Advertisement

ಖಾಲಿ ಹುದ್ದೆ ಭರ್ತಿಯಾದರೆ ಯೋಜಿತ ಕಾರ್ಯಗಳ ಅನುಷ್ಠಾನ 

04:19 PM Jan 17, 2018 | Team Udayavani |

ಸುಳ್ಯ : ಸರಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆ ಭರ್ತಿಗೆ ಕ್ರಮ ಕೈಗೊಂಡರೆ ಮಾತ್ರ ಪ್ರಣಾಳಿಕೆಯಲ್ಲಿನ ಎಲ್ಲ ಅಂಶಗಳನ್ನು ಅನುಷ್ಠಾನಕ್ಕೆ ತರಬಹುದೆಂದು ಮಾಜಿ ಸಚಿವ, ಬಿಜೆಪಿ ರಾಜ್ಯ ಪ್ರಣಾಳಿಕೆ ಸಮಿತಿ ಸದಸ್ಯ ಜಯಪ್ರಕಾಶ್‌ ಹೆಗ್ಡೆ ಹೇಳಿದರು. ನಗರದ ಶ್ರೀ ವೆಂಕಟರಮಣ ದೇವ ಮಂದಿರದ ಸಭಾಭವನದಲ್ಲಿ ಬಿಜೆಪಿ ಚುನಾವಣ ಪ್ರಣಾಳಿಕೆ ತಯಾರಿ ಚಿಂತನ ಸಭೆಯಲ್ಲಿ ಚಿಂತಕರ ಅಭಿಪ್ರಾಯ ಸಂಗ್ರಹಿಸಿ ಅವರು ಮಾತನಾಡಿದರು.

Advertisement

ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿ ಯಲ್ಲಿ ಚಿಂತಕರ ಅಭಿಪ್ರಾಯ ಸಂಗ್ರಹಿಸಿ, ಅದನ್ನು ಪ್ರಣಾಳಿಕೆ ಮೂಲಕ ಹೊರತಂದು, ಅನುಷ್ಠಾನಗೊಳಿಸುವ ಉದ್ದೇಶ ಹೊಂದಲಾಗಿದೆ. ಅದಕ್ಕೆ ಪೂರ್ವಭಾವಿಯಾಗಿ, ಚಿಂತಕರು ವ್ಯಕ್ತಪಡಿಸಿದ ಅಭಿಪ್ರಾಯದಂತೆ, ಸರಕಾರಿ ಇಲಾಖೆ, ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಬೇಕು. ಅನುಷ್ಠಾನ ಇಲಾಖೆಯಲ್ಲಿಯೇ ಸಿಬಂದಿ ಇಲ್ಲದಿದ್ದರೆ, ಪ್ರಣಾಳಿಕೆ ಜನರನ್ನು ತಲುಪಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಜನಾಭಿಪ್ರಾಯ ಆಧರಿಸಿ ಜನಪ್ರತಿನಿಧಿಗಳು ಮುನ್ನಡೆಯುವುದು ಪದ್ಧತಿ. ಆದರೆ ಅದು ಕಾರ್ಯರೂಪಕ್ಕೆ ಬರುತ್ತಿಲ್ಲ. ಈ ಬಾರಿ ಬಿಜೆಪಿ ಪಕ್ಷ ಬೇರೆ-ಬೇರೆ ಕ್ಷೇತ್ರಗಳ ಸಾಧಕರ ಅಭಿಪ್ರಾಯ ಆಲಿಸಿ, ಅದನ್ನು ಪ್ರಣಾಳಿಕೆ ಮೂಲಕ ಹೊರ ತಂದು ಅನುಷ್ಠಾನಿಸುವ ಪ್ರಯತ್ನದಲ್ಲಿರುವುದು ಜನಾಭಿಪ್ರಾಯ ಆಧರಿಸಿದ ಆಡಳಿತದ ಹೆಜ್ಜೆ ಎಂದು ಅವರು ಹೇಳಿದರು.

ನಾವು ಜನರ ಸೇವಕರು. ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ನಮ್ಮ ಜವಾಬ್ದಾರಿ. ಇಲ್ಲಿ ಸಂಗ್ರಹವಾದ ಎಲ್ಲ ಅಭಿಪ್ರಾಯಗಳು ಪ್ರಣಾಳಿಕೆ ಸಮಿತಿ ಸಭೆಯಲ್ಲಿ ಚರ್ಚೆಗೆ ಬರಲಿವೆ. ಫೆ. 19ರಂದು ಸಭೆ ನಡೆಯಲಿದ್ದು, ಅಲ್ಲಿ ಜನಾಭಿಪ್ರಾಯದ ನಿಲುವುಗಳನ್ನು ಮಂಡಿಸಲಾಗುವುದು ಎಂದರು.

ನೋಟ್‌ ಬ್ಯಾನ್‌ನಿಂದ ಸಮಸ್ಯೆಗೆ ಈಡಾದವರೆಂದರೆ ತೆರಿಗೆ ಕಟ್ಟದೆ ಹಣವನ್ನು ಮನೆಯಲ್ಲಿಟ್ಟವರು ಮಾತ್ರ. ಉಳಿದವರಿಗೆ ಸಮಸ್ಯೆ ಆಗಿಲ್ಲ. ಯೋಜನೆಗಳನ್ನು ಜಾರಿ ಮಾಡುವ ಮುನ್ನ ಅದರ ಸಾಧಕ – ಬಾಧಕಗಳ ಬಗ್ಗೆ ತೀರ್ಮಾನಿಸುವುದು ಸಾಧ್ಯವಿಲ್ಲ. ಜಿಎಸ್‌ಟಿ, ನೋಟ್‌ ಬ್ಯಾನ್‌ ಜಾರಿ ಅನಂತರ ಜನರಿಗೆ ತೊಂದರೆ ಆಗಿರುವ ವಿಚಾರಗಳಿಗೆ ಪರಿಹಾರ ಕಂಡುಕೊಂಡಿದ್ದು, ಈ ನಿರ್ಧಾರದಿಂದ ದೇಶಕ್ಕೆ ಒಳಿತಾಗಲಿದೆ ಎಂದು ಹೇಳಿದರು.

Advertisement

ಶಾಸಕ ಎಸ್‌. ಅಂಗಾರ ಮಾತನಾಡಿ, ಅಧಿಕಾರ ಮುಖ್ಯವಾಗಬಾರದು. ಕಾರ್ಯಕರ್ತರಿಂದ ಹಿಡಿದು ನಾಯಕರ ತನಕ ಪಕ್ಷದ ಸಿದ್ಧಾಂತವೇ ಮುಖ್ಯವಾಗಬೇಕು. ಆಗ ಅಲ್ಲಿನ ಉತ್ತಮ ಉದ್ದೇಶ ಆಡಳಿತದ ಮೂಲಕವೂ ಅಭಿವ್ಯಕ್ತಗೊಳ್ಳಲು ಸಾಧ್ಯ ಎಂದರು.

ಜಿಲ್ಲಾ ಸಂಚಾಲಕ ವಿಶ್ವೇಶ್ವರ ಭಟ್‌ ಬಂಗಾರಡ್ಕ ಪ್ರಸ್ತಾವನೆಗೈದು, ಚಿಂತನ ಸಭೆಯಲ್ಲಿ ವಿವಿಧ ಕ್ಷೇತ್ರಗಳ ಚಿಂತಕರ ಅಭಿಪ್ರಾಯ ಆಧರಿಸಿ, ಅದನ್ನು ಪ್ರಣಾಳಿಕೆಯ ಸಂದರ್ಭದಲ್ಲಿ ಪರಿಗಣಿಸುವುದಾಗಿದೆ. ಸುಳ್ಯದಲ್ಲಿ ವ್ಯಕ್ತವಾದ ಅಭಿಪ್ರಾಯಕ್ಕೆ ಆದ್ಯತೆ ನೀಡಲಾಗುವುದು ಎಂದರು.

ಎ.ವಿ. ತೀರ್ಥರಾಮ ಉಪಸ್ಥಿತರಿದ್ದರು. ರಾಮ ಪ್ರಸಾದ್‌ ಕಾಂಚೋಡು ಪ್ರಾರ್ಥಿಸಿದರು. ವೆಂಕಟ ವಳಲಂಬೆ ಸ್ವಾಗತಿಸಿ, ಸುಬೋಧ್‌ ರೈ ವಂದಿಸಿದರು. ಕೃಪಾಶಂಕರ ನಿರೂಪಿಸಿದರು.

ಕಿಂಡಿ ಅಣೆಕಟ್ಟು
ಕುಡಿಯುವ ನೀರಿನ ಸಮಸ್ಯೆ ಅತ್ಯಂತ ಗಂಭೀರವಾಗಿದ್ದು, ಅಲ್ಲಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಒತ್ತು ನೀಡಬೇಕು. ಇದರಿಂದ ಸರಕಾರದ ಹೊರೆಯು ತಗ್ಗುತ್ತದೆ. ಜಿಎಸ್‌ ಟಿಯಿಂದ ಕೃಷಿಕರಿಗೆ ತೊಂದರೆ ಇಲ್ಲ. ಕೃಷಿ ಕ್ಷೇತ್ರಕ್ಕೆ ವಿಧಿಸಿದ ತೆರಿಗೆ ದರವನ್ನು ಇಳಿಸಲಾಗಿದೆ ಎಂದು ಜಯಪ್ರಕಾಶ್‌ ಹೆಗ್ಡೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next