Advertisement
ಟ್ರಾಫಿಕ್ ಸಮಸ್ಯೆಗೆ ಸದ್ಯ ಜಿಲ್ಲೆಯಲ್ಲಿ ಪರಿಹಾರ ಕಾಣುವ ಲಕ್ಷಣ ಗೋಚರಿಸುತ್ತಿದೆ. ಆಧುನಿಕ ಸಿಗ್ನಲ್ ನಗರದ ಮೂಲಕ ಹಾದುಹೋಗುವ ರಾ. ಹೆದ್ದಾರಿ ಸಹಿತ 12 ಕಡೆಗಳಲ್ಲಿ ಸಂಚಾರ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಸ್ಮಾರ್ಟ್ ಟ್ರಾಫಿಕ್ ಜಂಕ್ಷನ್ ರೂಪಿಸಲಾಗುತ್ತಿದೆ. ವಾಹನ ಸವಾರರು ಸಂಚಾರಿ ನಿಯಮ ಉಲ್ಲಂಘಿಸಿದರೆ ತತ್‌ಕ್ಷಣವೇ ಆರ್‌ಟಿಒ ಆಫೀಸ್‌ಗೆ ಮಾಹಿತಿ ತಲುಪಲಿದೆ. ಇದರಿಂದ ಸಂಚಾರಿ ಠಾಣೆಯ ಪೊಲೀಸರಿಗೆ ಶ್ರಮ ಕಡಿಮೆ ಆಗಲಿದೆ.
ಹೈಟೆಕ್ ಟ್ರಾಫಿಕ್ ಡೀಸ್‌ಪ್ಲೇ ಮ್ಯಾನೇಜ್ಮೆಂಟ್ ಸಿಸ್ಟಂನಲ್ಲಿ ಅಳವಡಿಸಲಾದ ಕಣ್ಗಾವಲು ಕೆಮರಾ ನಿಯಮ ಉಲ್ಲಂಘಿಸಿ ವಾಹನದ ಮಾಹಿತಿಯನ್ನು ಆರ್‌ಟಿಒ ಕಚೇರಿಗೆ ಮಾಹಿತಿ ಕಳುಹಿಸಲಿದೆ. ಜತೆಗೆ ತತ್‌ಕ್ಷಣವೇ ಇನ್ನೊಂದು ಸಿಗ್ನಲ್‌ನಲ್ಲಿ ನಿಯಮ ವಾಹನ ಮತ್ತು ಅದರಲ್ಲಿರುವ ವ್ಯಕ್ತಿಯ ಫೋಟೋ ಎಲ್‌ಇಡಿ ಪರದೆ ಮೇಲೆ ಬಿತ್ತರವಾಗಲಿದೆ. ಇದರಿಂದಾಗುವ ಮುಜುಗರವನ್ನು ತಡೆಯಲು ಸವಾರರು ಸಂಚಾರ ನಿಯಮ ಪಾಲನೆ ಮಾಡುವ ಸಾಧ್ಯತೆ ಹೆಚ್ಚಿವೆ. ಜತೆಗೆ ಮುಂದಿನ ಸಿಗ್ನಲ್‌ನ ಟ್ರಾಫಿಕ್ ದಟ್ಟಣೆಯ ಮಾಹಿತಿ ಸಹ ಎಲ್‌ಇಡಿ ಪರದೆಯಲ್ಲಿ ಪ್ರಸಾರವಾಗಲಿದೆ. 12 ಕಡೆಯಲ್ಲಿ ಸ್ಮಾರ್ಟ್ ಸಿಗ್ನಲ್
ಹಳೇ ಡಯಾನ ಸರ್ಕಲ್, ತ್ರಿವೇಣಿ ಜಂಕ್ಷನ್, ಜೋಡುಕಟ್ಟೆ, ಮಲ್ಪೆ ಜಂಕ್ಷನ್, ಬನ್ನಂಜೆ ಜಂಕ್ಷನ್, ಎಂಜಿಎಂ ಜಂಕ್ಷನ್, ಕಲ್ಸಂಕ ಜಂಕ್ಷನ್, ಶಿರಿಬೀಡು ಜಂಕ್ಷನ್, ಕರಾವಳಿ ಜಂಕ್ಷನ್, ಸಿಂಡಿಕೇಟ್ ಸರ್ಕಲ್, ಎಂಐಟಿ ಜಂಕ್ಷನ್‌ಗಳಲ್ಲಿ ತಲಾ 50 ಲ.ರೂ. ವೆಚ್ಚದಲ್ಲಿ ಸ್ಮಾರ್ಟ್ ಸಿಗ್ನಲ್ ಅಳವಡಿಕೆ ಕೆಲಸಕ್ಕೆ ಅನುಮೋದನೆ ನೀಡಲಾಗಿದೆ. ಮಣಿಪಾಲದ ಟೈಗರ್ ಸರ್ಕಲ್‌ನಲ್ಲಿ ಈಗಾಗಲೇ ಸ್ಮಾರ್ಟ್ ಸಿಗ್ನಲ್ ಅಳವಡಿಕೆ ಕೆಲಸ ಪ್ರಾರಂಭವಾಗಿದೆ.
Related Articles
Advertisement
2019ರಲ್ಲಿ ಪ್ರಸ್ತಾವನೆ2019ಲ್ಲಿ ಪ್ರಸ್ತಾವನೆ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ಸಾರ್ವಜನಿಕರ ಮನವಿಯ ಮೇರೆಗೆ ನಗರಸಭೆ ವ್ಯಾಪ್ತಿ ಹಾಗೂ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸ್ಥಳ ಪರಿಶೀಲನೆ ನಡೆಸಿ ಅಗತ್ಯವಿರುವ ಸ್ಥಳಗಳನ್ನು ಗುರುತಿಸಿ ಸಿಗ್ನಲ್ ಲೈಟ್‌ಗಳನ್ನು ಅಳವಡಿಸುವಂತೆ ನಗರ ಸಭೆಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪೊಲೀಸ್ ಇಲಾಖೆ ವರ್ಷಗಳ ಹಿಂದೆ ಪ್ರಸ್ತಾವನೆ ಸಲ್ಲಿಸಿತ್ತು. 2020ರಲ್ಲಿ ಅನುಮೋದನೆ ಸಿಕ್ಕಿತ್ತು. ನಗರದಲ್ಲಿ ಟ್ರಾಫಿಕ್ ನಿಯಂತ್ರಣ
ನಗರದ ಕವಿ ಮುದ್ದಣ ಮಾರ್ಗ, ಕೋರ್ಟ್ ರಸ್ತೆ, ಸರ್ವಿಸ್ ಬಸ್ ನಿಲ್ದಾಣ, ಕೆಎಸ್‌ಆರ್‌ಟಿಸಿ, ಸಿಟಿಬಸ್ ನಿಲ್ದಾಣ, ಕಲ್ಸಂಕ, ಮಣಿಪಾಲದಲ್ಲಿ ವಾಹನದಟ್ಟಣೆ ಮಿತಿಮೀರುತ್ತಿದೆ. ಟ್ರಾಫಿಕ್ ದಟ್ಟಣೆಗೆ ಮುಕ್ತಿ ನೀಡಲು ಕಿನ್ನಿಮೂಲ್ಕಿ-ಬ್ರಹ್ಮಗಿರಿ-ಬನ್ನಂಜೆ ರಸ್ತೆಗಳು ಸವಾರರಿಗೆ ಅನುಕೂಲ ಮಾಡಿಕೊಡುತ್ತಿವೆ. ಮಣಿಪಾಲ, ಉಡುಪಿ ನಗರಭಾಗಕ್ಕೆ ತೆರಳುವವರು ಕರಾವಳಿ ಬೈಪಾಸ್ ಮೂಲಕ ಸಂಚರಿಸಿದರೂ ನಗರದಲ್ಲಿ ಉಂಟಾಗುವ ಟ್ರಾಫಿಕ್ ದಟ್ಟಣೆ ತಕ್ಕಮಟ್ಟಿಗೆ ನಿಯಂತ್ರಿಸಬಹುದಾಗಿದೆ. ಅನುದಾನವಿಲ್ಲ- ಆದಾಯವಿದೆ
ಹೈಟೆಕ್ ಟ್ರಾಫಿಕ್ ಸಿಗ್ನಲ್ ಸಂಪೂರ್ಣ ವೆಚ್ಚವನ್ನು ಗುತ್ತಿಗೆ ವಹಿಸಿಕೊಂಡ ದರ್ಪ ಸಂಸ್ಥೆ ಪಿಪಿಪಿ ಮಾಡೆಲ್ ಮೂಲಕ ಭರಿಸುತ್ತಿದೆ. ನಗರಸಭೆ ಅನುದಾನ ಬಳಕೆ ಇಲ್ಲ. ನಗರಸಭೆಗೆ 12 ಸಿಗ್ನಲ್‌ಗಳಿಂದ ಮಾಸಿಕ 2.40 ಲ.ರೂ. ನಂತೆ ವಾರ್ಷಿಕ 28 ಲ.ರೂ. ನಗರಸಭೆಗೆ ಆದಾಯ ಬರಲಿದೆ. ಮಣಿಪಾಲದ ಟೈಗರ್ ಸರ್ಕಲ್‌ನಲ್ಲಿ ಎರಡು ಸಿಗ್ನಲ್ ಅಳವಡಿಕೆ ಕಾರ್ಯ ಭರದಿಂದ ಸಾಗುತ್ತಿದೆ. ಈ ವ್ಯವಸ್ಥೆ ರಾಜ್ಯದಲ್ಲಿಯೇ ಪ್ರಥಮ.
– ಮೋಹನ್ ರಾಜ್, ಎಎಇ ಉಡುಪಿ ನಗರಸಭೆ ಏನಿರಲಿದೆ?
ಹೈಟೆಕ್ ರಿಮೋಟ್ಲಿ ಟ್ರಾಫಿಕ್ ಡೀಸ್‌ಪ್ಲೇ ಮ್ಯಾನೇಜ್ಮೆಂಟ್ ಸಿಸ್ಟಂನಲ್ಲಿ 11×7 ಆಳತೆಯ ಎಲ್‌ಇಡಿ ಡೀಸ್‌ಪ್ಲೇ ಅಳವಡಿಕೆಯಾಗಲಿದೆ. ಇದರಲ್ಲಿ ಆಧುನಿಕ ಕಣ್ಗಾವಲು ಕೆಮರಾ ಇರುತ್ತದೆ. ಪ್ರತೀ ಸಿಗ್ನಲ್ ಸುಮಾರು 90 ಸೆಕೆಂಡ್ ಇರಲಿದ್ದು, ಅದರಲ್ಲಿ 10-30 ಸೆ. ನಗರಸಭೆ ಸಾಮಾಜಿಕ ಕಳಕಳಿ ಹೊಂದಿರುವ ಸಂದೇಶ ಬಿತ್ತರಿಸಲು ಬಳಕೆ ಮಾಡಲಿದೆ. ಉಳಿದ ಸಮಯವನ್ನು ಪಿಪಿಪಿ ಮಾಡೆಲ್ ಅಳವಡಿಸಿಕೊಂಡ ದರ್ಪಣ ಸಂಸ್ಥೆ ಖಾಸಗಿ ಜಾಹೀರಾತು ಪ್ರಸಾರ ಅವಕಾಶ ನೀಡಲಾಗಿದೆ. ಇಲ್ಲಿ ತುರ್ತು ಅಗತ್ಯವಿದ್ದರೆ 90 ಸೆಕೆಂಡ್‌ಗಳನ್ನು ನಗರಸಭೆ ಬಳಸಿಕೊಳ್ಳುವ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. – ತೃಪ್ತಿ ಕುಮ್ರಗೋಡು