ಕಾರವಾರ: ಹೆಣ್ಣುಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
ಕಾರವಾರದ ಗೋಟೆಗಾಳಿ ಏತ ನೀರಾವರಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ ನಂತರ ಮಾಧ್ಯಮದವರ ಜೊತೆ ಮಾತನಾಡಿದರು.
ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವ ಉತ್ತರ ಕನ್ನಡ, ದಕ್ಷಿಣ ಕನ್ನಡಗಳಂತಹ ಜಿಲ್ಲೆಗಳಲ್ಲಿ ಈ ವ್ಯವಸ್ಥೆ ಕಷ್ಟವಾದರೂ ಕೂಡ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸುರಕ್ಷತೆ ಒದಗಿಸಲು ಕ್ರಮ ಕೈಗೊಳ್ಳಲಿದೆ ಎಂದು ಸಚಿವರು ಹೇಳಿದರು.
ಹೆಣ್ಣುಮಕ್ಕಳ ಸುರಕ್ಷತೆಯ ದೃಷ್ಠಿಯಿಂದ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಜಾರಿಗೊಳಿಸಿಲಾಗಿದೆ. ಎಲ್ಲೆಲ್ಲಿ ಹೆಣ್ಣುಮಕ್ಕಳು ನಿಂತುಕೊಳ್ಳುತ್ತಾರೆ, ಬಸ್ ಗೆ ಕಾಯುತ್ತಿರುತ್ತಾರೆ ಎಂದು ತಿಳಿಯಲು ಡಿಜಿಟಲೈಸ್ಡ್ ವ್ಯವಸ್ಥೆ ಮಾಡಿದ್ದೇವೆ. ಈ ವ್ಯವಸ್ಥೆಯನ್ನು ಬೆಂಗಳೂರು ಹಾಗೂ ತುಮಕೂರಿನಲ್ಲಿ ಸದ್ಯ ಅಳವಡಿಸಲಾಗಿದೆ. ಮೈಸೂರು, ತುಮಕೂರು ಘಟನೆ ನಡೆದ ಬಳಿಕ ಹೆಚ್ಚಿನ ಪೊಲೀಸ್ ಕಚೇರಿಗಳಲ್ಲಿ ಕ್ರಮಕ್ಕೆ ಆದೇಶ ಮಾಡಲಾಗಿದೆ. ಹೆಣ್ಣುಮಕ್ಕಳು ಒಂಟಿಯಾಗಿ ಹೋಗಿ ಬರುವ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ, ಸೆಕ್ಯೂರಿಟಿ ಹೆಚ್ಚಿನ ಪ್ರಮಾಣದಲ್ಲಿ ಪೂರೈಸಲು ಚರ್ಚೆ ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ:“ಮಂಡಳಿ ಯಶಸ್ಸಿಗೆ ಹಿರಿಯರ ಪರಿಶ್ರಮ, ಕಲಾವಿದರ ಪ್ರೋತ್ಸಾಹ ಅನನ್ಯ’
ಆದರೆ ಕೆಲವೊಂದು ಗ್ರಾಮಾಂತರ ಸೂಕ್ಷ್ಮ ಪ್ರದೇಶಗಳಲ್ಲಿ ಸುರಕ್ಷತೆ ಒದಗಿಸಲು ಕಷ್ಟವಾಗುತ್ತದೆ. ಸರಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸುರಕ್ಷತೆ ಒದಗಿಸುತ್ತದೆ ಎಂದು ಸಚಿವರು ನುಡಿದರು. ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅರಣ್ಯ ಭಾಗಗಳು ಹೆಚ್ಚಾಗಿದ್ದು, ಈ ಕಾರಣದಿಂದ ಅಲ್ಲಲ್ಲಿ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಹೆಣ್ಣುಮಕ್ಕಳು ಎಲ್ಲಿ ಹೋಗ್ತಾರೆ ಬರುತ್ತಾರೆ ಎಂದು ನೋಡಿ ಕೊಳ್ಳಬೇಕಾಗುತ್ತದೆ. ಒಳ ಪ್ರದೇಶಗಳಲ್ಲಿ ಯಾವಾಗ ಏನು ಆಗುತ್ತದೆ ಎಂದು ಹೇಳಲಾಗುವುದಿಲ್ಲ ಎಂದು ಪ್ರತಿಕ್ರಿಯಿಸಿದರು.
ಇನ್ನು ಕಲುಬುರಗಿ ಮಹಾನಗರ ಪಾಲಿಕೆಯ ಫಲಿತಾಂಶದ ಬಗ್ಗೆ ನಾನು ಹೇಗೆ ಹೇಳಲು ಸಾಧ್ಯ.? ಅದನ್ನು ಪಕ್ಷ ನಿರ್ಧರಿಸುತ್ತದೆ. ಸಂಗ್ರಹಿತ ತೀರ್ಮಾನವಾಗುವ ಮೊದಲೇ ಮಾತನಾಡಬಾರದು. ನಾನು ಈ ಬಗ್ಗೆ ಚರ್ಚೆ ಮಾಡುವುದಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದರು.