Advertisement

ಜನಸಾಮಾನ್ಯ ಕಲ್ಯಾಣ ಯೋಜನೆ ಅನುಷ್ಠಾನಿಸಿ: ಡಾ|ಎಂ.ಟಿ. ರೆಜು

10:53 PM Dec 05, 2020 | mahesh |

ಉಡುಪಿ: ಕೋವಿಡ್‌ನಿಂದಾಗಿ ಪ್ರಸ್ತುತ ಸಾಲಿನ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಅನುಷ್ಠಾನ ನಿಗದಿತ ಗುರಿ ಸಾಧಿಸಿಲ್ಲ. ಡಿಸೆಂಬರ್‌, ಜನವರಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ| ಎಂ.ಟಿ. ರೆಜು ತಿಳಿಸಿದರು.

Advertisement

ಜಿ.ಪಂ. ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲೆಯ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರಕಾರ ಪ್ರಸ್ತುತ ಬಜೆಟ್‌ನಲ್ಲಿ ಜನ ಸಾಮಾನ್ಯರ ಕಲ್ಯಾಣ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಅನೇಕ ಯೋಜನೆಗಳನ್ನು ರೂಪಿಸಿದ್ದರೂ ಕೋವಿಡ್‌ ಕಾರಣದಿಂದ ನಿಗದಿತ ಮಟ್ಟದಲ್ಲಿ ಅನುಷ್ಠಾನ ಆಗಿಲ್ಲ.ಆದ್ದರಿಂದ ತತ್‌ಕ್ಷಣದಿಂದ ಕಾರ್ಯಪ್ರವೃತ್ತರಾಗಬೇಕು ಎಂದರು.

ಅಗತ್ಯ ನೆರವು ಕಲ್ಪಿಸಿ
ಅಧಿಕ ಮಳೆ ಹಾಗೂ ನೆರೆಯಿಂದಾಗಿ ಜಿಲ್ಲೆಯಲ್ಲಿ ಹಾನಿ ಸಂಭವಿಸಿದ್ದು, ಮಳೆಯಿಂದ ಹಾನಿಗೀಡಾದ ಮನೆಗಳ ನಿರ್ಮಾಣ ಕಾರ್ಯಗಳನ್ನು ಪೂರ್ಣಗೊಳಿಸಲು ಜನಸಾಮಾನ್ಯರಿಗೆ ಅಗತ್ಯ ನೆರವು ಕಲ್ಪಿಸಬೇಕು. ನಗರ ಸಹಿತ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಕುಡಿಯುವ ನೀರಿನ ಅಭಿವೃದ್ಧಿ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೊಂಡು, ಶೀಘ್ರದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದರೊಂದಿಗೆ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದರು. ಉದ್ಯೋಗ ಖಾತ್ರಿ ಯೋಜನೆಯಡಿ ಬಡ ಜನರಿಗೆ ಉದ್ಯೋಗ ನೀಡುವ ಜತೆಗೆ ಶಾಶ್ವತ ಅಭಿವೃದ್ಧಿಗಾಗಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ಕೂಲಿ ಕಾರ್ಮಿಕರಿಗೆ ನಿಗದಿತ ಅವಧಿಯಲ್ಲಿ ಕೂಲಿ ಹಣ ನೀಡಬೇಕು ಎಂದರು.

ಅವೈಜ್ಞಾನಿಕ ಮೀನುಗಾರಿಕೆ ಬಗ್ಗೆ ದೂರು
ಜಿಲ್ಲೆಯಲ್ಲಿ ಮೀನುಗಾರಿಕೆ ಚಟುವಟಿಕೆಗಳನ್ನು ಅವೈಜ್ಞಾನಿಕವಾಗಿ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಆ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಿದರು.  ಸಾಲಮನ್ನ ಸುವ್ಯವಸ್ಥಿತವಾಗಲಿ ಕಳೆದ ಎರಡು ವರ್ಷಗಳಲ್ಲಿ ಮೀನುಗಾರ ಮಹಿಳೆಯರಿಗೆ ನೀಡಿದ ಅಲ್ಪಾವಧಿ ಸಾಲವನ್ನು ಮನ್ನ ಮಾಡಲು 38 ಕೋ.ರೂ. ಬಿಡುಗಡೆಯಾಗಿದ್ದು, ಅದರಲ್ಲಿ 31 ಕೋ.ರೂ. ಮಾತ್ರ 11,000 ಜನರ ಖಾತೆಗೆ ಜಮೆಯಾಗಿದೆ. ಬಾಕಿ ಉಳಿದ 4,050 ಜನರ ಖಾತೆಗೆ ಆಧಾರ್‌ ಲಿಂಕ್‌ ಆಗದ ಕಾರಣ ಜಮೆಯಾಗಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು.

ರಾಜ್ಯ ಮಟ್ಟದಲ್ಲಿ ಜಿಲ್ಲೆಯಲ್ಲಿ ಬರುವ ಮಾಹಿತಿಗಳ ಆಧಾರದ ಮೇಲೆ ಮುಂಬರುವ ಬಜೆಟ್‌ನಲ್ಲಿ ಯೋಜನೆಗಳನ್ನು ತಯಾರಿಸಲಾಗುವುದು. ಇದರ ಹಿನ್ನೆಲೆ ಪ್ರತಿಯೊಂದು ಇಲಾಖೆಯವರು ತಮ್ಮ ಇಲಾಖೆಗಳಲ್ಲಿನ ಯೋಜನೆಗಳ ಮಾಹಿತಿಯನ್ನು ನಿಗದಿತ ಸಮಯದಲ್ಲಿ ರಾಜ್ಯ ಮಟ್ಟದ ಕಚೇರಿಗಳಿಗೆ ತಲುಪಿಸಬೇಕು. ವಿಧಾನಸಭಾ ಅಧಿವೇಶನದಲ್ಲಿ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳ ಬಗ್ಗೆ ಉತ್ತರವನ್ನು ವಿಳಂಬವಿಲ್ಲದೇ ನಿಖರ ಮಾಹಿತಿಗಳನ್ನು ಕಳುಹಿಸಬೇಕು ಎಂದರು.

Advertisement

ಜಿಲ್ಲಾಧಿಕಾರಿ ಜಿ. ಜಗದೀಶ್‌, ಜಿ.ಪಂ. ಸಿಇಒ ಡಾ| ನವೀನ್‌ ಭಟ್‌ ವೈ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ವಿಷ್ಣುವರ್ಧನ್‌, ಎಡಿಸಿ ಸದಾಶಿವ ಪ್ರಭು ಉಪಸ್ಥಿತರಿದ್ದರು.

ಗಣಿಗಾರಿಕೆಗೆ ಅವಕಾಶ
ಸಿಆರ್‌ಝಡ್‌ ಹಾಗೂ ನಾನ್‌ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳು ಗಣಿಗಾರಿಕೆ ಕೈಗೊಳ್ಳುತ್ತಿರುವುದು ಸೇರಿದಂತೆ ಮತ್ತಿತರ ಗಣಿಗಾರಿಕೆಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿದ ಅವರು, ಸರಕಾರದ ನಿಯಮಾನುಸಾರ ಎಲ್ಲ ರೀತಿಯ ಸಾಂಪ್ರದಾಯಿಕ ಗಣಿಗಾರಿಕೆಗೆ ಅವಕಾಶ ಮಾಡಿಕೊಡಬೇಕು. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ಅವಕಾಶಗಳಿದ್ದು, ಪ್ರವಾಸಿಗರ ಅನುಕೂಲಕ್ಕಾಗಿ ಅಗತ್ಯ ಮೂಲ ಅಭಿವೃದ್ಧಿ ಕಾಮಗಾರಿಗಳನ್ನು ಕಲ್ಪಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next