ಬೆಂಗಳೂರು: ಕಾಂಗ್ರೆಸ್ ಘೋಷಣೆ ಮಾಡಿರುವ ಗ್ಯಾರೆಂಟಿ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೊಳಿಸುವುದಕ್ಕೆ ಸಾಧ್ಯವೇ ಇಲ್ಲ. ಜನರನ್ನು ಮೋಸ ಮಾಡುವುದಕ್ಕಾಗಿ ಕಾಂಗ್ರೆಸ್ ನಾಯಕರು ಗ್ಯಾರೆಂಟಿ ಕಾರ್ಡ್ ಹಂಚುತ್ತಿದ್ದಾರೆಂದು ಕೇಂದ್ರ ಸಚಿವೆ ಹಾಗೂ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ರಾಹುಲ್ ಗಾಂಧಿಯವರು ನಾಲ್ಕನೇ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದಾರೆ. ನಾವು ಕಾಂಗ್ರೆಸ್‌ನ ಗ್ಯಾರೆಂಟಿಯನ್ನು ಎಲ್ಲ ಕಡೆಯೂ ನೋಡಿದ್ದೇವೆ. ದೇಶದಲ್ಲಿ 60 ವರ್ಷಕ್ಕಿಂತಲೂ ಜಾಸ್ತಿ ಆಡಳಿತ ನಡೆಸಿರುವ ಪಕ್ಷ ಕಾಂಗ್ರೆಸ್ ಜನರನ್ನು ಮರಳು, ಮೋಸ ಮಾಡಲು ಗ್ಯಾರೆಂಟಿ ಕಾರ್ಡ್ ಹಂಚುತ್ತಿದೆ ಎಂದು ಆರೋಪಿಸಿದರು.
ಪ್ರತಿ ಮನೆಗೆ 200 ಯುನಿಟ್ ವಿದ್ಯುತ್, ಮಹಿಳೆಯರಿಗೆ 2000 ರೂ, 10 ಕೆಜಿ ಉಚಿತ ಅಕ್ಕಿ ಹಾಗೂ ಪದವೀಧರರಿಗೆ 3000 ಮತ್ತು ಡಿಪ್ಲೋಮಾ ಪದವೀಧರರಿಗೆ 1500 ಕೊಡುವ ಭರವಸೆ ನೀಡಿದ್ದಾರೆ. ಹಿಂದೆ ಹಳ್ಳಿಯಿಂದ ದಿಲ್ಲಿಯವರೆಗೂ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆಗ ಯಾಕೆ ಇವುಗಳನ್ನು ಅನುಷ್ಠಾನ ಮಾಡಲು ಸಾಧ್ಯವಾಗಲಿಲ್ಲ ?ರಾಜಸ್ಥಾನದಲ್ಲೂ ಈ ರೀತಿಯ ಗ್ಯಾರೆಂಟಿ ಕಾರ್ಡ್ ಹಂಚಿದ್ದರು. ನಿರುದ್ಯೋಗಿ ಯುವಕರಿಗೆ 3000 ರೂ.ಕೊಡುವ ಭರವಸೆ ಇನ್ನೂ ಈಡೇರಿಲ್ಲ. ಛತ್ತೀಸಗಢದಲ್ಲಿ ಕೊಟ್ಟ ಗ್ಯಾರಂಟಿ ಜಾರಿಯಾಗಿಲ್ಲ.
ಮಧ್ಯಪ್ರದೇಶದಲ್ಲಿ ಮಹಿಳೆಯರಿಗೆ ಕೊಡುತ್ತೇವೆ ಎಂದ ದ್ವಿಚಕ್ರ ವಾಹನ ಎಲ್ಲಿದೆ ? ಫ್ರೀ ಗ್ಯಾರಂಟಿ ಯೋಜನೆ ಕೊಡಲು ಹಣ ಎಲ್ಲಿಂದ ತರುತ್ತಾರೆ ? ಎಂದು ಪ್ರಶ್ನಿಸಿದರು.
ಕರ್ನಾಟಕದ ಬಜೆಟ್‌ನಲ್ಲಿ ಈ ಯೋಜನೆ ಕೊಡಲು ಸಾಧ್ಯವೇ ಇಲ್ಲ. ಇದಕ್ಕಾಗಿ ಸುಮಾರು 75 ಸಾವಿರ ಕೋಟಿ ರೂ.ಬೇಕು. ಯಡಿಯೂರಪ್ಪ ನವರು 2008ರಲ್ಲಿ ಅಧಿಕಾರಕ್ಕೆ ಬಂದಾಗ ಅವರು ಯಾವುದೇ ಗ್ಯಾರೆಂಟಿ ಘೋಷಣೆ ಮಾಡಲಿಲ್ಲ. ಆದರೆ ನೆರವು ಕೇಳಿ ಕಾಲಿಗೆ ಬಿದ್ದ ಮಹಿಳೆಯ ಕಷ್ಟ ಕಂಡು ಸಂಧ್ಯಾ ಸುರಕ್ಷಾ ಯೋಜನೆ ಜಾರಿಗೆ ತಂದರು. 1000 ರೂ. ವಿಧವಾ ವೇತನ ಕೊಟ್ಟಿದ್ದು ನಮ್ಮ ಸರ್ಕಾರ. ಈಗ ಘೋಷಣೆ ಮಾಡಿದ ಗ್ಯಾರೆಂಟಿ ಕಾರ್ಡ್‌ನಲ್ಲಿ ಯಾರಿಗೆ ಈ 2000 ರೂ. ಕೊಡುತ್ತೀರಿ ಎಂದು ಹೇಳಿಲ್ಲ. ಜನರಿಗೆ ಮೋಸ, ಸುಳ್ಳು ಹೇಳುವುದಕ್ಕೂ ಒಂದು ಮಿತಿ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಹಾಗೂ ಉಪಾಧ್ಯಕ್ಷ ನಂದೀಶ್ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪಕ್ಷ ಚರ್ಚೆ ನಿಲ್ಲಿಸಿಲ್ಲ
ಉರಿಗೌಡ-ನಂಜೇಗೌಡ ವಿಚಾರದಲ್ಲಿ ಪಕ್ಷ ಚರ್ಚೆ ನಿಲ್ಲಿಸಿಲ್ಲ ಎಂದು ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದರು. ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಸ್ವಾಮೀಜಿಗಳು ಅವರ ಅಭಿಪ್ರಾಯ ಹೇಳಿದ್ದಾರೆ. ಅವರು ಕೂಡಾ ಸಂಶೋಧನೆಯಾಗಲಿ ಎಂದಿದ್ದಾರೆ. ನಾವೂ ಕೂಡಾ ಅದನ್ನೇ ಹೇಳುತ್ತಿದ್ದೇವೆ. ಇದರ ಬಗ್ಗೆ ಹೆಚ್ಚು ಚರ್ಚೆ ಬೇಡ ಎಂದು ಶ್ರೀಗಳು ಹೇಳಿದ್ದಾರೆ. ಆದರೆ ಪಕ್ಷ ಈ ಬಗ್ಗೆ ಚರ್ಚೆ ನಿಲ್ಲಿಸಿಲ್ಲ ಎಂದು ತಿಳಿಸಿದರು.