ಬೀದರ: ಪಶುಭಾಗ್ಯ ಯೋಜನೆಯಡಿ ಅವ್ಯವಹಾರ ತಡೆಯುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಾನುವಾರುಗಳಿಗೆ ಚಿಪ್ ಅಳವಡಿಸುವ ಕಾರ್ಯ ನಡೆಯುತ್ತಿದೆ ಎಂದು ಪಶು ಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾನುವಾರುಗಳಿಗೆ ಚಿಪ್ ಅಳವಡಿಕೆಯಿಂದ ಪೂರ್ಣ ಮಾಹಿತಿ ದೊರಕಲಿದೆ. ಜಾನುವಾರು ಯಾರಿಗೆ ಸೇರಿದೆ ಎಂಬುದನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಅಲ್ಲದೆ, ಕಳ್ಳತನವಾದ ಸಂದರ್ಭದಲ್ಲೂ ಸರಳವಾಗಿ ಪತ್ತೆ ಹಚ್ಚಲು ಈ ತಂತ್ರಜ್ಞಾನ ನೆರವಾಗಲಿದೆ. ಪಶು ಭಾಗ್ಯದಡಿ ಖರೀದಿಸುವ ಜಾನುವಾರುಗಳ ಕುರಿತು ಕೂಡ ಮಾಹಿತಿ ಸಂಗ್ರಹಕ್ಕೆ ಈ ತಂತ್ರಜ್ಞಾನ ಉಪಯುಕ್ತವಾಗಲಿದೆ ಎಂದರು.
ಐದು ದೇಶಗಳ ವಂಶವಾಹಿ (ಜೀನ್ಸ್) ಅಳವಡಿಸಿ ಹೊಸ ಮಾದರಿಯ “ಸುವರ್ಣ ನಾರಿ’ ತಳಿಯ ಟಗರು ನೀಡುವ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ 1 ಕೋಟಿ ರೂ. ಮೀಸಲಿಡಲಾಗಿದ್ದು, 25 ಕುರಿಗಳಿರುವ ರೈತರಿಗೆ ಒಂದು “ಸುವರ್ಣ ನಾರಿ’ ಟಗರು ನೀಡಲಾಗುವುದು. ಮೊದಲ ಬಾರಿಗೆ ದೇಶಿ ತಳಿಯ ಮರಿಗೆ ಜನ್ಮ ನೀಡುವ ಕುರಿಗಳು, ಎರಡನೇ ಬಾರಿಗೆ ಎರಡು ಮರಿಗಳಿಗೆ ಜನ್ಮ ನೀಡುತ್ತವೆ. ಇದರಿಂದ ರೈತರಿಗೆ ಆರ್ಥಿಕ ಲಾಭ ದೊರೆಯುತ್ತದೆ. ಹುಟ್ಟುವ ಮರಿಗಳು ಎತ್ತರವಾಗಿ ಬೆಳೆದು, ಹೆಚ್ಚು ಮಾಂಸ, ಹೆಚ್ಚು ಹಾಲು ನೀಡುತ್ತವೆ ಎಂದರು.
ಅಲ್ಲದೇ, ಪಶು ಇಲಾಖೆಯಡಿ ಕಸಾಯಿಖಾನೆ ನಿರ್ಮಿಸಿ ಕುರಿಗಳ ಮಾಂಸ ಕೂಡ ಮಾರಾಟ ಮಾಡುವ ಚಿಂತನೆಯಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಗೂ ಚಾಲನೆ ದೊರೆಯಲಿದೆ. ಜಾನುವಾರುಗಳ ವಿಮೆಗಾಗಿ ವಿಶೇಷ ಆ್ಯಪ್ ತಯಾರಿಸಲಾಗುತ್ತಿದ್ದು, 15 ದಿನಗಳಲ್ಲಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡು ಆ್ಯಪ್‌ಗೆ ಚಾಲನೆ ನೀಡಲಾಗುವುದು ಎಂದರು.
ಆಪರೇಷನ್ ಕಮಲ ಪ್ರಾರಂಭಿಸಿದ ಯಡಿಯೂರಪ್ಪ ಮತ್ತೆ ಸಿಎಂ ಆಗುವ ಹಗಲು ಕನಸು ಕಾಣುತ್ತಿದ್ದಾರೆ. ಅವರು ಪ್ರಾರಂಭಿಸಿದ ಆಪರೇಷನ್ ಅವರಿಗೇ ಮುಳುವಾಗಿದೆ. 16 ಶಾಸಕರು ರಾಜೀನಾಮೆ ನೀಡಲು ಸಾಧ್ಯವೇ? ಈಗಾಗಲೇ ಎಲ್ಲ ಶಾಸಕರನ್ನು ಒಂದೆಡೆ ಕರೆದು ಸಭೆ ನಡೆಸಲಾಗಿದೆ.
– ವೆಂಕಟರಾವ್ ನಾಡಗೌಡ, ಸಚಿವ