Advertisement

HSRP ನೋಂದಣಿ ಫ‌ಲಕ ಅಳವಡಿಕೆ: ಗಡುವು ವಿಸ್ತರಣೆ ಸಾಧ್ಯತೆ

12:48 AM Nov 08, 2023 | Team Udayavani |

ಬೆಂಗಳೂರು: ನಿತ್ಯ ಕನಿಷ್ಠ ಎರಡು ಲಕ್ಷ ವಾಹನಗಳ ನೋಂದಣಿ ಫ‌ಲಕಗಳು ಎಚ್‌ಎಸ್‌ಆರ್‌ಪಿಗೆ ಮಾರ್ಪಾಡು ಆಗಬೇಕು. ಆದರೆ, ಇದುವರೆಗೆ ಅಳವಡಿಕೆ ಆಗಿದ್ದೇ ಎರಡು ಲಕ್ಷ ವಾಹನಗಳು. ಈ ಮಂದಗತಿಯ ಸ್ಪಂದನೆ ಹಿನ್ನೆಲೆಯಲ್ಲಿ ಗಡುವು ವಿಸ್ತರಣೆಗೆ ಸಾರಿಗೆ ಇಲಾಖೆ ಚಿಂತನೆ ನಡೆಸಿದ್ದು, ಈ ಸಂಬಂಧ ಶೀಘ್ರ ಆದೇಶ ಹೊರಬೀಳುವ ಸಾಧ್ಯತೆ ಇದೆ.

Advertisement

ವಾಹನಗಳ ಹಳೆಯ ನಂಬರ್‌ ಪ್ಲೇಟ್‌ ಬದಲಾಯಿಸಿ ಅತಿಸುರಕ್ಷಿತ ನೋಂದಣಿ ಫ‌ಲಕ (ಎಚ್‌ಎಸ್‌ಆರ್‌ಪಿ) ಅಳವಡಿಕೆ ಕಡ್ಡಾಯಗೊಳಿಸಲಾಗಿದ್ದು, ಇದೇ ನ. 17ರ ಗಡುವು ವಿಧಿಸಲಾಗಿದೆ. ಆದರೆ, ಈ ಬಗ್ಗೆ ಅರಿವಿನ ಕೊರತೆಯಿಂದ ನಿರೀಕ್ಷಿತ ಮಟ್ಟದಲ್ಲಿ ಅಳವಡಿಕೆ ಕಾರ್ಯ ಚುರುಕುಗೊಂಡಿಲ್ಲ. ಆದ್ದರಿಂದ ಈ ಗಡುವನ್ನು ಕನಿಷ್ಠ ಇನ್ನೂ ಎರಡು-ಮೂರು ತಿಂಗಳು ವಿಸ್ತರಿಸಲು ಸಾರಿಗೆ ಇಲಾಖೆ ಉದ್ದೇಶಿಸಿದೆ.

ಸಾಮಾನ್ಯ ನೋಂದಣಿ ಫ‌ಲಕಗಳನ್ನು ಬದಲಾಯಿಸಿ ಎಚ್‌ಎಸ್‌ಆರ್‌ಪಿ ಅಳವಡಿಸಿಕೊಂಡ ವಾಹನಗಳ ಸಂಖ್ಯೆ ರಾಜ್ಯದಲ್ಲಿ ಅಂದಾಜು 2ರಿಂದ 2.5 ಲಕ್ಷ ಆಗಿದೆ. ಆದರೆ, ಇನ್ನೂ 1.70 ಕೋಟಿ ವಾಹನಗಳ ಫ‌ಲಕಗಳು ಎಚ್‌ಎಸ್‌ಆರ್‌ಪಿಗೆ ಪರಿವರ್ತನೆ ಆಗಬೇಕಿದೆ. ಈ ಹಿನ್ನೆಲೆಯಲ್ಲಿ ಅವಧಿ ವಿಸ್ತರಣೆ ಮಾಡಬೇಕು ಎಂಬ ಚಿಂತನೆ ಇದೆ. ಆದರೆ, ಎಷ್ಟು ದಿನಗಳು ಎಂಬುದು ಇನ್ನೂ ನಿರ್ಧಾರ ಆಗಿಲ್ಲ. ಶೀಘ್ರ ಈ ನಿಟ್ಟಿನಲ್ಲಿ ಸ್ಪಷ್ಟ ಚಿತ್ರಣ ನೀಡಲಾಗುವುದು ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ (ಪ್ರವರ್ತನ) ಸಿ. ಮಲ್ಲಿಕಾರ್ಜುನ “ಉದಯವಾಣಿ’ಗೆ ತಿಳಿಸಿದರು.

ಅವಧಿ ವಿಸ್ತರಣೆಯೊಂದಿಗೆ ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ವ್ಯಾಪಕ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಾಗುವುದು. ವಾಹನ ಸವಾರರ ಸಹಕಾರ ಕೂಡ ಈ ನಿಟ್ಟಿನಲ್ಲಿ ಮುಖ್ಯವಾಗಿದೆ. ಹಾಗಾಗಿ, ಈ ಅಭಿಯಾನಕ್ಕೆ ಕೈಜೋಡಿಸಬೇಕು. ಒಇಎಂ (ಒರಿಜಿನಲ್‌ ಇಕ್ವಿಪ್‌ಮೆಂಟ್‌ ಮ್ಯಾನ್ಯುಫ್ಯಾಕ್ಚರರ್‌)ಗಳಿಂದ ಅನುಮೋದಿಸಲ್ಪಟ್ಟ ಮಾರಾಟಗಾರರು ಮತ್ತು ವಿತರಕರು (ಡೀಲರ್‌) ಮಾತ್ರ ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡುತ್ತಾರೆ. ಅದೂ ಆನ್‌ಲೈನ್‌ ಮೂಲಕವೇ ಕೋರಿಕೆ ಸಲ್ಲಿಸುವುದು ಅಗತ್ಯ ಮತ್ತು ಅನಿವಾರ್ಯ ಎಂದು ಮಲ್ಲಿಕಾರ್ಜುನ ಹೇಳಿದರು.

ವೆಬ್‌ಸೈಟ್‌ನಲ್ಲಿ ನೋಂದಣಿಗೆ ಅವಕಾಶ
ಇದಕ್ಕಾಗಿ ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಅಲ್ಲಿ ಎಚ್‌ಎಸ್‌ಆರ್‌ಪಿಗೆ ಕೋರಿಕೆ ಸಲ್ಲಿಸಬೇಕು. ಅನಂತರ ನೋಂದಣಿ ಪತ್ರ ಒಳಗೊಂಡಂತೆ ಅಗತ್ಯ ದಾಖಲೆಗಳನ್ನು ದಾಖಲಿಸಬೇಕು. ಅದು ಸಂಬಂಧಪಟ್ಟ ಒಇಎಂಗೆ ಹೋಗುತ್ತದೆ. ಅಲ್ಲಿ ಹತ್ತಿರದ ಡೀಲರ್‌ ಅಥವಾ ಮಾರಾಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕು. ಅನಂತರ ದಿನಾಂಕ ಮತ್ತು ಸಮಯ ನಿಗದಿಯಾಗುತ್ತದೆ. ಜತೆಗೆ ಆಯಾ ಸಮೀಪದ ಡೀಲರ್‌ಗೂ ಸಂದೇಶ ತಲುಪುತ್ತದೆ. ನಿಗದಿಪಡಿಸಿದ ಅವಧಿಯಲ್ಲಿ ಖುದ್ದು ವಾಹನದೊಂದಿಗೆ ಭೇಟಿ ನೀಡಿ ಅಳವಡಿಕೊಳ್ಳಬೇಕಾಗುತ್ತದೆ. ಮೂಲಗಳ ಪ್ರಕಾರ ದೇಶದಲ್ಲಿ 23 ಜನ ಒಇಎಂಗಳಿದ್ದು, ರಾಜ್ಯದಲ್ಲಿ ಸುಮಾರು 300-400 ಮಾರಾಟಗಾರರು ಅಥವಾ ವಿತರಕರು ಇರಬಹುದು ಎನ್ನಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next