Advertisement

Health: ನೂತನ ಗರ್ಭನಿರೋಧಕ ವಿಧಾನ ಅನುಷ್ಠಾನ

11:47 PM Sep 30, 2023 | Team Udayavani |

ಬೆಂಗಳೂರು: ಆರೋಗ್ಯಕರ ಜನನದ ಅಂತರ, ತಾಯಿ ಹಾಗೂ ಮಗುವಿನ ಮರಣ ಪ್ರಮಾಣವನ್ನು ತಡೆಗಟ್ಟಲು ರಾಷ್ಟ್ರೀಯ ಕುಟುಂಬ ಯೋಜನೆ ಕಾರ್ಯಕ್ರಮದಡಿಯಲ್ಲಿ ಎರಡು ಹೊಸ ಗರ್ಭನಿರೋಧಕ ವಿಧಾನಗಳನ್ನು ಪರಿಚಯಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಮೊದಲ ಹಂತದಲ್ಲಿ ರಾಜ್ಯದ ನಾಲ್ಕು ಜಿಲ್ಲೆಗಳು ಇದಕ್ಕೆ ಆಯ್ಕೆಯಾಗಿವೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಷ್ಟ್ರೀಯ ಕುಟುಂಬ ಯೋಜನೆ ಕಾರ್ಯಕ್ರಮದಡಿಯಲ್ಲಿ “ಸಬ್ಡರ್ಮಲ್‌ ಸಿಂಗಲ್‌- ರಾಡ್‌ ಇಂಪ್ಲಾಂಟ್‌, ಸಬ್‌ಕ್ಯುಟೇನಿ
ಯಸ್‌ ಇಂಜೆಕ್ಷನ್‌’ ಗರ್ಭನಿರೋಧಕ ವಿಧಾನಗಳ ಪರಿಚಯಿಸಲು ಮುಂದಾಗಿದೆ. ಇದು ಅನಪೇಕ್ಷಿತ ಗರ್ಭಧಾರಣೆ ಸಂಖ್ಯೆ ಹಾಗೂ ಆರೋಗ್ಯಕರ ಜನನದ ಅಂತರ ಕಡಿಮೆ ಮಾಡಲು ಸಹಾಯಕವಾಗಿದೆ. ಅಸ್ಸಾಂ, ಬಿಹಾರ, ದಿಲ್ಲಿ, ಗುಜರಾತ್‌, ಕರ್ನಾಟಕ, ಒಡಿಶಾ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಲ ಸಹಿತ 10 ರಾಜ್ಯಗಳು ಈ ಯೋಜನೆಗೆ ಆಯ್ಕೆಯಾಗಿವೆ. ಒಟ್ಟು 40 ಜಿಲ್ಲೆಗಳಲ್ಲಿ ಕೇಂದ್ರ ಆರೋಗ್ಯ ಇಲಾಖೆಯ ಯೋಜನೆಯನ್ನು ಪ್ರಾಯೋಗಿಕ ಅನುಷ್ಠಾನಕ್ಕೆ ತರಲಾಗುತ್ತದೆ.

Advertisement

ನೂತನ ವಿಧಾನಗಳು
ಗರ್ಭನಿರೋಧಕ ವಿಧಾನಗಳಾದ ಸಬxರ್ಮಲ್‌ ಸಿಂಗಲ್‌-ರಾಡ್‌ ಇಂಪ್ಲಾಂಟ್‌, ಸಬ್‌ಕ್ಯುಟೇನಿಯಸ್‌ ಇಂಜೆಕ್ಷನ್‌ಗಳನ್ನು ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ ರಾಜ್ಯದ 4 ಜಿಲ್ಲೆಯಲ್ಲಿ ಅನುಷ್ಠಾನವಾಗಲಿದೆ. ಇದಕ್ಕಾಗಿ ಬೆಂಗಳೂರು, ಮೈಸೂರು, ಯಾದಗಿರಿ ಹಾಗೂ ಬೀದರ್‌ ಜಿಲ್ಲೆ ಆಯ್ಕೆ ಮಾಡಲಾಗಿದೆ. ಆರೋಗ್ಯ ಇಲಾಖೆಯು ಹೊಸ ಗರ್ಭನಿರೋಧಕ ವಿಧಾನಗಳನ್ನು ಅಕ್ಟೋಬರ್‌ ಎರಡನೇ ವಾರದಲ್ಲಿ ಪ್ರಾಯೋಗಿಕವಾಗಿ ಹೊರತರಲು ಕೆಲಸ ಮಾಡುತ್ತಿದೆ.

ಎಲ್ಲೆಲ್ಲಿ ಎಷ್ಟು ಲಭ್ಯ?
ಬೆಂಗಳೂರು ಹಾಗೂ ಬೀದರ್‌ ಜಿಲ್ಲೆಯಲ್ಲಿ ಇಂಪ್ಲಾಂಟ್‌ ಮತ್ತು ಮೈಸೂರು ಹಾಗೂ ಯಾದಗಿರಿಯಲ್ಲಿ ಸಬ್‌ಕ್ಯುಟೇನಿಯಸ್‌ ಇಂಜೆಕ್ಷನ್‌ ಗರ್ಭ ನಿರೋಧಕ ವಿಧಾನ ಪರಿಚಯಿಸ
ಲಾಗುತ್ತಿದೆ. ಕೇಂದ್ರ ಆರೋಗ್ಯ ಇಲಾಖೆಯಿಂದ 10,000 ಇಂಪ್ಲಾಂಟ್‌ಗಳು ಪೂರೈಕೆಯಾಗಿದ್ದು, ಇದನ್ನು ಕೆ.ಸಿ.ಜನರಲ್‌ ಆಸ್ಪತ್ರೆ, ವಾಣಿ ವಿಲಾಸ್‌ ಆಸ್ಪತ್ರೆ, ಬೀದರ್‌ ಸರಕಾರಿ ಹಾಗೂ ವೈದ್ಯಕೀಯ ಕಾಲೇಜಿನ ಆರೋಗ್ಯಾಧಿಕಾರಿಗಳು ಮಾತ್ರ ಅಳವಡಿಸಲಿದ್ದಾರೆ. ಸಬ್‌ಕ್ಯುಟೇನಿಯಸ್‌ ಇಂಜೆಕ್ಷನ್‌ ಮೈಸೂರು-ಯಾದಗಿರಿಯ ಜಿಲ್ಲಾಸ್ಪತ್ರೆ, ತಾಲೂಕು, ಪಿಎಚ್‌ಸಿ ಕೇಂದ್ರದಲ್ಲಿ ಮಾತ್ರ ಲಭ್ಯವಿರಲಿದೆ.

ಕಾರ್ಯವಿಧಾನ ಹೇಗೆ?
ಸಬ್ಡರ್ಮಲ್‌ ಸಿಂಗಲ್‌-ರಾಡ್‌ ಇಂಪ್ಲಾಂಟ್‌ ಅನ್ನು ಹೆರಿಗೆಯಾದ ಆರು ವಾರಗಳ ಬಳಿಕ ಮಹಿಳೆಗೆ ಆಳವಡಿಸಲಾಗುತ್ತದೆ. ಇದನ್ನು ತೋಳಿನ ಚರ್ಮದ ಅಡಿಯಲ್ಲಿ ಅಳವಡಿಸಲಾಗುತ್ತದೆ. ಇದು ಸರಳ, ಐದು ನಿಮಿಷಗಳ ವಿಧಾನವಾಗಿದೆ. ಇದು ಮೂರು ವರ್ಷಗಳ ವರೆಗೆ ಪರಿಣಾಮಕಾರಿಯಾಗಿರಲಿದೆ. ಮಧ್ಯದಲ್ಲಿ ಬೇಡವೆನಿಸಿದರೆ ತೆಗೆದು ಹಾಕಬಹುದಾಗಿದೆ. ಇನ್ನೂ ಸಬ್‌ಕ್ಯುಟೇನಿಯಸ್‌ ಇಂಜೆಕ್ಷನ್‌ ಒಮ್ಮೆ ತೆಗೆದುಕೊಂಡರೆ ಮೂರು ತಿಂಗಳ ವರೆಗೆ ಪರಿಣಾಮಕಾರಿಯಾಗಿರುತ್ತದೆ. ಎರಡು ಪದ್ಧತಿಯಲ್ಲೂ ಅಡ್ಡ ಪರಿಣಾಮಗಳಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ.

ಮಗುವಿನ ನಡುವಿನ ಅಂತರ ಹಾಗೂ ತಾಯಿ ಆರೋಗ್ಯದ ದೃಷ್ಟಿಯಿಂದ ಕೇಂದ್ರ ಆರೋಗ್ಯ ಇಲಾಖೆ ಎರಡು ಹೊಸ ಗರ್ಭನಿರೋಧಕ ಆಯ್ಕೆಗಳನ್ನು ಪರಿಚಯಿಸುತ್ತಿದೆ. ಪ್ರಾಯೋಗಿಕವಾಗಿ ನಾಲ್ಕು ಜಿಲ್ಲೆಗಳು ಆಯ್ಕೆಯಾಗಿವೆ. ಸಬ್ಡರ್ಮಲ್‌ ಸಿಂಗಲ್‌-ರಾಡ್‌ ಇಂಪ್ಲಾಂಟ್‌ನ್ನು ಇದುವರೆಗೆ 150 ಮಹಿಳೆಯರು ಆಳವಡಿಸಿಕೊಂಡಿದ್ದಾರೆ.
-ಡಾ| ಚಂದ್ರಿಕಾ, ಉಪನಿರ್ದೇಶಕಿ, ಆರೋಗ್ಯ ಇಲಾಖೆ (ಕುಟುಂಬ ಯೋಜನೆ)

Advertisement

 ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next