Advertisement

Krishna Byre Gowda; ಆರ್‌ಟಿಸಿಯಲ್ಲಿ ಸ್ವಯಂಚಾಲಿತ ನಮೂದು ವ್ಯವಸ್ಥೆ ಜಾರಿ

12:48 AM Mar 13, 2024 | Team Udayavani |

ಬೆಂಗಳೂರು: ಜಮೀನು ಅಡವಿಟ್ಟುಸಾಲ ಪಡೆದಿದ್ದರೆ, ಸಾಲ ಮರುಪಾವತಿ ಆಗಿದ್ದರೆ, ಭೂಸ್ವಾಧೀನ ಆಗಿದ್ದರೆ, ಭೂಪರಿವರ್ತನೆ ಆಗಿದ್ದರೆ, ನ್ಯಾಯಾಲಯಗಳ ಆದೇಶವಾಗಿ ಖಾತೆ, ಹಕ್ಕು, ಹೆಸರು ಬದಲಾವಣೆ ಮಾಡ
ಬೇಕಿದ್ದರೆ, ಇಂಡೀಕರಣ ಮುಂತಾದವುಗಳಿಗಾಗಿ ಇನ್ನು ಮುಂದೆ ಪಹಣಿಯಲ್ಲಿ ಸ್ವಯಂಚಾಲಿತವಾಗಿ ನಮೂದಾಗುವಂತಹ ವ್ಯವಸ್ಥೆಯನ್ನು ಸರಕಾರ ಜಾರಿಗೊಳಿಸಿದೆ.

Advertisement

ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಸೊತ್ತುಗಳ ಸೇಲ್‌ ಡೀಡ್‌, ಗಿಫ್ಟ್ ಡೀಡ್‌, ಪಾಟ್ನìರ್‌ಶಿಪ್‌ ಡೀಡ್‌, ಪಾರ್ಟೀಶನ್‌ ಡೀಡ್‌, ಇನ್‌ಹೆರಿಟೆನ್ಸ್‌, ಮೈನರ್‌-ಗಾರ್ಡಿಯನ್‌, ಮರಣಕ್ಕೂ ಮುನ್ನ ಬರೆದಿಟ್ಟ ವಿಲ್‌ ಸಹಿತ ಸಮ ಸ್ಯಾತ್ಮಕವಾದ ಶೇ.28ರಷ್ಟು ಪ್ರಕರಣಗಳನ್ನು ಹೊರತು ಪಡಿಸಿ, ಉಳಿದ ಶೇ.72ರಷ್ಟು ಪ್ರಕರಣಗಳಿಗೆ ಮಾತ್ರ ಈ ಪದ್ಧತಿ ಅನ್ವಯಿಸಲಿದೆ ಎಂದು ಸ್ಪಷ್ಟಪಡಿಸಿದರು.

ಪಹಣಿಯಲ್ಲಿ ವಿವಿಧ ಮ್ಯುಟೇಶನ್‌ಗಳನ್ನು ಎಂಟ್ರಿ ಮಾಡಿಸಲು ಪ್ರತಿ ಬಾರಿ ಕಂದಾಯ ನಿರೀಕ್ಷಕ (ರೆವಿನ್ಯು ಇನ್‌ಸ್ಪೆಕ್ಟರ್‌)ರು ಬೆರಳಚ್ಚು ನೀಡಬೇಕಿತ್ತು. ಶೇ.72 ಪ್ರಕರಣಗಳಲ್ಲಿ ಕಂದಾಯ ನಿರೀಕ್ಷಕರ ಬೆರಳಚ್ಚು ಇಲ್ಲದೆಯೇ ಆಟೋ ಮ್ಯುಟೇಷ‌ನ್‌ ಆಗುವ ವ್ಯವಸ್ಥೆ ಜಾರಿಗೊಳ್ಳಲಿದೆ. ಉಳಿದ ಶೇ.28 ಪ್ರಕರಣಗಳಲ್ಲಿ ನೋಟಿಸ್‌ ಕೊಡುತ್ತೇವೆ. ಕನಿಷ್ಠ 1 ವಾರ ಹಾಗೂ ಗರಿಷ್ಠ 15 ದಿನ ಕಾದು ನೋಡಲಾಗುತ್ತದೆ. ಯಾವುದೇ ತಕರಾರು ಬಾರದಿದ್ದರೆ ಅವುಗಳ ಮ್ಯುಟೇಷ‌ನ್‌ ಕೂಡ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

“ನನ್ನ ಆಸ್ತಿ’ ಅಭಿಯಾನಕ್ಕೆ ಚಾಲನೆ
ಪಹಣಿ (ಆರ್‌ಟಿಸಿ)ಗೆ ಆಧಾರ್‌ ಜೋಡಣೆ ಮಾಡುವ ಕಾರ್ಯವನ್ನು ಪ್ರಯೋಗಾತ್ಮಕವಾಗಿ ಕೈಗೊಂಡಿದ್ದು, ಗ್ರಾಮ ಲೆಕ್ಕಿಗರು ಸಂಪರ್ಕ ಮಾಡಿದ 19 ಲಕ್ಷ ರೈತರ ಪೈಕಿ 6 ಲಕ್ಷ ಪಹಣಿಗಳಲ್ಲಿ ಇರುವ ಹೆಸರಿನ ರೈತರು ನಿಧನ ಹೊಂದಿದ್ದಾರೆ. ಗತಿಸಿದವರ ಹೆಸರೇ ಪಹಣಿಯಲ್ಲಿ ಮುಂದುವರಿಯುತ್ತಿದೆ. ಅವುಗಳ ಪೌತಿ ಖಾತೆ ಆಗಿಲ್ಲ. ಮೃತರ ಪತ್ನಿ ಅಥವಾ ಮಕ್ಕಳ ಹೆಸರಿಗೆ ಖಾತೆ ವರ್ಗಾವಣೆಯೂ ಆಗಿಲ್ಲ. ಇದು ಸರಕಾರದ ಸಾಕಷ್ಟು ಯೋಜನೆಗಳ ದುರುಪಯೋಗಕ್ಕೂ ಕಾರಣವಾಗುತ್ತಿದ್ದು, ಆಧಾರ್‌ ಜೋಡಣೆ ಆಗದೆ ಇರುವುದರಿಂದ ನೇರ ನಗದು ಪಾವತಿ ವ್ಯವಸ್ಥೆಗೂ ಅಡಚಣೆ ಆಗುತ್ತಿದೆ. ಹೀಗಾಗಿ “ನನ್ನ ಭೂಮಿ, ನನ್ನ ಗುರುತು’ ಎನ್ನುವ ಘೋಷವಾಕ್ಯದಡಿ “ನನ್ನ ಆಸ್ತಿ’ ಎಂಬ ಅಭಿಯಾನವನ್ನು ರಾಜ್ಯಾದ್ಯಂತ ಕೈಗೊಳ್ಳುತ್ತಿದೆ. ಪ್ರತಿಯೊಂದು ಪಹಣಿಗೂ ಆಧಾರ್‌ ವಿಲೀನಗೊಳಿಸಲಾಗುತ್ತದೆ ಎಂದರು.

ಎರಡನೇ ಶನಿವಾರ,
ರವಿವಾರವೂ ನೋಂದಣಿ
ಮಹಾನಗರ ಪಾಲಿಕೆಗಳಿರುವ ಜಿಲ್ಲಾ ವ್ಯಾಪ್ತಿಯಲ್ಲಿ ಎರಡನೇ ಶನಿವಾರ ಮತ್ತು ರವಿವಾರಗಳು ಕೂಡ ಪಾಳಿ ಆಧಾರದ ಮೇಲೆ ಉಪನೋಂದಣಾಧಿಕಾರಿ ಕಚೇರಿಗಳು ಕಾರ್ಯ ನಿರ್ವಹಿಸಲಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next