Advertisement

ಕೊಯ್ಲೋತ್ತರ ಮೌಲ್ಯವರ್ಧನೆಗೆ ಪ್ರಾಮುಖ್ಯತೆ ನೀಡಿ

02:33 PM Feb 07, 2020 | Suhan S |

ರಾಣಿಬೆನ್ನೂರ: ಶುಂಠಿಯಲ್ಲಿ ಉತ್ಪಾದನೆ ಜತೆಗೆ ಕೊಯ್ಲೋತ್ತರ ಮೌಲ್ಯವರ್ಧನೆಗೆ ರೈತರು ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಶುಂಠಿಯಲ್ಲಿ ಬರುವ ಕೊಳೆ ರೋಗದ ನಿರ್ವಹಣೆ, ಉತ್ತಮ ಇಳುವರಿಗೆ ಸೂಕ್ತ ರೀತಿಯಲ್ಲಿ ಪೋಷಕಾಂಶಗಳ ನಿರ್ವಹಣೆ ಮಾಡಬೇಕು ಎಂದು ಪ್ರಾಧ್ಯಾಪಕ ಡಾ| ರವಿಕುಮಾರ ಎಂ.ಆರ್‌. ಹೇಳಿದರು.

Advertisement

ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗುರುವಾರ ಶುಂಠಿ ಬೆಳೆಯ ಉತ್ಪಾದನಾ ತಾಂತ್ರಿಕತೆಗಳ ಕುರಿತು ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ಮಣ್ಣಿನ ನಿರ್ಜಲೀಕರಣ ಹಾಗೂ ಸೂಕ್ತ ರೀತಿಯಲ್ಲಿ ಗೆಡ್ಡೆಗಳ ಶೇಖರಣೆ ಪದ್ಧತಿ ಬಗ್ಗೆ ಮಾಹಿತಿಯನ್ನು ಸರಿಯಾಗಿ ತಿಳಿದುಕೊಂಡು ಕೃಷಿ ಮಾಡಿದಲ್ಲಿ ಲಾಭದಾಯಕವಾಗಲಿದೆ ಎಂದರು.

ನೀರಾವರಿ ಆಶ್ರಯದಲ್ಲಿ ಫೆಬ್ರವರಿ ತಿಂಗಳಲ್ಲಿ ನಾಟಿ ಮಾಡಬಹುದು. ಮಳೆಯಾಶ್ರಯದಲ್ಲಿ ಮೇ ತಿಂಗಳ ಆರಂಭದ 15 ದಿನ ವರೆಗೆ ಬಿತ್ತನೆ ಮಾಡಲು ಸೂಕ್ತ ಸಮಯ. ನಾಟಿಗೆ ಬಳಸುವ ಬೀಜದ ಗೆಡ್ಡೆ ರೋಗ ಮುಕ್ತವಾಗಿರಬೇಕು ಎಂದರು.

ಬಿತ್ತನೆಯ ಗೆಡ್ಡೆ ಮೂಲಕ ಹರಡುವ ರೋಗ ತಪ್ಪಿಸಲು ಬಿತ್ತನೆಗೆ ಮುನ್ನ ಬೀಜೋಪಚಾರವನ್ನುಮಾಡಬೇಕು ಹಾಗೂ ಪ್ರತಿ ಹೆಕ್ಟೇರಿಗೆ 100 ಕಿಲೋ ಸಾರಜನಕ, 50 ಕಿಲೋ ರಂಜಕ ಮತ್ತು 200 ಕಿಲೋಪೊಟ್ಯಾಷ್‌ ಗೊಬ್ಬರವನ್ನು ರಸಾವರಿ ಪದ್ಧತಿ ಮೂಲಕ ನೀಡಬೇಕು ಎಂದರು.

ಟೋಮ್ಯಾಟೊ, ಆಲೂಗಡ್ಡೆ, ಮೆಣಸಿನಕಾಯಿ, ಬದನೆಕಾಯಿ ಮತ್ತು ಶೇಂಗಾ ಬೆಳೆಗಳನ್ನು ಶುಂಠಿಯನಂತರ ಬೆಳೆಯಬಾರದು. ಈ ಬೆಳೆಗಳು ಹಸಿರು ಕೊಳೆ ಉಂಟುಮಾಡುವ ಸೂಕ್ಷ್ಮಣು ಜೀವಿಗೆ ಆಶ್ರಯ ನೀಡುವ ಸಸ್ಯಗಳಾಗಿವೆ ಎಂದು ತಿಳಿಸಿದರು.

Advertisement

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ಅಶೋಕ ಪಿ., ಮಾತನಾಡಿ, ರೈತರ ಆದಾಯ ಹೆಚ್ಚಿಸುವಲ್ಲಿ ಶುಂಠಿಬೆಳೆಯ ಪ್ರಾಮುಖ್ಯತೆಯನ್ನು ಹೊಂದಿದೆ. ರೈತರು ಸಮಗ್ರ ಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ರೈತರು ಕೇವಲ ಆದಾಯದ ಕಡೆಗೆ ಗಮನ ಹರಿಸದೆ ಮಣ್ಣಿನ ಆರೋಗ್ಯದ ಬಗ್ಗೆಯು ಕಾಳಜಿವಹಿಸಬೇಕು ಎಂದರು.

ತೋಟಗಾರಿಕಾ ವಿಜ್ಞಾನಿ ಡಾ| ಸಂತೋಷ ಎಚ್‌.ಎಂ. ಮಾತನಾಡಿ, ಮಣ್ಣಿನ ರಸಸಾರ 7ಕ್ಕಿಂತ ಅಧಿಕವಾಗಿರುವ ಮಣ್ಣಿನಲ್ಲಿ ಬೆಳೆಯುವ ಶುಂಠಿ ಬೆಳೆಗೆ ಲಘು ಪೋಷಕಾಂಶಗಳ ನಿರ್ವಹಣೆಗೆ ಒಂದುಹೆಕ್ಟೆರಿಗೆ 3 ಕಿಲೋ ಜಿಂಜರ್‌ ರಿಚ್‌ಯನ್ನು 600 ಲೀ. ಶುದ್ಧ ನೀರಿನಲ್ಲಿ ಮಿಶ್ರಣ ಮಾಡಿ 1ನೇ ಸಿಂಪರಣೆ ಶುಂಠಿ ನಾಟಿ ಮಾಡಿದ 30-45 ದಿನಗಳ ನಂತರ ಮಾಡಬೇಕು ಎಂದರು.

45 ದಿನಗಳ ಅವಧಿಯಲ್ಲಿ ಈ ಮಿಶ್ರಣವನ್ನು ಸಿಂಪಡಿಸಬೇಕು. ಇದೇ ಕ್ರಮವನ್ನು 6ನೇ ತಿಂಗಳವರೆಗೂ ಅನುಸರಿಸಬೇಕು (4 ಸಿಂಪರಣೆ).ಶುಂಠಿಯು ಬಿತ್ತನೆ ಸಮಯದಿಂದ ಗಡ್ಡೆಗಳು ಮೊಳಕೆ ಬರುವವರೆಗೆ ಸಾಧಾರಣಾ ಮಳೆ, ಬೆಳೆವಣಿಗೆ ಅವಧಿ ಯಲ್ಲಿ ಚೆನ್ನಾಗಿ ಹಂಚಿಕೆಯಾಗಿ ಬೀಳುವ ಅಧಿಕ ಮಳೆ ಹಾಗೂ ಕೊಯ್ಲು ಮಾಡುವುದಕ್ಕಿಂತ ಮುಂಚೆ ಒಂದು

ತಿಂಗಳವರೆಗೆ ಒಣ ಹವೆ‌ ಹಾಗೂ ಶೇ. 70-90 ರಷ್ಟು ಆದ್ಯತೆಯಲ್ಲಿ ಉತ್ತಮವಾಗಿ ಬೆಳೆಯುತ್ತದೆ ಎಂದರು.ಗಡ್ಡೆ ಕೊಳೆ ರೋಗ ಮತ್ತು ದುಂಡಾಣು ರೋಗ ಹೆಚ್ಚಾಗಿರುವ ಪ್ರದೇಶಗಳಲ್ಲಿ 75-100 ಮೈಕ್ರಾನ್‌ ಗಾತ್ರದ ಪಾಲಿಥೀನ್‌ ಹಾಳೆಗಳನ್ನು ಸಸಿಮಾಡಿ ಮೇಲೆ 40 ದಿನಗಳ ವರೆಗೆ ಹರಡುವುದರ ಮೂಲಕ ಮಣ್ಣು ಬಿಸಿಯಾಗುವಂತೆ (ಸೊಲರೈಜೇಷನ್‌) ಮಾಡಬೇಕು ಎಂದು ವಿವರಿಸಿದರು. ಡಾ| ಕೆ.ಪಿ. ಗುಂಡಣ್ಣನವರ ಶುಂಠಿಯಲ್ಲಿ ಬರುವ ಕಾಂಡ ಕೊರಕ ಮತ್ತು ಇತರ ಕೀಟಗಳ ನಿರ್ವಹಣೆ ಬಗ್ಗೆ ತಿಳಿಸಿದರು.

ಈ ಕಾರ್ಯಾಗಾರದಲ್ಲಿ ರಾಣಿಬೆನ್ನೂರ ಹಾನಗಲ್ಲ, ಬ್ಯಾಡಗಿ ಮತ್ತು ಹಿರೇಕೆರೂರ ತಾಲೂಕಿನ 50 ಜನ ಶುಂಠಿ ಬೆಳೆಯುವ ರೈತರು ಪ್ರಯೋಜನೆ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next