Advertisement

ಜಿಲ್ಲೆಯಲ್ಲಿ ಪ್ರೀಪೇಯ್ಡ್‌ ಸ್ಮಾರ್ಟ್‌ ವಿದ್ಯುತ್ ಮೀಟರ್‌ ಅಳವಡಿಕೆ

01:23 PM Sep 04, 2022 | Team Udayavani |

ಉಡುಪಿ: ಕೇಂದ್ರ ಸರಕಾರದ ಆರ್‌ಡಿಎಸ್‌ಎಸ್‌ ಯೋಜನೆ ಮೂಲಕ ಪ್ರೀಪೇಯ್ಡ್‌ ಸ್ಮಾರ್ಟ್‌ ವಿದ್ಯುತ್‌ ಮೀಟರ್‌ ಅಳವಡಿಸುವ ಯೋಜನೆ ಉಡುಪಿ ಜಿಲ್ಲೆಯಲ್ಲಿಯೂ ಜಾರಿಗೆ ಬರಲಿದೆ. ಪ್ರಾರಂಭಿಕ ಹಂತದಲ್ಲಿ ಸರಕಾರಿ ಕಚೇರಿ ಹಾಗೂ ಬಳಿಕ ಉಡುಪಿ ನಗರ ಭಾಗದಲ್ಲಿ ಇದು ಅನುಷ್ಠಾನವಾಗಿ ಜಿಲ್ಲಾದ್ಯಂತ ವಿಸ್ತರಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.

Advertisement

ಪ್ರೀಪೇಯ್ಡ್‌ ಮೀಟರ್‌ ಪ್ರೀಪೇಯ್ಡ್‌ ಮೊಬೈಲ್‌ನಂತೆಯೇ ಕೆಲಸ ಮಾಡುತ್ತದೆ. ವಿದ್ಯುತ್‌ ಬಳಸಬೇಕಿದ್ದರೆ ಮುಂಗಡವಾಗಿ ರೀಚಾರ್ಜ್‌ ಮಾಡಬೇಕು. ಇದಕ್ಕಾಗಿ ಎಲ್ಲೆಡೆ ಪ್ರೀಪೇಯ್ಡ್‌ ಸ್ಮಾರ್ಟ್‌ ಮೀಟರ್‌ಗಳನ್ನೂ ಅಳವಡಿಕೆ ಮಾಡಲಾಗುತ್ತದೆ.

ಜಿಲ್ಲೆಯಲ್ಲಿ ಮೊದಲು

ಬೆಂಗಳೂರು, ಮೈಸೂರಿನ ಕೆಲವು ಭಾಗಗಳಲ್ಲಿ ಪ್ರೀಪೇಯ್ಡ್‌ ಸ್ಮಾರ್ಟ್‌ ಮೀಟರ್‌ಗಳು ಈಗಾಗಲೇ ಚಾಲ್ತಿಯಲ್ಲಿವೆ. ಉಡುಪಿ ಜಿಲ್ಲೆಯಲ್ಲಿ ಇದನ್ನು ಈ ವರ್ಷಾಂತ್ಯದೊಳಗೆ ಆರಂಭಿಸಲಾಗುತ್ತದೆ. 2025ರೊಳಗೆ ದೇಶಾದ್ಯಂತ ಪ್ರಿಪೇಯ್ಡ ಸ್ಮಾರ್ಟ್‌ ಮೀಟರ್‌ಗಳನ್ನು ಅಳವಡಿಸುವ ಉದ್ದೇಶವನ್ನು ಕೇಂದ್ರ ಸರಕಾರ ಹೊಂದಿದೆ.

ಮೊಬೈಲ್‌ನಿಂದಲೇ ರೀಚಾರ್ಜ್‌!

Advertisement

ಸ್ಮಾರ್ಟ್‌ ಮೀಟರ್‌ಗಳು ಗ್ರಾಹಕರಿಗೆ ತಮ್ಮ ವಿದ್ಯುತ್‌ ಬಳಕೆಯನ್ನು ಮಾಸಿಕ ಆಧಾರದ ಬದಲು ರಿಯಲ್‌ಟೈಮ್‌ ಬಳಕೆ ಆಧಾರದ ಮೇಲೆ ಪಾವತಿಯಾದ ಹಣವನ್ನು ತಿಳಿದುಕೊಳ್ಳಲು ಸಹಾಯ ಮಾಡಿಕೊಡುತ್ತದೆ.

ಪ್ರೀಪೇಯ್ಡ್‌ ವಿದ್ಯುತ್‌ ಸ್ಮಾರ್ಟ್‌ ಮೀಟರ್‌ ಅಳವಡಿಸಿಕೊಂಡ ಮೇಲೆ ಮೊಬೈಲ್‌ ನಿಂದಲೇ ವಿದ್ಯುತ್‌ ರೀಚಾರ್ಜ್‌ ಮಾಡ ಬಹುದಾಗಿದೆ. ಹಣವನ್ನು ಮೊದಲು ಪಾವತಿಸಿಯೂ ವಿದ್ಯುತ್‌ ಖರೀದಿ ಮಾಡಬಹುದು.

ಖಾತೆಯಲ್ಲಿ ಮೊತ್ತವಿಲ್ಲದಿದ್ದರೆ ಸಂಪರ್ಕ ಕಡಿತ

ಇದು ಮೀಟರ್‌ ರೀಡಿಂಗ್‌ಗಳನ್ನು ವಿದ್ಯುತ್‌ ಪೂರೈಕೆದಾರರಿಗೆ ಮತ್ತು ಗ್ರಾಹಕರಿಗೆ ನೆಟ್‌ ವರ್ಕ್‌ ಮೂಲಕ ಕಳುಹಿಸಬಹುದು. ಹೊಸ ವ್ಯವಸ್ಥೆಯು ಬಿಲ್ಲಿಂಗ್‌ ಪ್ರಕ್ರಿಯೆಯಲ್ಲಿ ಸಿಬಂದಿಯ ಹಸ್ತಕ್ಷೇಪ ಕಡಿಮೆ ಮಾಡಿ ಆ ಪ್ರದೇಶದಲ್ಲಿ ಎಷ್ಟು ಪ್ರಮಾಣದ ವಿದ್ಯುತ್‌ ಅಗತ್ಯವಿದೆ ಎಂಬ ಮಾಹಿತಿಯನ್ನು ಮೆಸ್ಕಾಂಗಳಿಗೆ ರವಾನಿಸುತ್ತದೆ. ಖಾತೆಯಲ್ಲಿ ಮೊತ್ತ ವಿಲ್ಲದಿದ್ದರೆ ವಿದ್ಯುತ್‌ ಸಂಪರ್ಕ ಕಡಿತಗೊಳ್ಳುತ್ತದೆ.

ಮೊಬೈಲ್‌ಗೆ ಸಂದೇಶ

ತಿಂಗಳಿಗೆ ಇಂತಿಷ್ಟು ಮೊತ್ತ ರೀಚಾರ್ಜ್‌ ಮಾಡಿ ಅದು ಮುಗಿಯುವ ಕೆಲವು ಕ್ಷಣಗಳ ಮುನ್ನ ನಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಸಂದೇಶ ಬರುತ್ತದೆ. ಈ ಸಮಯದಲ್ಲಿ ನಾವು ವಿದ್ಯುತ್‌ ಬಳಕೆಯನ್ನು ಕಡಿಮೆ ಮಾಡಬಹುದು ಅಥವಾ ರೀಚಾರ್ಜ್‌ ಮಾಡಿಸಿಕೊಳ್ಳಬಹುದು. ಇದೇ ರೀತಿ ಗ್ರಿಡ್‌ಗಳಲ್ಲಿಯೂ ವಿದ್ಯುತ್‌ ಸಂಗ್ರಹ ಕಡಿಮೆಯಾದರೆ ಸಂದೇಶ ಬರುವ ವ್ಯವಸ್ಥೆಯನ್ನು ಮಾಡಲಾಗಿದೆ.

ಉಪಯೋಗವೇನು?

ಮೀಟರ್‌ ಬಿಲ್ಲಿಂಗ್‌, ಕಲೆಕ್ಷನ್‌ಗೆಂದು ಮನೆ ಮನೆಗೆ ತಿರುಗುವ ಪ್ರಮೇಯ ಹೋಗಲಿದೆ. ಜತೆಗೆ ವಿದ್ಯುತ್‌ ಬಿಲ್‌ನ ಕಲೆಕ್ಷನ್‌ ವಿಚಾರದಲ್ಲಿ ನಡೆಯುತ್ತಿರುವ ಅವ್ಯವಹಾರವೂ ತಪ್ಪಲಿದೆ. ಕಾನೂನು ಬಾಹಿರವಾಗಿ ತಂತಿ ಕಂಬಗಳ ಸಹಾಯದಿಂದ ವಿದ್ಯುತ್‌ ಸಂಪರ್ಕ ಗಿಟ್ಟಿಸಿಕೊಳ್ಳುವವರನ್ನು ಸುಲಭದಲ್ಲಿ ಪತ್ತೆ ಹಚ್ಚಲೂ ಇದರಿಂದ ಸಾಧ್ಯವಾಗಲಿದೆ.

-ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next