Advertisement
2022-23ನೇ ಸಾಲಿನಲ್ಲಿ ಆರಂಭದಿಂದಲೇ (ಜೂ. 1) ರಾಜ್ಯದ 20 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ 3ರಿಂದ 5 ವರ್ಷದ ಮಕ್ಕಳಿಗೆ ಪ್ರಾರಂಭಿಕ ಬಾಲ್ಯ ಪೂರ್ವ ಆರೈಕೆ ಮತ್ತು ಶಿಕ್ಷಣ ಕಲಿಕೆ (ಇಸಿಸಿಇ) ಹಂತದಲ್ಲಿ ಎನ್‌ಇಪಿ ಜಾರಿ ಮಾಡುವುದಾಗಿ ಸರಕಾರ ಘೋಷಿಸಿತ್ತು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಎನ್‌ಇಪಿ ಕಾರ್ಯಕ್ರಮ ಅನುಷ್ಠಾನಗೊಂಡಿಲ್ಲ. ಹೀಗಾಗಿ, ದೇಶದಲ್ಲಿಯೇ ಮೊದಲ ರಾಜ್ಯವಾಗಿ ಕರ್ನಾಟಕವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡಲಿದೆ ಎಂಬುದು ಘೋಷಣೆಯಾಗಿಯೇ ಉಳಿದಂತಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ 3ರಿಂದ8 ವರ್ಷದ ಮಕ್ಕಳಿಗೆ ಮೊದಲ ಹಂತದಲ್ಲಿ ಶಿಕ್ಷಣ ನೀಡಲಾಗುತ್ತದೆ. (ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಿಕ್ಷಣ) ಅಂಗನವಾಡಿಯಲ್ಲಿ ಕಲಿಯಲಿರುವ 3ರಿಂದ 6 ಮಕ್ಕಳಿಗೆ ಹಾಗೂ ಶಾಲೆಯಲ್ಲಿ 1 ಮತ್ತು 2ನೇ ತರಗತಿ ಶಿಕ್ಷಣ ನೀಡಲಾಗುತ್ತದೆ. ಈ ಮಕ್ಕಳಿಗೆ ಏನನ್ನು ಬೋಧನೆ ಮಾಡಬೇಕು ಎಂಬ ಪಠ್ಯಕ್ರಮ ವಿನ್ಯಾಸಗೊಳಿಸುವುದಕ್ಕಾಗಿ 6 ಉಪ ಸಮಿತಿಗಳನ್ನು ರಚನೆ ಮಾಡಿ ಎ. 19ರಂದು ಆದೇಶ ಹೊರಡಿಸಿದೆ.
ಆದರೆ, ಈ ಸಮಿತಿಗಳು ಮಕ್ಕಳಿಗೆ ಏನನ್ನು ಬೋಧನೆ ಮಾಡಬೇಕೆಂಬ ಪಠ್ಯಕ್ರಮವನ್ನು ಈ ವರೆಗೆ ನೀಡಿಲ್ಲ. ಹೀಗಾಗಿ, ಅಂಗನವಾಡಿಗಳಲ್ಲಿ ಈಗಾಗಲೇ ಜಾರಿಯಲ್ಲಿರುವ ಚಿಲಿಪಿಲಿ ಕಾರ್ಯಕ್ರಮ ಗಳನ್ನೇ ಬೋಧನೆ ಮಾಡಲಾಗುತ್ತಿದೆ. ಜತೆಗೆ, ಬಾಲ್ಯ ಪೂರ್ವ ಆರೈಕೆ ಕಲಿಕಾ ಹಂತವು ಮಕ್ಕಳಿಗೆ ಚಟುವಟಿಕೆ ಯಾಧಾರಿತವಾಗಿರುತ್ತದೆ ಎಂದು ಹೇಳಲಾಗಿದೆ. ಮಕ್ಕಳು ಚಟುವಟಿಕೆಗಳನ್ನು ಮಾಡಲು ಅಗತ್ಯವಿರುವ ಕಲಿಕಾ ಸಾಮಗ್ರಿಗಳನ್ನು ಅಂಗನವಾಡಿಗಳಿಗೆ ತಲುಪಿಸಿಲ್ಲ. ಮಕ್ಕಳಲ್ಲಿ ಕುತೂಹಲವನ್ನು ಉಂಟುಮಾಡುವ ಅಕ್ಷರಮಾಲೆ, ಭಾಷೆಗಳು, ಅಂಕಿಗಳು, ಎಣಿಕೆ, ಬಣ್ಣಗಳು, ಒಳಾಂಗಣ ಮತ್ತು ಹೊರಾಂಗಣ ಆಟಗಳು, ಚಿತ್ರ ಬರೆಯುವುದು, ನಾಟಕ, ಗೊಂಬೆಯಾಟಗಳನ್ನು ಹೊಂದಿರುತ್ತದೆ. ಇದಕ್ಕೆ ಬೇಕಾದ ಸಾಮಗ್ರಿಗಳನ್ನು ಅಂಗನವಾಡಿಗೆ ಇನ್ನೂ ವಿತರಣೆ ಮಾಡಿಲ್ಲ ಎಂದು ತಿಳಿದು ಬಂದಿದೆ.
Related Articles
ಅಂಗನವಾಡಿ ಕಾರ್ಯಕರ್ತೆಯರಿಗೆ ಒಂದು ತಿಂಗಳ ತರಬೇತಿ ಕಾರ್ಯಕ್ರಮವಾಗಬೇಕು. 0-8 ವರ್ಷದ ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಸಮುದಾಯದಲ್ಲಿರುವ ಸ್ಥಳೀಯ ಸಂಸ್ಥೆಗಳು/ಗ್ರಾಮ ಪಂಚಾಯತ್, ಸ್ವ ಸಹಾಯ ಸಂಘಗಳು, ಬಾಲವಿಕಾಸ ಸಮತಿಗಳ ಕರ್ತವ್ಯದ ಬಗ್ಗೆ ತಿಳಿಸಿಕೊಡಬೇಕಿದೆ.
Advertisement
ಕನಿಷ್ಠ 6 ತಿಂಗಳು ಬೇಕುರಾಜ್ಯದಲ್ಲಿ ಈ ವರ್ಷವೇ ಎನ್‌ಇಪಿ ಜಾರಿ ಮಾಡುವುದಾದರೂ ಕನಿಷ್ಠ 6 ತಿಂಗಳ ಸಮಯ ಬೇಕಾಗುತ್ತದೆ. ಉಪ ಸಮಿತಿಗಳು ನೀಡುವ ವರದಿಯನ್ನು ಚರ್ಚಿಸಿ ನಿರ್ಧರಿಸಿದ ಬಳಿಕ ಅನುಷ್ಠಾನ ಕಾರ್ಯಕ್ಕೆ ಮುಂದಾಗಬೇಕಾಗುತ್ತದೆ. ಈ ಸಂಬಂಧ ಇಲಾಖೆ ಹಂತದಲ್ಲಿ ಸಾಕಷ್ಟು ಕೆಲಸಗಳು ನಡೆಯಬೇಕಿದೆ. ಆದರೆ, ಸರಕಾರ ಘೋಷಿಸಿರುವಷ್ಟು ಯೋಜನೆ ರೂಪಿಸಿ ಅನುಷ್ಠಾನ ಮಾಡುವುದು ಸುಲಭದ ಕೆಲಸವಲ್ಲ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿದೆ. ಅಂಗನವಾಡಿಗಳಲ್ಲಿ ಎನ್‌ಇಪಿ ಜಾರಿ ಸಂಬಂಧ ಕೆಲಸಗಳು ನಡೆಯುತ್ತಿವೆ. ವಿವಿಧ 6 ಉಪ ಸಮಿತಿಗಳನ್ನು ರಚನೆ ಮಾಡಿದ್ದು, ವರದಿ ನೀಡಿದ ಅನಂತರ ಅನುಷ್ಠಾನಕ್ಕೆ ಮುಂದಾಗುತ್ತೇವೆ.
– ಡಾ| ಎಂ.ಟಿ. ರೇಜು,
ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ – ಎನ್.ಎಲ್. ಶಿವಮಾದು