stay updated with the latest news.

Next