ವಿಜಯಪುರ: ದೇಶದ ಬೀದಿ ವ್ಯಾಪಾರಿಗಳ ಆರ್ಥಿಕ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿ ಧಿಯ ಯೋಜನೆಯನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಾಗಬೇಕು. ಜಿಲ್ಲೆಯಲ್ಲಿ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಯೋಜನೆ ಅನುಷ್ಠಾನಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಸೂಚಿಸಿದರು.
ತಮ್ಮ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಆತ್ಮನಿರ್ಭರ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ವಿಜಯಪುರ ಜಿಲ್ಲೆಯಮಹಾನಗರ ಪಾಲಿಕೆ, ಪುರಸಭೆ, ಪಟ್ಟಣ ಪಂಚಾಯತಿಗಳ ನಗರ ಪ್ರದೇಶದಲ್ಲಿ ಬೀದಿವ್ಯಾಪಾರ ಮಾಡುತ್ತಿರುವವರು ಈ ಯೋಜನೆ ಅರ್ಹರಾಗಿರುತ್ತಾರೆ. ಬೀದಿ ವ್ಯಾಪಾರದ ಗುರುತಿನ ಚೀಟಿ ಇಲ್ಲದವರು ನಗರ ಸ್ಥಳೀಯ ಸಂಸ್ಥೆಗಳಿಂದ ಶಿಫಾರಸು ಪತ್ರ ಪಡೆದು, ಅರ್ಜಿ ಸಲ್ಲಿಸಬಹುದು. ಈ ಕುರಿತು ಬೀದಿಬದಿ ವ್ಯಾಪಾರಿಗಳಲ್ಲಿ ಅರಿವು ಮೂಡಿಸಬೇಕು ಎಂದರು.
ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಹೆಸರಿನಲ್ಲಿ ಬೀದಿ ವ್ಯಾಪಾರಿಗಳಿಗೆ ವಿಶೇಷ ಕಿರುಸಾಲ ಯೋಜನೆ ಜಾರಿಗೆ ತಂದಿದ್ದು, ಅದರ ಪ್ರಕಾರ 10,000 ರೂ.ಗಳ ಕಿರುಸಾಲ ನೀಡಲಾಗುವುದು ಹಾಗೂ ಅದನ್ನು ಹನ್ನೆರಡು ಮಾಸಿಕ ಕಂತುಗಳಲ್ಲಿ ಬಡ್ಡಿ ರಹಿತವಾಗಿ ಮರುಪಾವತಿಸಬೇಕಾಗಿರುತ್ತದೆ. ನಿಯಮಿತ ಮರುಪಾವತಿಗೆ ಪ್ರೋತ್ಸಾಹಿಸುವುದು ಎಂದು ಅವರು ತಿಳಿಸಿದರು.
ಅದರಂತೆ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 4098 ಬೀದಿ ವ್ಯಾಪಾರಿಗಳನ್ನು ಈಗಾಗಲೇ ಗುರುತಿಸಲಾಗಿದ್ದು, ನಗರ ಪಟ್ಟಣ ಪ್ರದೇಶದ ಒಟ್ಟು ಜನಸಂಖ್ಯೆಯ ಶೇ.1ರಷ್ಟು ಅಂದರೆ 6129 ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಯೋಜನೆಯ ಫಲಾನುಭವಿಗಳ ಗುರಿ ಹೆಚ್ಚಿಸಲಾಗಿದೆ. 2372 ಜನರು ಅರ್ಜಿ ಸಲ್ಲಿಸಿದ್ದು, 3757 ಅರ್ಜಿ ಸಲ್ಲಿಕೆ ಬಾಕಿ ಇದೆ. ಕಾರಣ ಸದರಿ ಯೋಜನೆ ಕುರಿತು ಬೀದಿ ಬದಿ ವ್ಯಾಪಾರಿಗಳಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. ಯೋಜನೆಯ ನೈಜ ಹಾಗೂ ಪರಿಣಮಕಾರಿ ಅನುಷ್ಠಾನಕ್ಕೆ ಅಗತ್ಯ ಇರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ, ಸರ್ಕಾರಿ ಐಟಿಐ ಪ್ರಾಚಾರ್ಯ ರಮೇಶ ದೇಸಾಯಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.