ಮೂಡುಬಿದಿರೆ: ರಾಜ್ಯ ದಲ್ಲೇ ಅತಿವೇಗದ ಬೆಳವಣಿಗೆ ಕಾಣು ತ್ತಿರುವ ಮೂಡುಬಿದಿರೆ ಪುರಸಭೆ ವ್ಯಾಪ್ತಿ ಯಲ್ಲಿ ತ್ಯಾಜ್ಯ ವಿಲೇವಾರಿ, ಕೊಳಚೆ ನೀರಿನ ಸಮಸ್ಯೆಗೆ ಪರಿಹಾರವಾಗಿ ಸಮಗ್ರ ಒಳಚರಂಡಿ ಯೋಜನೆಯನ್ನು ಹೇಗಾದರೂ ಮಾಡಿ ಕಾರ್ಯಗತಗೊಳಿ ಸಲು ತಾನು ಶತ ಪ್ರಯತ್ನ ಮಾಡು ತ್ತಿರುವುದಾಗಿ ಶಾಸಕ ಉಮಾನಾಥ ಕೋಟ್ಯಾನ್ ಭರವಸೆ ನೀಡಿದರು.
ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಶುಕ್ರವಾರ ನಡೆದ, ಪುರಸಭೆಯ ಸ್ವಚ್ಛ ಸರ್ವೇಕ್ಷಣೆ 2021-22ರ ಪ್ರಶಸ್ತಿ ಪ್ರದಾನ ಮತ್ತು ಗೌರವ ಸಮರ್ಪಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಸತಿ ಸಮುಚ್ಚಯ, ಹೊಟೇಲ್, ಹಾಸ್ಟೆಲ್, ಕಲ್ಯಾಣ ಮಂದಿರ, ವಾಣಿಜ್ಯ ಸಂಕೀರ್ಣ ನಿರ್ಮಾಣವಾಗುವಾಗ ಪರವಾನಿಗೆ ನೀಡುವಾಗ ವಿಧಿಸುವ ನಿಯಮಗಳನ್ನು ಸಮರ್ಪಕವಾಗಿ ಪಾಲಿಸಲಾಗಿದೆಯೋ ಎಂದು ಅಧಿಕಾರಿಗಳು ಪರಿವೀಕ್ಷಣೆ ನಡೆಸಬೇಕಾಗಿದೆ; ಇದರಲ್ಲಿ ಜನಪ್ರತಿನಿಧಿಗಳ ಪಾತ್ರ ಹಾಗೂ ಜನರ ಹೊಣೆ ಗಾರಿಕೆಯೂ ಇದೆ ಎಂದರು.
ಇಂದಿನ ರೋಗಗಳಿಗೆ ಪ್ರಮುಖ ವಾಗಿ, ನಾಡಿನಲ್ಲೆಡೆ ನಗರೀಕರಣದ ಪರಿಣಾಮವಾಗಿ ಕಲುಷಿತ, ರಾಸಾಯನಿಕ ಬೆರೆತ ಕೊಳಚೆ ನೀರು ಜಲಮೂಲ ಸೇರುತ್ತಿರುವುದೇ ಕಾರಣ, ಬರೇ ಕಸ, ತ್ಯಾಜ್ಯ ವಿಲೇವಾರಿಯಷ್ಟೇ ಸ್ವಚ್ಛ ಸರ್ವೇಕ್ಷಣೆಯ ಲಕ್ಷಣವಲ್ಲ ಎಂಬುದನ್ನು ಗಮನಿಸಬೇಕಾಗಿದೆ ಎಂದು ಶಾಸಕರು ಹೇಳಿದರು.
ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ, ಸ್ವಚ್ಛ ಸರ್ವೇಕ್ಷಣೆ ಅಂಗವಾಗಿ ಜಾಗೃತಿ ಮೂಡಿಸುವ ಬೀದಿ ನಾಟಕ, ಚಿತ್ರ ರಚನೆ, ಕಿರುಚಿತ್ರ ನಿರ್ಮಾಣ, ಜಿಂಗಲ್, ಗೋಡೆ ಬರೆಹ ಚಿತ್ರ ರಚನೆ (ಮ್ಯೂರಲ್), ಆದರ್ಶ ಮಹಿಳೆ/ಪುರುಷ ಮೊದಲಾದ ಸ್ಪರ್ಧೆಗಳಲ್ಲಿ ವಿಜೇತರನ್ನು, ತ್ಯಾಜ್ಯ ನಿರ್ವಹಣೆ ಕುರಿತಾದ ಸ್ವಚ್ಛ ಟೆಕ್ನಾಲಜಿ ಚ್ಯಾಲೆಂಜ್ ತಾಂತ್ರಿಕ ಸ್ಪರ್ಧೆಯಲ್ಲಿ ರಾಷ್ಟ್ರ, ರಾಜ್ಯಮಟ್ಟದಲ್ಲಿ ಗೆದ್ದವರನ್ನು, ಪರಿಸರ ಪ್ರೇಮಿಗಳು ನಡೆಸಿರುವ ವೈಯಕ್ತಿಕ/ ಸಾಂಘಿಕ ಚಟುವಟಿಕೆಗಳಲ್ಲಿ ಗಣ್ಯರೆಂದು ಗುರುತಿಸಲ್ಪಟ್ಟವರು, ಪೌರ ಕಾರ್ಮಿಕರು, ವಿವಿಧ ಸ್ಪರ್ಧೆಗಳ ತೀರ್ಪುಗಾರರನ್ನು ಗೌರವಿಸಲಾಯಿತು.
ಮುಖ್ಯಅತಿಥಿ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನ ನಿರ್ದೇಶಕಿ ಗಾಯತ್ರಿ ನಾಯಕ್ ಮಾತನಾಡಿ, ಸ್ವಚ್ಛ ಸರ್ವೇಕ್ಷಣೆ ಮೂಡುಬಿದಿರೆಯಲ್ಲಿ ಯಶಸ್ವಿಯಾಗಿ ನಡೆಸಲಾಗಿದ್ದು, ವಿಶೇಷವಾಗಿ ಇಲ್ಲಿನ ವಿದ್ಯಾ ಸಂಸ್ಥೆಗಳಲ್ಲಿ ಶೂನ್ಯ ತ್ಯಾಜ್ಯ ಕ್ಯಾಂಪಸ್ ನಿರ್ಮಾಣವಾಗಲು ಹಾಕಿಕೊಂಡ ಯೋಜನೆ ಶ್ಲಾಘನೀಯ; ಮೂಡುಬಿದಿರೆಗೆ ಒಳಚರಂಡಿ ಯೋಜನೆ ಬರಲು ಸೂಕ್ತ ಜಾಗ ಒದಗಿಸುವ ಹೊಣೆ ಸ್ಥಳೀಯ ಆಡಳಿತ, ಜನಪ್ರತಿ ನಿಧಿಗಳು, ಜನತೆಯದ್ದಾಗಿದೆ ಎಂದರು.
ನಮ್ಮೆಲ್ಲರ ಜವಾಬ್ದಾರಿ
ಅಧ್ಯಕ್ಷ ಪ್ರಸಾದ್ ಕುಮಾರ್ ಮಾತನಾಡಿ, ಸ್ವಚ್ಛ ಸರ್ವೇಕ್ಷಣೆಯಲ್ಲಿ ಜನತೆ, ಸಂಘ-ಸಂಸ್ಥೆಗಳು, ಪೌರಕಾರ್ಮಿಕರು ಜತೆಗೆ ಬೆಂಗಳೂರಿನ ವೇದನ್ ಟ್ರಸ್ಟ್‌ನ ಸುಹಾಸಿನಿ ವಿಶೇಷವಾಗಿ ಸಹಕರಿಸಿದ್ದು, ಇದನ್ನು ನಿರಂತರ ಎಚ್ಚರದಿಂದ ಮುನ್ನಡೆಸುವುದು ಅಧಿಕಾರಿಗಳ ಸಹಿತ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಪುರಸಭೆ ಉಪಾಧ್ಯಕ್ಷೆ ಸುಜಾತಾ, ಸ್ಥಾಯೀ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ ಉಪಸ್ಥಿತರಿದ್ದರು. ಮುಖ್ಯಾಧಿಕಾರಿ ಇಂದು ಎಂ. ಸ್ವಾಗತಿಸಿದರು. ಪರಿಸರ ಅಭಿಯಂತೆ ಶಿಲ್ಪಾ ಎಸ್. ಕಾರ್ಯಕ್ರಮ ನಿರೂಪಿ ಸಿದರು. ಆರೋಗ್ಯ ನಿರೀಕ್ಷಕ ರಾಜೇಶ್ ವಂದಿಸಿದರು. ಬೀದಿ ನಾಟಕ ಸಹಿತ ವಿವಿಧ ದೃಶ್ಯಾವಳಿಗಳು, ಸ್ಪರ್ಧೆಗಳಲ್ಲಿ ಗೆದ್ದ ಕಿರುಚಿತ್ರಗಳು, ಜಿಂಗಲ್(ಗೀತ ಗಾಯನ) ಮೊದಲಾದ ಕಾರ್ಯಕ್ರಮ ಗಳನ್ನು ಪ್ರಸ್ತುತ ಪಡಿಸಲಾಯಿತು.
ಪುರಸಭೆ ಸದಸ್ಯರು, ಸ್ವಚ್ಛತ ರಾಯಭಾರಿಗಳ ಪೈಕಿ ಸುಬ್ರಹ್ಮಣ್ಯ ಭಟ್ ಅಲಂಗಾರು, ಇನ್ನರ್‌ವೀಲ್ ಅಧ್ಯಕ್ಷೆ ಸಹನಾ ನಾಗರಾಜ, ಮಹಮ್ಮದೀಯ ಆಂ.ಮಾ. ಶಾಲೆಯ ಅಧ್ಯಕ್ಷ ಮಕ್ಬೂಲ್ ಹುಸೇನ್ ಪಾಲ್ಗೊಂಡಿದ್ದರು.