Advertisement

ಮಾರ್ಚ್‌ನೊಳಗೆ ಮೆಸ್ಕಾಂನಿಂದ 4 ಲಕ್ಷ ಸಂಪರ್ಕಗಳಿಗೆಹೊಸ ಮಾದರಿರೀಡಿಂಗ್

04:39 AM Jan 03, 2019 | |

ಮಹಾನಗರ : ಮನೆ, ಕಚೇರಿ, ಮಳಿಗೆ ಸಹಿತ ಎಲ್ಲ ಕಡೆ ಅಳವಡಿಸಲಾಗಿರುವ ಹಳೆಯ ಇಲೆಕ್ಟ್ರೋ ಮೆಕ್ಯಾನಿಕಲ್‌ ವಿದ್ಯುತ್‌ ಮೀಟರ್‌ಗಳನ್ನು ಬದಲಾಯಿಸಿ, ಹೊಸ ಮಾದರಿಯ ಡಿಜಿಟಲ್‌ ರೀಡಿಂಗ್‌ ಹೊಂದಿರುವ ಮೀಟರ್‌ ಅಳವಡಿಕೆಗೆ ಮಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಮೆಸ್ಕಾಂ) ಮುಂದಾಗಿದೆ. ಅದರಂತೆ, ಇದೀಗ ದ.ಕ., ಉಡುಪಿ ಸಹಿತ ಮೆಸ್ಕಾಂ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಲ್ಲಿ ಡಿಜಿಟಲ್‌ ಮೀಟರ್‌ ಅಳವಡಿಸುವ ಕಾರ್ಯ ನಡೆಯುತ್ತಿದೆ.

Advertisement

ಕೇಂದ್ರ ಸರಕಾರದ ಐಪಿಡಿಎಸ್‌ (ಇಂಟಿಗ್ರೇಟೆಡ್‌ ಪವರ್‌ ಡೆವಲಪ್‌ ಮೆಂಟ್‌ ಸ್ಕೀಮ್‌) ಹಾಗೂ ಡಿಡಿಯುಜಿವೈ (ದೀನ್‌ ದಯಾಳು ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ) ಯೋಜನೆಯ ಆಶ್ರಯದಲ್ಲಿ ಡಿಜಿಟಲ್‌ ರೀಡಿಂಗ್‌ ಹೊಂದಿರುವ ‘ಸ್ಟಾಟಿಕ್‌ ಮೀಟರ್‌’ ಅಳವಡಿಸುವ ಕಾರ್ಯ ನಡೆಯುತ್ತಿದೆ.

ಮೆಸ್ಕಾಂ ಅಧೀನದಲ್ಲಿ ಬರುವ ದ.ಕ., ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಒಟ್ಟು 24 ಲಕ್ಷ ವಿದ್ಯುತ್‌ ಸಂಪರ್ಕಗಳಿವೆ. ಇವುಗಳ ಎಲ್ಲ ಹಳೆಯ ಮೀಟರ್‌ಗಳನ್ನು ಬದಲಾಯಿಸಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ 4 ಲಕ್ಷ ಸಂಪರ್ಕಗಳಿಗೆ ಹೊಸ ಮೀಟರ್‌ ಗಳನ್ನು ಮಾತ್ರ ಅಳವಡಿಸಲು ನಿರ್ಧರಿಸಲಾಗಿದ್ದು, ಆ ಬಳಿಕ ಹಂತ ಹಂತವಾಗಿ ಎಲ್ಲೆಡೆ ನಡೆಯಲಿದೆ ಎಂದು ಮೆಸ್ಕಾಂ ಮೂಲಗಳು ತಿಳಿಸಿವೆ. ನಗರ, ಗ್ರಾಮೀಣ ಭಾಗ ಎಂಬಂತೆ ಎರಡು ಹಂತದಲ್ಲಿ ಪ್ರತ್ಯೇಕ ಟೆಂಡರ್‌ ಕರೆದು ಪ್ರಕ್ರಿಯೆ ನಡೆಸಲಾಗುತ್ತಿದೆ.

ಒಂದೂವರೆ ಲಕ್ಷ ಅಳವಡಿಕೆ ಪೂರ್ಣ
ಹಳೆಯ ಮೀಟರ್‌ಗಳಲ್ಲಿ ರೀಡಿಂಗ್‌ ಸಹಿತ ವಿವಿಧ ತಾಂತ್ರಿಕ ಸಮಸ್ಯೆಗಳು ಕಂಡು ಬರುತ್ತಿರುವುದರಿಂದ ಗ್ರಾಹಕರಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ಆ ಬಗ್ಗೆ ದೂರುಗಳು ಕೂಡ ಬರುತ್ತಿದ್ದವು. ಹಾಗಾಗಿ ಮೀಟರ್‌ ಬದಲಾವಣೆಗೆ ಕ್ರಮ ಕೈಗೊಳ್ಳ ಲಾಗಿದೆ. ಜತೆಗೆ ವಿದ್ಯುತ್‌ ಇಲಾಖೆಯಲ್ಲಿ ಎಲ್ಲ ವ್ಯವಸ್ಥೆಗಳು ಡಿಜಿಟಲ್‌ ಸ್ವರೂಪ ಪಡೆಯುತ್ತಿರು ವುದರಿಂದ ಮೀಟರ್‌ಗಳನ್ನು ಕೂಡ ಡಿಜಿಟಲ್‌ ರೂಪದಲ್ಲಿ ಬದಲಾಯಿಸಲು ಉದ್ದೇಶವಾಗಿದೆ. ಇದಕ್ಕಾಗಿ ನಗರ ಪ್ರದೇಶಗಳಲ್ಲಿ ಐಪಿಡಿಎಸ್‌, ಗ್ರಾಮಾಂತರದಲ್ಲಿ ಡಿಡಿಯುಜಿವೈ ಸ್ಕೀಂ ಮೂಲಕ ಮೀಟರ್‌ ಬದಲಾವಣೆ ಕಾರ್ಯ ನಡೆಯುತ್ತಿದ್ದು, ಈಗಾಗಲೇ ಸುಮಾರು ಒಂದೂವರೆ ಲಕ್ಷದಷ್ಟು ಹೊಸ ಡಿಜಿಟಲ್‌ ಮೀಟರ್‌ ಅಳವಡಿಕೆ ನಡೆದಿದೆ.

ಮಾರ್ಚ್‌ನೊಳಗೆ ಕೊನೆ
ಈ ಎರಡು ಯೋಜನೆಗಳಡಿ ನಗರ ಪ್ರದೇಶಗಳಲ್ಲಿ 2 ಲಕ್ಷ, ಗ್ರಾಮೀಣ ಭಾಗದಲ್ಲಿ 2 ಲಕ್ಷ ಸಹಿತ ಒಟ್ಟು 4 ಲಕ್ಷ ಸ್ಟಾಟಿಕ್‌ ಮೀಟರ್‌ ಅಳವಡಿಸುವ ಗುರಿಯನ್ನು ಮೆಸ್ಕಾಂ ಹೊಂದಿದೆ. ಆ ಮೂಲಕ ಹೊಸ ಮೀಟರ್‌ ಅಳವಡಿಕೆ ಕಾರ್ಯ 2019ರ ಮಾರ್ಚ್‌ನೊಳಗೆ ಕೊನೆಗೊಳಿಸುವ ಗುರಿಯನ್ನು ಮೆಸ್ಕಾಂ ಹೊಂದಿದೆ ಎಂದು ಮೆಸ್ಕಾಂ ಅಧಿಕಾರಿಗಳು ‘ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

ಏನಿದು ಡಿಜಿಟಲ್‌ ಮೀಟರ್‌
ಹೊಸ ಮೀಟರ್‌ನಲ್ಲಿ ಇಲೆಕ್ಟ್ರೋ ಮೆಕ್ಯಾನಿಕಲ್‌ ವಿದ್ಯುತ್‌ ಮೀಟರ್‌ ರೀತಿಯಲ್ಲಿ ಮೆಕಾನಿಕಲ್‌ ಪಾರ್ಟ್‌ ಇರುವುದಿಲ್ಲ. ಮೀಟರ್‌ನೊಳಗಿನ ವೀಲ್‌ ಕೂಡ ತಿರುಗುವುದಿಲ್ಲ. ಬದಲಾಗಿ ಆಟೋಮೆಟಿಕ್‌ ಸಿಸ್ಟಮ್‌ ಇರುತ್ತದೆ. ಮೀಟರ್‌ ತಿರುಗುವುದು ಕೂಡ ಇಲ್ಲ. ಬಳಕೆಯಾದ ವಿದ್ಯುತ್‌ನ ಆಧಾರದಲ್ಲಿ ಯೂನಿಟ್ಸ್‌ ರೆಕಾರ್ಡ್‌ ಆಗಿ ನೇರವಾಗಿ ಡಿಸ್ಪ್ಲೇ  ಆಗುತ್ತದೆ. ಈ ಹಿಂದಿನ ಮೀಟರ್‌ ರೀಡಿಂಗ್‌ನಲ್ಲಿ ಕೆಲವರು ಕೈಚಳಕ ತೋರಿಸಿ ಕಡಿಮೆ ರೀಡಿಂಗ್‌ ತೋರಿಸಿ ಮೋಸ ಕೂಡ ಮಾಡಲಾಗುತ್ತಿತ್ತು. ಆದರೆ, ಡಿಜಿಟಲ್‌ ಮೀಟರ್‌ ಯಾವುದೇ ರೀತಿಯ ರೀಡಿಂಗ್‌ ನಕಲಿಗೆ ಅವಕಾಶ ನೀಡುವುದಿಲ್ಲ. 

ಹೊಸ ಮೀಟರ್‌ ಗ್ರಾಹಕರಿಗೆ ಉಚಿತ 
ಕೇಂದ್ರ ಸರಕಾರದ ಯೋಜನೆಯನ್ವಯ ಮೆಸ್ಕಾಂ ಡಿಜಿಟಲ್‌ನ ಹೊಸ ಮೀಟರ್‌ ಅಳವಡಿಕೆ ಕಾರ್ಯಕ್ಕೆ ಗ್ರಾಹಕರು ಯಾವುದೇ ಹಣ ಪಾವತಿಸಬೇಕಾಗಿಲ್ಲ. ಹೊಸ ಮೀಟರ್‌ ಅಳವಡಿಕೆಗೆ ತಗಲುವ ವೆಚ್ಚದ ಶೇ. 60ರಷ್ಟು ಕೇಂದ್ರ, ಶೇ. 40ರಷ್ಟು ಹಣವನ್ನು ಮೆಸ್ಕಾಂ ಭರಿಸಲಿದೆ. ಹೀಗಾಗಿ ಅಳವಡಿಕೆಗೆ ಗ್ರಾಹಕರು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.

ಹಳೆ ಮೀಟರ್‌ ತೆರವು
ಕೇಂದ್ರ ಸರಕಾರದ ಯೋಜನೆಯಡಿಯಲ್ಲಿ ಬಹಳಷ್ಟು ಹಳೆಯ ಮೀಟರ್‌ ಗಳನ್ನು ಬದಲಾಯಿಸುವ ಕೆಲಸ ನಡೆಯುತ್ತಿದೆ. ಮಾರ್ಚ್‌ನಲ್ಲಿ ಬಹುತೇಕ ಸಂಪೂರ್ಣಗೊಳ್ಳಲಿದೆ.
– ಸ್ನೇಹಲ್‌
ರಾಯಮನೆ,ಮೆಸ್ಕಾಂ
ವ್ಯವಸ್ಥಾಪಕ ನಿರ್ದೇಶಕರು

ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next