Advertisement

ಮಳೆಗಾಲಕ್ಕೂ ಮೊದಲು ಅಳವಡಿಸಿ ಮಿಂಚುಬಂಧಕ

11:27 PM May 14, 2020 | Sriram |

ಉಡುಪಿ: ಪ್ರತಿ ವರ್ಷವೂ ಜಿಲ್ಲೆಯಲ್ಲಿ ಮಿಂಚು, ಸಿಡಿಲಿನ ಆರ್ಭಟ ಹೆಚ್ಚಿರುತ್ತದೆ. ಜೀವಹಾನಿ ಸಹಿತ ಅಪಾರ ನಷ್ಟ ಸಂಭವಿಸುತ್ತಿರುತ್ತದೆ. ಈ ಬಾರಿ ಆರಂಭದಲ್ಲೆ ಸಿಡಿಲು ಮಿಂಚಿನ ಆರ್ಭಟ ಹೆಚ್ಚಾಗಿ ಕಂಡುಬಂದಿದೆ.

Advertisement

ಹೆಚ್ಚು ಸಿಡಿಲಿನ ತೀವ್ರತೆಯಿರುವ ಜಿಲ್ಲೆಗಳ ಕೆಲ ಪ್ರದೇಶಗಳಲ್ಲಿ ಮಿಂಚು ಪ್ರತಿ ಬಂಧಕ ಟವರ್‌ ಅಳವಡಿಸಿಕೊಳ್ಳುವಂತೆ ಸರಕಾರ ಈ ಹಿಂದೆ ಅನುಮತಿ ನೀಡಿತ್ತು. ತಂತ್ರಜ್ಞರ ಸಲಹೆ ಪಡೆದುಕೊಳ್ಳಲು ಸೂಚಿಸಲಾಗಿತ್ತು. ರಾಜ್ಯ ಕಂದಾಯ ಇಲಾಖೆಯ ವಿಪತ್ತು ನಿರ್ವಹಣ ವಿಭಾಗದಡಿ ಜಿಲ್ಲಾಡಳಿತಗಳು ಮಿಂಚು ಪ್ರತಿಬಂಧಕ ಅಳವಡಿಸಲು ಮುಂಜೂರಾತಿ ನೀಡುತ್ತವೆ.

ಎತ್ತರ ಸ್ಥಳದಲ್ಲಿ ಟವರ್‌ ನಿರ್ಮಾಣ ಮಾಡಿ ಅಲ್ಲಿ ಮಿಂಚು ಪ್ರತಿಬಂಧಕವನ್ನು ಅಳವಡಿಸಿದಲ್ಲಿ ಸುತ್ತಮುತ್ತಲ ಹಲವು ಪ್ರದೇಶಗಳಲ್ಲಿ ಸಿಡಿಲಿನ ಹೊಡೆತ ತಪ್ಪಿಸಲು ಸಹಕಾರಿಯಾಗುತ್ತದೆ. ದ.ಕ. ಜಿಲ್ಲೆಯಲ್ಲಿ ಇದು ಪ್ರಗತಿಯಲ್ಲಿದೆ. ಉಡುಪಿ ಜಿಲ್ಲೆಯಲ್ಲಿ ಈ ಬಗ್ಗೆ ಅಧಿಕಾರಿಗಳಲ್ಲಿ ಹೆಚ್ಚಿನ ಮಾಹಿತಿಗಳಿಲ್ಲ. ಮಿಂಚು ಪ್ರತಿಬಂಧಕ ಬದಲಿಗೆ ಮಿಂಚು ಬಂಧಕವನ್ನು ಖಾಸಗಿಯಾಗಿ ಕಟ್ಟಡಗಳಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ.

15 ಮೀ.ಗಿಂತ ಹೆಚ್ಚು ಎತ್ತರವಿರುವ ಗೋಪುರಗಳು, ಖಾಸಗಿ ಕಟ್ಟಡಗಳು, ಶ್ರದ್ದಾ ಕೇಂದ್ರಗಳು, ಇನ್ನಿತರ ಕಟ್ಟಡಗಳಲ್ಲಿ ಮಿಂಚು ಬಂಧಕಗಳನ್ನು ಅಳವಡಿಸುವುದು ಕಡ್ಡಾಯವಾಗಿದೆ. ಬಹುತೇಕ ಕಟ್ಟಡಗಳು ಅಳವಡಿಸಿಕೊಂಡಿವೆ. ಖಾಸಗಿ ಸಂಸ್ಥೆಗಳ ಮೂಲಕ ಇದನ್ನು ಅಳವಡಿಸುತ್ತಾರೆ. ಸಾಮರ್ಥ್ಯದ ಮೇಲೆ ವೆಚ್ಚ ನಿಗದಿಯಾಗುತ್ತದೆ.

ಮಿಂಚು ಬಂಧಕದ ಕೆಲಸ ಹೇಗೆ?
ಮಿಂಚು ಮತ್ತು ಸಿಡಿಲಿನ ಹೊಡೆತಗಳು 30,000 ಫ್ಯಾರನ್‌ ಹೀಟ್‌ನಿಂದ 50,000 ಫ್ಯಾರನ್‌ ಹೀಟ್‌ ಉಷ್ಣವನ್ನು ಬಿಡುಗಡೆ ಮಾಡಬಲ್ಲವು. ಇದು ಸೂರ್ಯನ ಮೇಲ್ಮೆ„ ತಾಪಮಾನಕ್ಕಿಂತಲೂ ಹೆಚ್ಚಿರುತ್ತದೆ. ದೊಡ್ಡ ಕಟ್ಟಡಗಳನ್ನು ಈ ಸಿಡಿಲಿನ ಹೊಡೆತದಿಂದ ರಕ್ಷಿಸಲು ತ್ರಿಶೂಲಾಕಾರದ ಲೋಹದ ಸಲಾಕೆಯನ್ನು ಕಟ್ಟಡದ ಮೇಲೆ ನೆಟ್ಟು ಅದರ ಕೆಳತುದಿಯನ್ನು ಒಂದು ವಾಹಕದ ಮೂಲಕ ಭೂಮಿಗೆ ಸೇರಿಸುತ್ತಾರೆ. ಇದೇ ಮಿಂಚು ಬಂಧಕ. ಸಿಡಿಲು ಮೋಡದಿಂದ ಪ್ರೇರೇಪಿತಗೊಂಡ ವಿದ್ಯುತ್‌ ಅಂಶಗಳು ಮಿಂಚು ಬಂಧಕ ಹಾಗೂ ವಾಹಕಗಳ ಮೂಲಕ ಭೂಮಿಯನ್ನು ಸೇರಿ ಸಿಡಿಲಿನ ಅಪಾಯ ತಪ್ಪುತ್ತದೆ.

Advertisement

ವಿದ್ಯುತ್‌ ಅಪಾಯ;
ಜಾಗರೂಕತೆ ಅಗತ್ಯ
ಸಿಡಿಲು, ಮಿಂಚಿಗೆ ವಿದ್ಯುತ್‌ ಸಂಬಂಧಿತ ದೋಷಗಳ ಕುರಿತು ಜಾಗ್ರತೆ ವಹಿಸಬೇಕಾಗುತ್ತದೆ. ಮಿಂಚು ಬರುವ ವೇಳೆ ಮನೆಯ ವಿದ್ಯುತ್‌ ತಂತಿಗಳು, ಸ್ವಿಚ್‌ ಇತ್ಯಾದಿಗಳ ಬಳಿಯಿಂದ ದೂರವಿರಬೇಕು. ಶಾರ್ಟ್ ಸರ್ಕ್ಯೂಟ್‌ ಉಂಟಾಗಿ ಮನೆಯ ಉಪಕರಣಗಳು ಹಾಳಾಗುವುದರ ಜತೆಗೆ ಜೀವಹಾನಿ ಸಂಭವಿಸುವ ಸಾಧ್ಯತೆಗಳೇ ಹೆಚ್ಚು. ಮನೆಯ ವಿದ್ಯುತ್‌ ತಂತಿಗಳ ಬಗ್ಗೆಯೂ ಜಾಗೃತೆ ವಹಿಸಬೇಕು.

ಮಿಂಚು ಅತ್ಯಂತ ಅಪಾಯಕಾರಿ
ಗುಡುಗು ಒಂದು ಶಬ್ದ ಅಷ್ಟೆ. ಆದರೆ ಮಿಂಚು ಅಪಾಯಕಾರಿ. ಹವಾಮಾನ ಸೇವಾಸಂಸ್ಥೆಯ ಸಮೀಕ್ಷೆಯಂತೆ ಪ್ರತೀ 300 ಜನರಲ್ಲಿ ಒಬ್ಬರಿಗೆ ಮಿಂಚಿನ ದಾಳಿಯ ಸಾಧ್ಯತೆಗಳಿರುತ್ತವೆ. ಮಳೆ ನಿಂತ ಅರ್ಧ ಗಂಟೆಯವರೆಗೂ ಮಿಂಚು ಎರಗುವ ಸಾಧ್ಯತೆ ಇರುತ್ತದೆ.

ಕೆಳಕಂಡ ಎಚ್ಚರಿಕೆ ಅಗತ್ಯ
-ಸ್ಥಿರ, ಮೊಬೈಲ್‌ ಫೋನ್‌ಗಳನ್ನು ಸಿಡಿಲು, ಮಿಂಚಿರುವಾಗ ಬಳಸಬೇಡಿ.
-ಗುಡುಗು, ಮಿಂಚು ಇದ್ದಾಗ ಷವರ್‌ ಸ್ನಾನ ಬೇಡ.
-ಟಿವಿ, ರೇಡಿಯೋ, ಮಿಕ್ಸಿ,ಗ್ರೈಂಡರ್‌, ಕಂಪ್ಯೂಟರ್‌ ಇತ್ಯಾದಿಗಳ ಬಳಕೆ ಬೇಡ.
-ಕಿಟಿಕಿಗಳನ್ನು ತೆರೆದುಕೊಂಡು ಮಿಂಚನ್ನು ನೋಡಬೇಡಿ.

ವಿದ್ಯುತ್‌ ಸೋರಿಕೆಗೆ ತಡೆಯಿರಲಿ
ಮನೆಯ ಅರ್ಥಿಂಗ್‌ ವ್ಯವಸ್ಥೆಯನ್ನು ಮಳೆಗಾಲದ ಪೂರ್ವದಲ್ಲೇ ಪರೀಕ್ಷಿಸಿಕೊಳ್ಳುವುದು ಸೂಕ್ತ. ಸಿಡಿಲು, ಮಿಂಚು ಸಂದರ್ಭ ಮನೆಯ ವಿದ್ಯುತ್‌ ಉಪಕರಣಗಳು ಹಾಳಾಗದಂತೆ ನೋಡಿಕೊಳ್ಳುವುದಲ್ಲದೆ, ಮನೆಯ ವಸ್ತುಗಳಲ್ಲಿ ವಿದ್ಯುತ್‌ ಸೋರಿಕೆಯಿಂದ ಶಾಕ್‌ ತಗಲುವುದನ್ನು ತಡೆಗಟ್ಟುತ್ತದೆ. ಸಾರ್ವಕಾಲಿಕವಾಗಿ ಅರ್ಥಿಂಗ್‌ ವ್ಯವಸ್ಥೆ ಎನ್ನುವುದು ಮನೆಯ ರಕ್ಷಾ ಕವಚವಿದ್ದಂತೆ. ಪ್ರತಿ ಮಳೆಗಾಲದ ಪೂರ್ವದಲ್ಲಿ ಅರ್ಥಿಂಗ್‌ ವ್ಯವಸ್ಥೆಗೆ ಇಲೆಕ್ಟ್ರೀಶಿಯನ್‌ ಸಲಹೆಯಂತೆ ಉಪ್ಪು ಮತ್ತು ಇದ್ದಿಲು ಹಾಕಿ ಸೂಕ್ತವಾಗಿರಿಸಿಕೊಳ್ಳುವುದು ಅವಶ್ಯವಾಗಿದೆ.

ಮಾಹಿತಿ ಪಡೆಯುವೆ
ಜಿಲ್ಲೆಯಲ್ಲಿ ಸಿಡಿಲು ತೀವ್ರತೆ ತಡೆಗೆ ಮಿಂಚು ಪ್ರತಿಬಂಧಕ ಟವರ್‌ ಅಳವಡಿಕೆಯಂತಹ ಯಾವುದೇ ಪ್ರಸ್ತಾವಗಳು ಇಲ್ಲ ಎಂದೆನಿಸುತ್ತಿದೆ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು.
 - ಜಿ.ಜಗದೀಶ್‌, ಜಿಲ್ಲಾಧಿಕಾರಿ
ಉಡುಪಿ

ಪ್ರಸ್ತಾವನೆ ಬಂದಿಲ್ಲ
ಸಿಡಿಲಿನ ತೀವ್ರತೆ ಇರುವ ಪ್ರದೇಶಗಳಲ್ಲಿ ಮಿಂಚುಬಂಧಕ ಟವರ್‌ ಅಳವಡಿಸಿಕೊಳ್ಳುತ್ತಾರೆ. ಆದರೆ ನಗರ ಸಭೆ ವ್ಯಾಪ್ತಿಯಲ್ಲಿ ಇದುವರೆಗೆ ಅಂತಹ ಪ್ರಸ್ತಾವನೆಗಳು ಬಂದಿಲ್ಲ. ದೊಡ್ಡ ಕಟ್ಟಡಗಳಿಗೆ ಖಾಸಗಿಯಾಗಿ ಅಳವಡಿಸಿಕೊಂಡಿರುತ್ತಾರೆ.
-ಮೋಹನ್‌ರಾಜ್‌ , ಎಂಜಿನಿಯರ್‌
ನಗರ ಸಭೆ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next