ಹುಬ್ಬಳ್ಳಿ: ರಕ್ತದಾನದ ಮೂಲಕ ವಿಶ್ವಮಾನವ ಸಂದೇಶ ಅನುಷ್ಠಾನ ಸಾಧ್ಯವಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿ. ಶ್ರೀಶಾನಂದ ಹೇಳಿದರು. ಹುಬ್ಬಳ್ಳಿ ತಾಲೂಕು ಕಾನೂನು ಸೇವಾ ಸಮಿತಿ ಕಿಮ್ಸ್, ಹುಬ್ಬಳ್ಳಿ ವಕೀಲರ ಸಂಘದ ಸಹಯೋಗದಲ್ಲಿ ವಕೀಲರ ಸಂಘದ ಸಭಾಂಗಣದಲ್ಲಿ ಶನಿವಾರ ನಡೆದ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಾತಿ, ಧರ್ಮ, ವರ್ಣ ಭೇದ ನೋಡದೇ ಅವಶ್ಯಕತೆ ಇದ್ದವರಿಗೆ ರಕ್ತ ನೀಡಲಾಗುತ್ತದೆ ಎಂದರು. ಭಾರತದಲ್ಲಿ 120 ಕೋಟಿಗೂ ಹೆಚ್ಚು ಜನಸಂಖ್ಯೆಯಿದ್ದರೂ ರಕ್ತದಾನಿಗಳಸಂಖ್ಯೆ ವಿರಳ. ರಕ್ತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅವಶ್ಯ. ರಕ್ತದ ಕೊರತೆಯಿಂದಾಗಿ ಜನರು ಜೀವ ಕಳೆದುಕೊಳ್ಳುವ ಪರಿಸ್ಥಿತಿ ಬರಬಾರದು ಎಂದರು.
ಆಧುನಿಕ ಜೀವನ ಶೈಲಿಯಿಂದಾಗಿ ರೋಗಗಳು ಬರುತ್ತಿವೆ. ನೂತನ ಸಲಕರಣೆಗಳು ಮನುಷ್ಯನನ್ನು ಸೋಮಾರಿಯನ್ನಾಗಿಸುತ್ತಿವೆ. ವ್ಯಾಯಾಮವಿಲ್ಲದಿದ್ದರಿಂದ ದೇಹ ಅನಾರೋಗ್ಯದ ಗೂಡಾಗುತ್ತಿದೆ. ಮನೆಯಲ್ಲಿನ ಸೈಕಲ್ ಗುಜರಿಗೆ ಹಾಕುವ ಜನರು, ಜಿಮ್‌ಗಳಲ್ಲಿ ಹಣ ಕೊಟ್ಟು ಮುಂದೆ ಹೋಗದ ಸೈಕಲ್ ತುಳಿಯುವುದು ದುರ್ದೈವ ಸಂಗತಿ ಎಂದು ವಿಷಾದಿಸಿದರು.
ಕಿಮ್ಸ್ ಅಧೀಕ್ಷಕ ಡಾ| ಶಿವಪ್ಪ ಹನೂರಶೆಟ್ಟರ ಮಾತನಾಡಿ, ನಮಗಾಗಿ ನಾವು ಸಮಯ ಮೀಸಲಾಗಿಡುವುದು ಅವಶ್ಯ. ಒತ್ತಡದ ಜೀವನದಲ್ಲಿಯೂ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದರು. ಡಾ| ಉದಯ ಡಯಾಬಿಟಿಸ್, ಹೃದಯಾಘಾತ ಸಮಸ್ಯೆ ಹಾಗೂ ಪರಿಹಾರೋಪಾಯಗಳ ಕುರಿತು ವಿವರಿಸಿದರು.
ವಕೀಲರ ಸಂಘದ ಅಧ್ಯಕ್ಷ ಡಿ.ಎಂ. ನರಗುಂದ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಧೀಶರಾದ ಕೆ.ಎಸ್. ಗಂಗಣ್ಣವರ, ಎಸ್.ಎನ್. ಕಲ್ಕಣಿ, ಕಿಮ್ಸ್ ಪ್ರಾಂಶುಪಾಲ ಡಾ| ಕೆ.ಎಫ್. ಕಮ್ಮಾರ, ಹುಬ್ಬಳ್ಳಿ ವಕೀಲರ ಸಂಘದ ಅಶೋಕ ಅಣವೇಕರ ಇದ್ದರು.