ಹುನಗುಂದ: ಪಕ್ಕದ ಕೊಪ್ಪಳ ಜಿಲ್ಲೆಯ 329 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಪೈಪ್‌ಲೈನ್ ಹಾಕುವ ಕಾರ್ಯ ನಡೆಯುತ್ತಿದ್ದು, ರೈತರ ಗಮನಕ್ಕೆ ತರದೇ ಭೂಮಿ ಅಗೆದು ಫಲವತ್ತಾದ ಮಣ್ಣನ್ನು ಹಾಳು ಮಾಡಲಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.
ನಾರಾಯಣಪುರ ಜಲಾಶಯ ಹಿನ್ನೀರ ವ್ಯಾಪ್ತಿಯ ಕೌಜಗನೂರ ಜಾಕವೆಲ್‌ನಿಂದ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕಿನ ವ್ಯಾಪ್ತಿಯ ನಗರ ಮತ್ತು 329 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಈ ಯೋಜನೆಯನ್ನು ಸುಮಾರು 700 ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕೈಗೊಳ್ಳಲಾಗುತ್ತಿದೆ. ಈ ಇಲಾಖೆ, ಎಲ್ ಆ್ಯಂಡ್ ಟಿ ಕಂಪನಿಗೆ ಗುತ್ತಿಗೆ ನೀಡಿದ್ದು, ಖಾಸಗಿ ಗುತ್ತಿಗೆ ಕಂಪನಿ, ರೈತರಿಗೆ ಯಾವುದೇ ಮುನ್ಸೂಚನೆ ನೀಡದೇ ಪೈಪ್ ಲೈನ್ ಅಳವಡಿಸುವ ಕಾರ್ಯ ನಡೆಸಿದ್ದು, ಇದು ರೈತರನ್ನು ಕೆರಳಿಸುವಂತೆ ಮಾಡಿದೆ.
ರೈತರ ಮೇಲೆಯೇ ದಬ್ಟಾಳಿಕೆ: ನಿಯಮಾವಳಿ ಪ್ರಕಾರ, ರೈತರಿಗೆ ತಮ್ಮ ಭೂಮಿಯ 3 ಅಡಿಯವರೆಗೆ ಮಾತ್ರ ಹಕ್ಕಿದೆ. ಅದಕ್ಕೂ ಆಳವಾದ ಭೂಮಿ, ಆಸ್ತಿ ಸರ್ಕಾರದ ಸ್ವತ್ತು. ಆದರೆ, ಭೂಮಿಯ ಮೇಲ್ಭಾಗದ ಹಕ್ಕು ಹೊಂದಿರುವ ರೈತರ ಗಮನಕ್ಕೆ ತರದೇ, ಎಲ್ಲೆಂದರೆಲ್ಲಿ ಭೂಮಿ ಅಗೆದು, ಫಲವತ್ತಾದ ಮಣ್ಣು ಹಾಳು ಮಾಡಲಾಗಿದೆ. ನಮ್ಮ ಗಮನಕ್ಕೆ ತರದೇ ಏಕೆ ಭೂಮಿ ಅಗೆಯುತ್ತಿದ್ದೀರಿ ಎಂದು ಪ್ರಶ್ನಿಸಿದರೆ, ನಿಮ್ಮ ಮೇಲೆ ಪೊಲೀಸ್ ಕಂಪ್ಲೇಟ್ ಕೊಡಬೇಕಾಗುತ್ತದೆ ಎಂದು ರೈತರನ್ನೇ ಎದುರಿಸುತ್ತಿದ್ದಾರೆ. ಈ ಕುರಿತು ತಹಶೀಲ್ದಾರರ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ. ನಮ್ಮ ಭೂಮಿ ಅಗೆಯುವ ಮೊದಲು, ಯಮಾನುಸಾರ ಪರಿಹಾರ ಕೊಡಬೇಕು, ಬಳಿಕ ಭೂಮಿ ಅಗೆಯಬೇಕು ಎಂಬುದು ರೈತರ ವಾದ.
ಎಲ್ಲೆಲ್ಲಿ ಭೂಮಿ ಅಗೆತ: ತಾಲೂಕಿನ ಕೌಜಗನೂರ ಜಾಕವೆಲ್‌ದಿಂದ ಕಮಲದಿನ್ನಿ, ಲವಳಸರ, ಮನ್ಮಥನಾಳ, ಪಾಲಥಿ, ಕೊಣ್ಣೂರ, ಹೇಮವಾಡಗಿ, ತುರಮರಿ, ನಿಡಸನೂರ, ಮಲಗಿಹಾಳ, ಚಟ್ನಿಹಾಳ, ಹುನಕುಂಟಿ ಸೇರಿ ಹಲವಾರು ಗ್ರಾಮಗಳ ಭೂಮಿಯಲ್ಲಿ ಈ ಬೃಹತ್ ಪೈಪ್‌ಲೈನ್ ಅಳವಡಿಸುವ ಕಾರ್ಯ ನಡೆದಿದೆ. ಇದರಿಂದ ನೂರಾರು ರೈತರ ಜಮೀನಗಳು ಹಾಳಾಗಿ ಹೋಗುತ್ತಿದೆ ಆದರೂ ಎಲ್ ಆ್ಯಂಡ್ ಟಿ ಕಂಪನಿ ಮತ್ತು ಅಧಿಕಾರಿಗಳು ರೈತರ ಜಮೀನುಗಳಿಗೆ ಪರಿಹಾರ ನೀಡಲು ಮೀನಾಮೇಷ ಎನಿಸುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಪರಿಹಾರ ನೀಡದಿದ್ದರೆ ಹೋರಾಟ: ಪರಿಹಾರ ನೀಡಿ ಪೈಪ್‌ಲೈನ್ ಅಳವಡಿಸಬೇಕು. ಒಂದು ವೇಳೆ ರೈತರ ಜಮೀನುಗಳಿಗೆ ಪರಿಹಾರ ನೀಡದಿದ್ದರೆ ಎಲ್ ಆ್ಯಂಡ್ ಟಿ ಕಂಪನಿ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ವಿವಿಧ ಗ್ರಾಮದ ರೈತ ಮುಖಂಡರಾದ ಶರಣಗೌಡ ಗೌಡರ, ಮಲ್ಲಪ್ಪ ನೀರಡ್ಡಿ, ಮುತ್ತಣ್ಣ ಗೌಡರ, ಹನಮಂತ ಮೇಟಿ, ನಾಗಪ್ಪ ದೂಳಪ್ಪ ನೀರಡ್ಡಿ, ಹುಲಗಪ್ಪ ಕೊಣ್ಣೂರು, ಅಡಿವೆಪ್ಪಗೌಡ ತೋಟದ, ಸಂಗಣ್ಣ ತೆಗ್ಗಿನಮನಿ, ವೆಂಕಣ್ಣ ತೆಗ್ಗಿನಮನಿ, ಬಸನಗೌಡ ಗೌಡರ, ದೊಡ್ಡನಗೌಡ ತೆಗ್ಗಿನಮನಿ, ಬಸವ್ವ ಮಾದರ ಮುಂತಾದವರು ಎಚ್ಚರಿಕೆ ನೀಡಿದ್ದಾರೆ.
ನಮಗೇ ನೀರಿಲ್ಲ; ಎಲ್ಲಿಂದ ಕೊಡ್ತಾರೆ
ಕೊಪ್ಪಳ ಜಿಲ್ಲೆಗೆ ಕುಡಿಯುವ ನೀರು ತಗೆದುಕೊಂಡು ಹೋಗಲು ರೈತರದೇನೂ ಅಭ್ಯಂತರವಿಲ್ಲ. ರೈತರ ಭೂಮಿಗೆ ಕೊಡಬೇಕಾದ ಪರಿಹಾರ ಕೊಟ್ಟು ಪೈಪ್‌ಲೈನ್ ಅಳವಡಿಸಲಿ. ಇನ್ನು ಕುಡಿಯುವ ನೀರಿನ ನೆಪ ಹೇಳಿ ಬೇರೆ ಉದ್ದೇಶಕ್ಕೆ ಬಳಸಲು ಹೋದರೆ ತಾಲೂಕಿನ ರೈತರು ಸುಮ್ಮನೆ ಕೂಡಲ್ಲ. ಅಲ್ಲದೇ ಬೇಸಿಗೆ ಬಂದರೆ ನಮಗೇ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಇದೆ. ಇನ್ನು ಯಲಬುರ್ಗಾ, ಕುಷ್ಟಗಿ ತಾಲೂಕಿನ ಜನರಿಗೆ ಎಲ್ಲಿಂದ ನೀರು ಕೊಡುತ್ತಾರೆ. ಕೇವಲ ಪೈಪ್ ಅಳವಡಿಸಿ, ನೀರಿಲ್ಲ ಎಂಬ ಸಮಸ್ಯೆ ನೆಪ ಹೇಳಲು, ಸರ್ಕಾರ 700 ಕೋಟಿ ಖರ್ಚು ಮಾಡುವ ದುರುದ್ದೇಶವಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.
ಎಲ್ ಆ್ಯಂಡ್ ಟಿ ಕಂಪನಿಯು ರೈತರಿಗೆ ಮೋಸ ಮಾಡಿ, ಫಲವತ್ತಾದ ಭೂಮಿ ಹಾಳು ಮಾಡುತ್ತಿದ್ದಾರೆ. ಪರಿಹಾರ ನೀಡದೇ ರೈತರ ವಿರುದ್ಧ ಪೊಲೀಸ್ ಠಾಣಿಯಲ್ಲಿ ದೂರು ನೀಡುವ ಬೆದರಿಕೆ ಹಾಕುತ್ತಿದ್ದಾರೆ. ಪೈಪ್‌ಲೈನ್ ಅಳವಡಿಸುವ ಮಾರ್ಗದ ರೈತರಿಗೆ ಸೂಕ್ತ ಪರಿಹಾರ ಕೊಡಬೇಕು. ಇಲ್ಲದಿದ್ದರೆ ಪೈಪ್‌ಲೈನ್ ಅಳವಡಿಸಲು ಅವಕಾಶ ಕೊಡಲ್ಲ.
ಜಗದೀಶ ತೋಟದ,
ಗ್ರಾಪಂ ಸದಸ್ಯರು
ಮಲ್ಲಿಕಾರ್ಜುನ ಬಂಡರಗಲ್ಲ