ಕೇಂದ್ರ ಸರಕಾರ ಆಮದು ತೆರಿಗೆಯನ್ನು ಕಡಿತಗೊಳಿಸಿರುವುದರಿಂದ ಡಿಸೆಂಬರ್‌ನಿಂದ ತಾಳೆ ಎಣ್ಣೆ (ಪಾಮ್ ಆಯಿಲ್)ಯ ಆಮದು ಪ್ರಮಾಣ ತಿಂಗಳಿಗೆ ಒಂದು ಲಕ್ಷ ಟನ್‌ಗಳಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. ತಾಳೆ ಎಣ್ಣೆ ಇತರ ಖಾದ್ಯ ತೈಲಗಳಿಗಿಂತ ಅಗ್ಗವಾಗಲಿದ್ದು, ಸಹಜವಾಗಿ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಇದೆ.
1 ಲಕ್ಷ ಟನ್‌ಗೆ ಬೇಡಿಕೆ ಸಾಧ್ಯತೆ: ಪಾಮ್ ಆಯಿಲ್ ಆಮದು ಡಿಸೆಂಬರ್‌ನಿಂದ ಪ್ರತೀ ತಿಂಗಳು ಸುಮಾರು ಒಂದು ಲಕ್ಷ ಟನ್‌ಗಳಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಇದೇ ವೇಳೆ ಅಮೆರಿಕದ ಸೋಯಾಬೀನ್ ಆಯಿಲ್ ಆಮದು ಪ್ರಮಾಣ ಮುಂಬರುವ ಜನವರಿಯಿಂದ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಬೇಡಿಕೆ ಕುಸಿದಿತ್ತು: ಕೋವಿಡ್-19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹೊಟೇಲ್ ಮತ್ತು ರೆಸ್ಟೋರೆಂಟ್‌ಗಳಿಗೆ ಬೀಗ ಜಡಿದ ಕಾರಣ ಪಾಮ್ ಆಯಿಲ್ ಆಮದು ಅಕ್ಟೋಬರ್ 31ರ ವೇಳೆಗೆ ಶೇ. 23ರಷ್ಟು ಕುಸಿದು 7.2 ಮಿಲಿಯನ್ ಟನ್‌ಗಳಿಗೆ ತಲುಪಿತ್ತು. ಹೀಗಾಗಿ 2020-21ರಲ್ಲಿ ಶೇ. 25ರಷ್ಟು ಬೇಡಿಕೆ ಹೊಂದಿ ಈಗಿರುವ 7.2 ಮಿಲಿಯನ್ ಟನ್‌ಗಳಿಂದ 9 ಮಿಲಿಯನ್ ಟನ್‌ಗಳಿಗೆ ಏರಿಕೆಯಾಗುವ ನಿರೀಕ್ಷೆ ಇದೆ.
ತಾಳೆ ಎಣ್ಣೆ ಮೇಲೆ ಮಮತೆ ಯಾಕೆ?: ಆಮದು ಸುಂಕ ಕಡಿತದಿಂದ ಮಲೇಷ್ಯಾ ಮತ್ತು ಇಂಡೋನೇಷ್ಯಾ ಹೆಚ್ಚಿನ ಪ್ರಯೋಜನ ಪಡೆಯುತ್ತವೆ. ಆದರೆ ಈ ಎರಡು ರಾಷ್ಟ್ರಗಳು ಭಾರತದಿಂದ ಸಕ್ಕರೆ ಮತ್ತು ಅಕ್ಕಿಯನ್ನು ಆಮದು ಮಾಡಲಿವೆ. ಈ ಕುರಿತ ಒಪ್ಪಂದಗಳಿಗೆ ಈ ರಾಷ್ಟ್ರಗಳು ಮುಂದಾಗಿರುವುದರಿಂದ ಆಮದು ಸುಂಕ ಕಡಿತ ಉತ್ತಮ ತಂತ್ರವೇ ಆಗಿದೆ. ಆಗ್ನೇಯ ಏಷ್ಯಾದಲ್ಲಿ ವಿಶೇಷವಾಗಿ ಮಲೇಷ್ಯಾ ಮತ್ತು ಇಂಡೋನೇಷ್ಯಾದಲ್ಲಿ ಭಾರತೀಯ ಸಕ್ಕರೆಗೆ ಉತ್ತಮ ಬೇಡಿಕೆಯಿದೆ. ಥೈಲ್ಯಾಂಡ್ ಮತ್ತು ವಿಯೆಟ್ನಾಂನಂತಹ ದೇಶಗಳಲ್ಲಿನ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಮಲೇಷ್ಯಾ ಮತ್ತು ಇಂಡೋನೇಷ್ಯಾ ಭಾರತೀಯ ಅಕ್ಕಿಯನ್ನು ಖರೀದಿಸಲು ಹೆಚ್ಚಿನ ಆಸಕ್ತಿ ತೋರಿವೆ.
ಶೇ. 40ರಷ್ಟು ಪಾಲು: ಪಾಮ್ ಆಯಿಲ್ ಭಾರತದ ಒಟ್ಟು ಖಾದ್ಯ ತೈಲ ಬಳಕೆಯ ಶೇ. 40ರಷ್ಟನ್ನು ತುಂಬುತ್ತದೆ. ಕಚ್ಚಾ ತೈಲ ಮತ್ತು ಚಿನ್ನದ ಬಳಿಕ ತಾಳೆ ಎಣ್ಣೆಯು ಗ್ರಾಹಕ ಬಳಕೆಯ 3ನೇ ಅತೀ ದೊಡ್ಡ ಆಮದು ಸರಕಾಗಿದೆ. ಜನವರಿಯಲ್ಲಿ ಅಸೋಸಿಯೇಷನ್ ಆಫ್ ಸೌತ್ ಈಸ್ಟ್ ಏಷ್ಯನ್ ನೇಶನ್ಸ್ (ಆಸಿಯಾನ್) ದೇಶಗಳಿಂದ ಆಮದು ಮಾಡಿಕೊಳ್ಳಲು ಕಚ್ಚಾ ತಾಳೆ ಎಣ್ಣೆಯ ಮೇಲಿನ ಸುಂಕವನ್ನು ಶೇ. 40ರಿಂದ ಶೇ. 37.5ಕ್ಕೆ ಕಡಿತಗೊಳಿಸಿತ್ತು. ಕಳೆದ ಒಂದು ವರ್ಷದಲ್ಲಿ ತಾಳೆ, ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆಯ ಬೆಲೆ ಶೇ. 20-30ರಷ್ಟು ಹೆಚ್ಚಾಗಿತ್ತು.
ಭಾರತ ನಂಬರ್ 1
ತಾಳೆ ಎಣ್ಣೆ ಆಮದಿನಲ್ಲಿ ಭಾರತ ವಿಶ್ವದಲ್ಲಿಯೇ ಅಗ್ರಸ್ಥಾನದಲ್ಲಿದೆ. ಭಾರತ ಮಲೇಷ್ಯಾದಿಂದ ಭಾರೀ ಪ್ರಮಾಣದಲ್ಲಿ ತಾಳೆ ಎಣ್ಣೆ ಖರೀದಿಸುತ್ತಿದ್ದು ಕೇಂದ್ರದ ಈ ನಿರ್ಧಾರದಿಂದ ಸಹಜವಾಗಿಯೇ 8 ವರ್ಷಗಳ ಬಳಿಕ ಮಲೇಷ್ಯಾಕ್ಕೆ ಹೆಚ್ಚಿನ ಉತ್ತೇಜನ ಲಭಿಸಿದಂತಾಗಿದೆ. ಹಣದುಬ್ಬರದ ನಡುವೆ ಹೆಚ್ಚುತ್ತಿರುವ ಆಹಾರ ಪದಾರ್ಥಗಳ ಬೆಲೆಗಳಿಗೆ ಕಡಿವಾಣ ಹಾಕಲು ಭಾರತವು ಕಚ್ಚಾ ತಾಳೆ ಎಣ್ಣೆ (ಸಿಪಿಒ) ಮೇಲಿನ ಆಮದು ತೆರಿಗೆಯನ್ನು ಶೇ. 37.5ರಿಂದ ಶೇ. 27.5ಕ್ಕೆ ಇಳಿಸಿದೆ.
ಎಲ್ಲೆಲ್ಲಿಂದ ಆಮದು
ದಕ್ಷಿಣ ಏಷ್ಯಾದ ದೇಶವು ತಾಳೆ ಎಣ್ಣೆಯನ್ನು ಮುಖ್ಯವಾಗಿ ಇಂಡೋನೇಷ್ಯಾ ಮತ್ತು ಮಲೇಷ್ಯಾದಿಂದ ಹೆಚ್ಚಾಗಿ ಆಮದು ಮಾಡುತ್ತವೆ. ಇತರ ತೈಲಗಳಾದ ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆಯನ್ನು ಅರ್ಜೆಂಟೀನಾ, ಬ್ರೆಜಿಲ…, ಉಕ್ರೇನ್ ಮತ್ತು ರಷ್ಯಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ.
ಬೆಲೆ ಏರಿಕೆ ಬಿಸಿ ತಟ್ಟಲಿದೆಯೇ?
ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಅಗತ್ಯ ವಸ್ತುಗಳು ಸೇರಿದಂತೆ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುತ್ತಿದೆ. ಗ್ರಾಹಕ ಬಳಕೆ ವಸ್ತುಗಳ ಬೆಲೆಗಳು ಶೇ. 3ರಿಂದ ಶೇ. 5ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಡಿಸೆಂಬರ್‌ನಿಂದ ಗೃಹೋಪಯೋಗಿ ವಸ್ತುಗಳಾದ ವಾಷಿಂಗ್ ಮೆಷಿನ್, ರೆಫ್ರಿಜರೇಟರ್, ಟೆಲಿವಿಷನ್ ಸೆಟ್‌ಗಳು ಮತ್ತು ಏರ್ ಕಂಡೀಷನರ್‌ಗಳ ಬೆಲೆಯಲ್ಲಿ ಶೇ. 3ರಿಂದ 5ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ.