Advertisement

ದಾನದ ಮಹತ್ವ ! ಕೈಗೆ ದಾನವೇ ಭೂಷಣ…! ಬಂಗಾರದ ಬಳೆಗಳಲ್ಲ…

09:58 AM Oct 09, 2018 | |

ಬಹಳ ಪೂರ್ವಕಾಲದಲ್ಲಿ ಒಂದು ದಿನ ಕೈಲಾಸಪರ್ವತದಲ್ಲಿ ಶಿವ ಪಾರ್ವತಿಯರು ಭೂಲೋಕದ ಜನರ ಬಗ್ಗೆ ಮಾತನಾಡುತ್ತಿರಲು, ಪಾರ್ವತಿಯು ತನ್ನ ಮನಸ್ಸಿನಲ್ಲಿ ಮೂಡಿದ ಸಂಶಯವನ್ನು ನಿವಾರಣೆ ಪಡಿಸಿಕೊಳ್ಳುವ ಉದ್ದೇಶದಿಂದ ಮಹಾದೇವನಲ್ಲಿ,  ಪ್ರಭೋ …! ಮನುಷ್ಯರಲ್ಲಿ ಕೆಲವರಿಗೆ ಆರೋಗ್ಯ ಭರಿತ ತಾರುಣ್ಯವಿದ್ದರೂ ತಿನ್ನಲು ಉಣ್ಣಲು ಗತಿಯಿಲ್ಲದೆ ದರಿದ್ರದಿಂದ ಕೂಡಿರುತ್ತಾರೆ, ಇನ್ನು ಕೆಲವರಿಗೆ ಮುಪ್ಪಿನಲ್ಲಿ ಬೇಕಾದಷ್ಟು ಸಂಪತ್ತು ಪ್ರಾಪ್ತಿಯಾಗಿದ್ದರು ಅನಾರೋಗ್ಯ ನಿಮಿತ್ತವಾಗಿ ಅದನ್ನು ಅನುಭವಿಸುವ ಶಕ್ತಿಯನ್ನು ಕಳೆದುಕೊಂಡಿರುತ್ತಾರೆ. ಹಾಗೆ ಇನ್ನು ಕೆಲವರು ಉತ್ತಮ ಜ್ಞಾನಿಗಳು ಪಂಡಿತರು ಆಗಿದ್ದರು ಹುಟ್ಟು ದರಿದ್ರರಾಗಿರುತ್ತಾರೆ. ಕೆಲವರು ಆಗರ್ಭ ಶ್ರೀಮಂತರಾಗಿ ಮೆರೆಯುತ್ತಿದ್ದರು ನಿರಕ್ಷರರಾಗಿರುತ್ತಾರೆ. ವಿದ್ಯೆ ಬುದ್ದಿ ಸಂಪತ್ತನ್ನು ಮನುಷ್ಯರಿಗೆ ಕರುಣಿಸುವ ಸರ್ವಶಕ್ತನಾದ ಭಗವಂತನಿಗೆ ಯಾರುಯಾರಿಗೆ ಯಾವ ಸಂಪತ್ತನ್ನು ಯಾವ ಕಾಲದಲ್ಲಿ ಕೊಡಬೇಕೆಂಬ ತಿಳುವಳಿಕೆ ಇಲ್ಲವೇ ಎಂದು ಪ್ರಶ್ನಿಸಿದಳು.

Advertisement

                 ಆಗ ಶಿವನು, ಪ್ರಿಯೆ … ಮಾನವನ ಪೂರ್ವಜನ್ಮದಲ್ಲಿ ಮಾಡಿದ ದಾನ, ಪಾಪ, ಪುಣ್ಯಕ್ಕನುಗುಣವಾಗಿ ಭಗವಂತನು ಈ ಜನ್ಮದಲ್ಲಿ ಎಲ್ಲವನ್ನು ಕರುಣಿಸುತ್ತಾನೆ . ಹಿಂದಿನ ಜನ್ಮದಲ್ಲಿ ಯವ್ವನದ ಅಮಲಿನಲ್ಲಿ ದುರಹಂಕಾರಿಯಾಗಿದ್ದು, ಯಾರಿಗೂ ಏನನ್ನೂ ಕೊಡದೆ, ಮುಪ್ಪುಬಂದು ಕೈಕಾಲುಗಳು ಸತ್ವರಹಿತವಾಗಲು, ತಾನು ಇಲ್ಲಿಯವರೆಗೆ ಯಾರಿಗೂ ಏನನ್ನೂ ಕೊಡದಿರುವುದರಿಂದ  ಮುಂದೇನು ಗತಿಯೆಂದು ಹೆದರಿ ದೇಹಾಂತ್ಯದ ಸಮಯದಲ್ಲಿ ಯಾರು ದಾನವನ್ನು ಕೊಡುತ್ತಾನೋ ಅವನಿಗೆ ಮುಂದಿನ ಜನ್ಮದಲ್ಲಿ ವೃದ್ದಾಪ್ಯದಲ್ಲಿಯೇ ಸಂಪತ್ತು ಪ್ರಾಪ್ತಿಯಾಗುವುದು. ಇದೇರೀತಿ, ಹಿಂದಿನ ಜನ್ಮದಲ್ಲಿ ಬೇಕಾದಷ್ಟು ಸಂಪತ್ತಿದ್ದರೂ ಅದನ್ನು ದಾನ ಮಾಡದೇ  ಕೇವಲ ವಿದ್ಯಾದಾನ ವನ್ನು ಮಾಡಿದರೆ, ಮುಂದಿನ ಜನ್ಮದಲ್ಲಿ ಜ್ಞಾನಿಯಾದರು ಶ್ರೀಹೀನನಾಗಿ ಬಾಳಬೇಕಾಗುತ್ತದೆ.

             ಇದೇರೀತಿ ಪೂರ್ವಜನ್ಮದಲ್ಲಿ, ವಿದ್ವಾಂಸನಾಗಿದ್ದರೂ ವಿದ್ಯಾ ದಾನವನ್ನು ಮಾಡದೇ ಕೇವಲ ಸಂಪತ್ತನ್ನು ದಾನ ಮಾಡಿದರೆ ಮುಂದಿನ ಜನ್ಮದಲ್ಲಿ ನಿರಕ್ಷರನಾದ ಧನಿಕನಾಗಿ ಜನ್ಮವನ್ನು ತಾಳುವನು. ನಾವು ಈ ಜನ್ಮದಲ್ಲಿ ದಾನ ಕೊಟ್ಟದ್ದನ್ನು ಮುಂದಿನ ಜನ್ಮದಲ್ಲಿ ಅನುಭವಿಸುವಂತೆ ಭಗವಂತನು ಅನುಗ್ರಹ ಮಾಡುತ್ತಾನೆ ಎಂದು ಪರಮೇಶ್ವರನು ಸತಿದೇವಿಯ ಸಂಶಯವನ್ನು ನಿವಾರಿಸುತ್ತಾನೆ.

ಕೈಗೆ ದಾನವೇ ಭೂಷಣ…! ಬಂಗಾರದ ಬಳೆಗಳಲ್ಲ….ಎಂಬುದು ಶ್ರೀಪಾದರಾಜರ ಅಭಿಮತ.  “ದಾನ ನಮಗಾಗಿ … ಸಂಗ್ರಹ ಪರರಿಗಾಗಿ” ಕೊಟ್ಟದ್ದು ನಮಗೆ ಬಚ್ಚಿಟ್ಟದ್ದು ಪರರಿಗೆ.

ಒಮ್ಮೆ ಸಂತ ಸಮರ್ಥದಾಸರು ರಾಮನಾಮವನ್ನು ಜಪಿಸುತ್ತಾ ,ಜೋಳಿಗೆ ಹಿಡಿದುಕೊಂಡು ಬರುತ್ತಿದ್ದರು.ಇದನ್ನು ಗಮನಿಸಿದ ಒಂದು ಮನೆಯ ಹೆಂಗಸು ದಾಸರು ಬಂದರೆ ಏನನ್ನಾದರೂ ಕೊಡಬೇಕಾದೀತೆಂದು ಅರಿತು ತನ್ನ ಮನೆಯ ಕದವನ್ನು ಧಡಾರನೆ ಮುಚ್ಚಿದಳು.ಇದನ್ನು ಕಂಡ ದಾಸರು ಅವಳ ಮನೆಯ ಮುಂದೆ ಬಂದು ಬಾಗಿಲು ತಟ್ಟಿ ಅವಳು ಬಾಗಿಲು ತೆರೆಯುವ ವರೆಗೆ ಸಹನೆಯಿಂದ ಕಾದು ಕುಳಿತರು.ಆ ಹೆಂಗಸು ಕೊನೆಗೆ ಸಂಕೋಚದಿಂದ ಬಾಗಿಲನ್ನು ತೆರೆದಳು.ಆಗ ದಾಸರು”ತಾಯೀ….ಮನೆಯ ಮುಂದಿನ ಮಣ್ಣನ್ನು ಒಂದು ಹಿಡಿಯಷ್ಟು ತೆಗೆದು ನನ್ನ ಜೋಳಿಗೆಗೆ ಹಾಕು” ಎಂದು ಹೇಳಿದರು.ಆಗ ಆ ಹೆಂಗಸು ಮನಸ್ಸಿನಲ್ಲೇ ಇವರು ಎಂಥ ದಾಸರಪ್ಪ ಎಂದು ಗೊಣಗಿಕೊಂಡು “ಅಕ್ಕಿಯಿರುವ ಜೋಳಿಗೆಗೆ ಮಣ್ಣನ್ನು ಹಾಕಿದರೆ ಅದನ್ನು ಆರಿಸಿಕೊಳ್ಳಲು ತೊಂದರೆಯಾಗದೆ?”ಎಂದು ಪ್ರಶ್ನಿಸಿದಳು.ಆಗ ದಾಸರು ನಗುತ್ತಾ “ತಾಯಿ…ನನಗೆ ತೊಂದರೆಯಾದರೂ ಪರವಾಗಿಲ್ಲ ,ನಿನ್ನ ಕೈಗಳಿಗೆ ಏನನ್ನಾದರೂ ಎತ್ತಿ ಕೊಡುವ ಸಂಸ್ಕಾರ ಬಂದು ಮುಂದಿನ ಜನ್ಮದಲ್ಲಿ ಅಕ್ಕಿಯನ್ನು ಹಾಕುವಂತಾಗಲಿ “ಎಂದು ಹಾರೈಸುತ್ತಾ ಮುಂದೆ ನಡೆದರು.

Advertisement

                                ತಾತ್ಪರ್ಯ : ನಮ್ಮ ಕೈಗಳಿಗೆ ಸಂಸ್ಕಾರದ ಅಗತ್ಯವಿದೆ…..

           ತೈತ್ತಿರೀಯ ಉಪನಿಷತ್ತಿನಲ್ಲಿ ದಾನವನ್ನು ನೀಡುವ ಬಗೆ  ಹಾಗೂ ಅದರ ಗೌರವವನ್ನು ಮನದಟ್ಟು ಮಾಡುತ್ತಾ ,ಶ್ರದ್ಧೆಯಿಂದಲಾದರೂ ,ನಂಬಿಕೆಯಿಲ್ಲದಿದ್ದರೂ, ಭಯದಿಂದಲಾದರೂ,ಜ್ಞಾನಪೂರ್ವಕವಾದರೂ ಸರಿ ಕರ್ತವ್ಯವೆಂಬ ದೃಷ್ಟಿಯಿಂದ ತಮ್ಮ ಯೋಗ್ಯತಾನುಸಾರವಾಗಿ ದಾನವನ್ನು ಕೊಡಬೇಕೆಂದು ಸಾರಲಾಗಿದೆ.

             ಶ್ರದ್ಧಯಾ ದೇಯಂ :ಆಸ್ಥಿಕ್ಯ ಬುದ್ಧಿಯಿಂದ ದಾನ ಮಾಡಬೇಕು.ದಾನ ಮಾಡುವುದರಿಂದ ಪುಣ್ಯ ವೃದ್ಧಿಯಾಗುವುದೆಂಬ ನಂಬಿಕೆಯಿಂದ ದಾನ ಮಾಡಬೇಕು.

            ಅಶ್ರದ್ಧಯಾ ದೇಯಂ : ಶ್ರದ್ಧೆಯಿರದಿದ್ದರೂ ದಾನ ಮಾಡ ಬೇಕು. ಶ್ರದ್ಧೆ ಎಂಬುದು ಅಂಗ, ದಾನ ಪ್ರಧಾನ. ಅಂಗವಿಲ್ಲವೆಂದು ಪ್ರಧಾನವಾದುದ್ದನ್ನು ಬಿಡಬಾರದು.

             ದಾನ ಪಡೆಯುವವನು ಸತ್ಪಾತ್ರನಾದರೆ ಶ್ರದ್ಧೆಯಿಂದ ದಾನ ಮಾಡಬೇಕು.ಅಪಾತ್ರನಾದರೆ ಅಶ್ರದ್ಧೆಯಿಂದ ದಾನ ಮಾಡಬೇಕು.ಇಲ್ಲಿ ಅಶ್ರದ್ಧೆಯೆಂದರೆ ಅಪಾತ್ರನ ಒಳಗಿರುವ ಅಕಾರ ವಾಚ್ಯನಾದ ಭಗವಂತ.ಆತನಲ್ಲಿ ನಂಬಿಕೆಯಿತ್ತು ಕೀರ್ತಿಗಾಗಿ ದಾನಮಾಡಬೇಕು.

             ಶ್ರಿಯಾ ದೇಯಂ : ಪ್ರಸನ್ನವಾದ ಮನಸ್ಸಿನಿಂದ ದಾನ ಮಾಡಬೇಕು.ಬಹುಸಂಪತ್ತಿದ್ದರೆ ಅದರ ರಕ್ಷಣೆಗಾಗಿ ಎಲ್ಲರಿಗೂ ದಾನ ಮಾಡ ಬೇಕು.

             ಹ್ರಿಯಾ ದೇಯಂ : ತನಗೆ ದಾನ ಕೊಡುವ ಔದಾರ್ಯವಿರದಿದ್ದರೂ ಮತ್ತೊಬ್ಬನು ದಾನ ಮಾಡುತ್ತಿರುವನೆಂಬ ಸಂಕೋಚದಿಂದಾದರೂ ದಾನ ಕೊಡಬೇಕು.

       ಭಿಯಾ ದೇಯಂ : ದಾನ ಕೊಡದಿದ್ದರೆ ನರಕ, ದಾರಿದ್ರ್ಯಗಳು ಬಂದವೆಂದು, ನೋಡಿದವರು ದೊಷಿಸುತ್ತಾರೆಂಬ ಭಯದಿಂದ ದಾನ ಮಾಡಬೇಕು.

      ಸಂವಿದಾ ದೇಯಂ: ವಸ್ತುತಃ ಒಳ್ಳೆಯ ಜ್ಞಾನದಿಂದ ದಾನ ಕೊಡಬೇಕು. ನನ್ನ ಒಳಗೆ ಇರುವ ಭಗವಂತ ಕೊಡುತ್ತಿರುವನು. ದಾನ ಪಡೆದವನ ಒಳಗೆ ಭಗವಂತನಿದ್ದಾನೆ ಅವನಿಗೆ ಸಮರ್ಪಿಸುತ್ತಿದ್ದೇನೆ ಎಂಬ ಜ್ಞಾನವಿರಬೇಕು. ಭಗವಂತ ಪ್ರೀತನಾಗಲಿ ಎಂಬ ಮನೋಭಾವ ಇರಬೇಕು.

     ಇನ್ನು ದಾನಗಳಲ್ಲಿ ಸಾತ್ವಿಕ, ರಾಜಸ, ತಾಮಸಗಳೆಂಬ ತಾರತಮ್ಯವಿದೆ. ಭಗವದ್ಗೀತೆಯಲ್ಲಿ ದಾನದಲ್ಲಿರುವ ಸಾತ್ತ್ವಿಕಾದಿ  ಪ್ರಭೇದವನ್ನು ಹೀಗೆ ತಿಳಿಸಿದ್ದಾರೆ.

   ಸಾತ್ತ್ವಿಕ : ದಾನ ಮಾಡುವುದು ಕರ್ತವ್ಯವೆಂದು ತಿಳಿದು ಶ್ರದ್ಧೆಯಿಂದ ಪುಣ್ಯ ದೇಶ, ಯೋಗ್ಯ ಕಾಲಗಳಲ್ಲಿ ಪ್ರತ್ಯುಪಕಾರವನ್ನು ಬಯಸದೇ ಸತ್ಪಾತ್ರನಲ್ಲಿ ಮಾಡುವ ದಾನವು ಸಾತ್ತ್ವಿಕವೆನಿಸಿದೆ.

ರಾಜಸ : ಪ್ರತ್ಯುಪಕಾರದ ಅಪೇಕ್ಷೆಯಿಂದ ಅಥವಾ ಸ್ವರ್ಗಾದಿ ಫಲದ ಉದ್ದೇಶದಿಂದ ಸಂಪತ್ತನ್ನು ದಾನ ಮಾಡುವುದು ರಾಜಸವೆನಿಸಿದೆ.

ತಾಮಸ : ಅಶುಚಿಯಾದ ದೇಶ – ಕಾಲಗಳಲ್ಲಿ, ಅಪಾತ್ರರಿಗೆ, ನಮಸ್ಕಾರಾದಿ ಸತ್ಕಾರಗಳನ್ನು ಮಾಡದೇ ಅವಮಾನ ಪಡಿಸುತ್ತಾ ದಾನ ಮಾಡುವುದು ತಾಮಸವೆನಿಸಿದೆ.

ಇದರಲ್ಲಿ ಮೂರೂ ಪ್ರಬೇಧ ಇದೆ.

 ಉತ್ತಮ : ಸತ್ಪಾತ್ರರು ಇದ್ದಲ್ಲಿಗೆ ಹೋಗಿ ಅವನನ್ನ ಪ್ರಸನೀಕರಿಸಿ ದಾನವವನ್ನು ಕೊಡುವುದು ಉತ್ತಮ.

 ಮಧ್ಯಮ : ಸತ್ಪಾತ್ರರನ್ನು ಮನೆಗೆ ಕರೆದು ಕೊಡುವುದು ಮಾಧ್ಯಮ

 ಅಧಮ : ಶಕ್ತಿಗೆ ಅನನುರೂಪವಾಗಿ ಕೊಡುವ ದಾನ ಅಧಮ

ಇನ್ನು ದಾನದಲ್ಲಿ ಇರಬೇಕಾದ ಆರು ಗುಣಗಳು ಯಾವುದೆಂದರೆ.

ದಾತಾ : ಹುಟ್ಟಿದಾಗಿನಿಂದ ಮನೋ, ವಾಕ್,ಕಾಯ, ಕರ್ಮಗಳಿಂದ ಪರಿಶುದ್ಧನೂ ಸತ್ಯವಾದಿಯೂ,ಕ್ರೋಧವನ್ನು ಗೆದ್ದವನೂ, ಲೋಭವಿಲ್ಲದವನೂ ಅಸೂಯೆಯಿಲ್ಲದವನೂ, ಶ್ರದ್ಧಾವಂತನೂ, ಆಸ್ತಿಕನೂ ಆದ ದಾನಿಯು ಶ್ರೇಷ್ಠನು.

ಪ್ರತಿಗ್ರಹೀತಾ: ಶುದ್ಧನೂ ದಾಂತನು ಜಿತಕ್ರೋಧನೂ,ಉತ್ತಮ ಕುಲದಲ್ಲಿ ಹುಟ್ಟಿದವನೂ, ಶಾಸ್ತ್ರಾಧ್ಯಯನ ಮಾಡಿದವನೂ, ಉತ್ತಮನಡತೆ ಹೊಂದಿದವನೂ, ಬಹುಕುಟುಂಬಿಯೂ ,ಪಂಚಯಜ್ಞಗಳನ್ನು ಮಾಡುವವನೂ, ಶರೀರವಿಕಾರ ಇಲ್ಲದ ವ್ಯಕ್ತಿಯು ದಾನಕ್ಕೆ ಸತ್ಪಾತ್ರನು. ಪಿತೃಕಾರ್ಯ, ದೇವಕಾರ್ಯ, ಅಗ್ನಿಕಾರ್ಯಗಳಲ್ಲಿ ಇಂತಹವರಿಗೆ ಕೊಟ್ಟದಾನ ಮಹಾ ಫಲಪ್ರದವಾಗಿರುತ್ತದೆ.

ಇನ್ನು ಯಾರು ಯಾವುದಕ್ಕೆ ಅರ್ಹರೋ ಅವರೇ ಅದಕ್ಕೆ ಪಾತ್ರರು. ಪಾತ್ರತೆಯೆಂಬುದು ನಾನಾ ಬಗೆಯಾಗಿದೆ. ಹಸಿದವರಿಗೆ ಅನ್ನ, ಬಾಯಾರಿದವರಿಗೆ ನೀರು, ಕಷ್ಟದಲ್ಲಿರುವವರಿಗೆ ಸಹಾಯವೂ ಕೂಡ ಶ್ರೇಷ್ಠ ದಾನವಾಗಿದೆ. ಮತ್ತೆ ಚೋರ,ಜಾರ, ಷಂಡ, ಹಿಂಸಾಸ್ವಭಾವದವನು, ಮಾತು ತಪ್ಪುವವನು, ಜನರಿಗೆ ಅಡ್ಡಿಪಡಿಸುವ ಸ್ವಭಾವದವನಿಗೆ ಯಾವುದೇ ಕಾರಣಕ್ಕೂ ದಾನ ಕೊಡಬಾರದು.

ದೇಯ : ಮತ್ತೊಬ್ಬರನ್ನು ಘಾಸಿಗೊಳಿಸಿ ಸಂಪಾದಿಸಿದ, ಕಳ್ಳತನದಿಂದ ಪಡೆದ, ನಿರ್ದಯವಾಗಿ ಕಸಿದುಕೊಂಡ, ಧೂರ್ತತನದ ದಬ್ಬಾಳಿಕೆಯಿಂದ ಪಡೆದ, ಅಧರ್ಮದಿಂದ, ಹಣದ ವ್ಯಾಮೋಹದಿಂದ, ಬಹಳ ಜನರನ್ನು ಪೀಡಿಸಿ ಗಳಿಸಿದ ಸಂಪತ್ತು ಅತ್ಯಂತ ನಿಂದಿತ. ಅಂತಹ ಹಣದಿಂದ ಮಾಡಿದ ದಾನ ವಿಫಲ.ಆದ್ದರಿಂದ ಒಳಿತನ್ನು ಬಯಸುವವನು ನ್ಯಾಯಮಾರ್ಗದಿಂದ ಗಳಿಸಿದ ಹಣದಿಂದಲೇ ದಾನ ಮಾಡಬೇಕು.

ಉಪಕ್ರಮ : ನಮಗೆ ಯಾವುದು ಅತ್ಯಂತ ಪ್ರಿಯವೋ ಅದನ್ನು ಕೊಡಬೇಕು. ಇದನ್ನೇ ಉಪಕ್ರಮವೆನ್ನುವುದು, ಇದೇ ದಾತೃಗಳಿಗೆ [ದಾನ ಕೊಡುವವರಿಗೆ] ಪರಮ ಹಿತಪ್ರದವಾದುದು. ಸಾಮಾನ್ಯವಾಗಿ ನಾವು ಮನೆಯಲ್ಲಿ, ನಮಗೆ ಬಂದ ವಸ್ತುಗಳಲ್ಲಿ ಚೆನ್ನಾಗಿರುವುದನ್ನು ನಮ್ಮ ಉಪಯೋಗಕ್ಕೊಸ್ಕರ ತೆಗೆದಿಟ್ಟು, ಉಳಿದದ್ದನ್ನು ದಾನ ಕೊಡುತ್ತೇವೆ . ಆದರೆ ನಮಗೆ ಪ್ರಿಯವಾದದ್ದನ್ನು ದಾನ ಕೊಡುವುದರಿಂದಲೇ ಪರಮ ಹಿತವೆಂದು ತಿಳಿಯದಾಗಿದೆ.

ದೇಶ: ದೇವತೆಗಳು, ಋಷಿಗಳು ಸೇವಿಸಿದ ಕುರುಕ್ಷೇತ್ರ ಮುಂತಾದ ಪುಣ್ಯಕ್ಷೇತ್ರಗಳು, ಹಿಮಾಲಯಾದಿ ಪರ್ವತಗಳು, ಗಂಗಾದಿ ಪುಣ್ಯತೀರ್ಥಗಳು, ಇವುಗಳು ಪವಿತ್ರದೇಶಗಳು, ಇವಲ್ಲದೇ ಪಾತ್ರರು ಎಲ್ಲಿ ದಾನ ಪಡೆಯಲು ಬಯಸುವರೋ ಅದೇ ಪುಣ್ಯದೇಶ, ಇಂತಹ ದೇಶದಲ್ಲಿ ಕೊಟ್ಟದ್ದಕ್ಕೆ ಮಹಾಫಲ.

ಕಾಲ: ಶರದೃತು, ವಸಂತ ಋತುಗಳು, ಪುಣ್ಯಮಾಸಗಳು, ಶುಕ್ಲಪಕ್ಷ, ಹುಣ್ಣಿಮೆ, ಪಿತೃಕಾರ್ಯ, ದೇವತಾಕಾರ್ಯದ ಸಂದರ್ಭ, ಉತ್ತಮ ನಕ್ಷತ್ರಗಳಂದು, ನಿರ್ಮಲವಾದ ದಿವಸ, ಗ್ರಹಣಕಾಲ ಇದು ದಾನ ಕೊಡಲು ಪ್ರಶಸ್ತ ಕಾಲ. ಅಲ್ಲದೇ ದಾನ ಪಡೆಯುವವನು ಯಾವ ಕಾಲದಲ್ಲಿ ದಾನ ಪಡೆಯಲು ಬಯಸುವನೋ ಆ ಕಾಲವು ದಾನಕ್ಕೆ ಪ್ರಶಸ್ತಕಾಲ.

ಕೊಡುವ ದಾನ ಅತ್ಯಲ್ಪವಾದರೂ ಈ ಆರು ಗುಣಗಳಿಂದ ಕೂಡಿದ್ದರೆ ಅದು ಶ್ರೇಷ್ಠವಾದ ದಾನವೆನಿಸುವುದು. ದಾನ ಮಹತ್ತರವಾದರೂ ಷಡ್ಗುಣ್ಯವರ್ಜಿತವಾದರೆ ಅತ್ಯಲ್ಪ ಫಲದಾಯಕ ಅಥವಾ ವಿಫಲವೇ ಆಗಿ ದುಷ್ಪಲವೇ ದೊರೆತೀತು.

ಪಲ್ಲವಿ

Advertisement

Udayavani is now on Telegram. Click here to join our channel and stay updated with the latest news.

Next