Advertisement

ಯೋಜನೆ ಕಾಲಮಿತಿಯಲ್ಲಿ ಜಾರಿಗೊಳಿಸಿ

04:52 PM Sep 08, 2022 | Team Udayavani |

ಕೊಪ್ಪಳ: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಯೋಜನೆಗಳನ್ನು ನಿಯಮಾನುಸಾರ ಕಾಲಮಿತಿಯೊಳಗೆ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಅವರು ಅಧಿಕಾರಿಗಳಿಗೆ ತಿಳಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಗರೋತ್ಥಾನ ಹಂತ-4, ಅಮೃತ ನಿರ್ಮಲ ನಗರ, ವಸತಿ ಯೋಜನೆಗಳು, ನಿವೇಶನ ಹಂಚಿಕೆ, ಕೊಳಚೆ ಪ್ರದೇಶಗಳ ಅಭಿವೃದ್ಧಿ, ಸ್ಮಶಾನ ಭೂಮಿ ಮಂಜೂರು, ಮುಂತಾದ ಅಭಿವೃದ್ಧಿ ಯೋಜನೆಗಳಿಗೆ ಕ್ರಿಯಾ ಯೋಜನೆ ಅನುಮೋದನೆ ನಂತರ ಅನಗತ್ಯ ವಿಳಂಬವಿಲ್ಲದಂತೆ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಬೇಕು. ಕೆಲ ಯೋಜನೆಗಳು ಫಲಾನುಭವಿ ಆಧಾರಿತವಾಗಿದ್ದು, ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಹಾಗೂ ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭವನ್ನು ಒದಗಿಸಬೇಕು ಎಂದರು.

ಅಮೃತ ನಿರ್ಮಲ ನಗರ ಯೋಜನೆ ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆಯಡಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ರಸ್ತೆ, ಮೂಲಭೂತ ಸೌಕರ್ಯ, ಪ್ರಮುಖ ವೃತ್ತಗಳ ಅಭಿವೃದ್ಧಿ ಮುಂತಾದ ಅಭಿವೃದ್ಧಿ ಕಾಮಗಾರಿ ಹಂಚಿಕೆ ಮಾಡಿದೆ. ಜಿಲ್ಲೆಯ 9 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಂಚಿಕೆಯಾದ ಸಿವಿಲ್‌ ಕಾಮಗಾರಿಗಳ ಭೌತಿಕ ಹಾಗೂ ಆರ್ಥಿಕ ಗುರಿಯನ್ನು ತಿಂಗಳಾಂತ್ಯಕ್ಕೆ ಪೂರ್ಣಗೊಳಿಸಿ. ಪೂರ್ಣಗೊಂಡ ಕಾಮಗಾರಿ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಕಡ್ಡಾಯವಾಗಿ ಅಳವಡಿಸಬೇಕು. ಕಾಮಗಾರಿಗಳ ಪ್ರಗತಿಯನ್ನು ಆನ್‌ಲೈನ್‌ನಲ್ಲಿ ದೊರೆಯುವ ಮಾಹಿತಿ ಪರಿಗಣಿಸಲಾಗುವುದು ಎಂದರು.

ವಸತಿ ಯೋಜನೆ ಹಾಗೂ ನಿವೇಶನ ಹಂಚಿಕೆಯಲ್ಲಿ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿನ ಸಮಿತಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ, ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಬೇಕು. ಈಗಾಗಲೇ ಗುರುತಿಸಿದ ನಿವೇಶನ ಹಾಗೂ ಮನೆ ನಿರ್ಮಾಣಕ್ಕೆ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಿ. ಬಾಕಿ ಉಳಿದ ಯೋಜನೆಗಳಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ. ನಿಮ್ಮ ವ್ಯಾಪ್ತಿಯಲ್ಲಿ ರಸ್ತೆಗಳ ಅಭಿವೃದ್ಧಿ, ಬೀದಿ ದೀಪಗಳ ಅಳವಡಿಕೆ, ಖಾಲಿ ನಿವೇಶನಗಳ ನಿರ್ವಹಣೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.

Advertisement

13 ಹಾಗೂ 14ನೇ ಹಣಕಾಸು ಯೋಜನೆಯಲ್ಲಿ ಮಂಜೂರಾದ ಎಲ್ಲ ಕಾಮಗಾರಿಗಳು, ಫಲಾನುಭವಿ ಆಧಾರಿತ ಯೋಜನೆಗಳು ಶೀಘ್ರ ಪೂರ್ಣಗೊಳ್ಳಬೇಕು. ಪ್ರಸಕ್ತ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುಮೋದನೆ ಪಡೆದುಕೊಳ್ಳಿ. ಎಲ್ಲ ಕ್ರಿಯಾ ಯೋಜನೆಗಳ ಟೆಂಡರ್‌ ಪ್ರಕ್ರಿಯೆ ಈ ತಿಂಗಳೊಳಗೆ ಪೂರ್ಣಗೊಳಿಸಿ, ಕಾಮಗಾರಿ ಆರಂಭಿಸಿ. ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಯ ಹಿತದೃಷ್ಟಿಯಿಂದ ಬರುವ ವರ್ಷದ ಗಣೇಶ ವಿಸರ್ಜನೆಗೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕೃತಕ ಹೊಂಡ ನಿರ್ಮಿಸಬೇಕು. ಈ ಕುರಿತು ನಿಮ್ಮ ವ್ಯಾಪ್ತಿಯಲ್ಲಿ ವಿಶಾಲ ರಸ್ತೆಗಳನ್ನು ಸಂಪರ್ಕಿಸುವ ವಿಶಾಲ ಸ್ಥಳ ಗುರುತಿಸಿ ಈ ಬಗ್ಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಎಂದರು.

ಘನ ತ್ಯಾಜ್ಯ ವಿಲೇವಾರಿಯ ವ್ಯವಸ್ಥಿತ ನಿರ್ವಹಣೆಗೆ ಸಂಬಂಧಿಸಿದಂತೆ ಜನತೆ ಹಸಿ ಕಸ ಹಾಗೂ ಒಣ ಕಸ ವಿಂಗಡನೆ ಬಗ್ಗೆ ಜಾಗೃತಿ ಮೂಡಿಸಿ. ತ್ಯಾಜ್ಯ ನಿರ್ವಹಣೆ ಬಗ್ಗೆಯೂ ನಿಯಮಾನುಸಾರ ಕ್ರಮ ವಹಿಸಬೇಕು. ಘಟಕದಲ್ಲಿ ವಿದ್ಯುತ್‌, ಕುಡಿಯುವ ನೀರು, ಅಗತ್ಯ ಸ್ಥಳಾವಕಾಶ ಸೇರಿದಂತೆ ಎಲ್ಲ ಅಗತ್ಯ ಮೂಲ ಸೌಕರ್ಯ ಇರಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಗಮನಕ್ಕೆ ಬಾರದೇ ಇರುವ ಅತಿ ಹೆಚ್ಚು ಕಸ ಸಂಗ್ರಹವಾಗುವ ಸ್ಥಳಗಳನ್ನು ಗುರುತಿಸಿ, ಅಲ್ಲಿಂದ ತ್ಯಾಜ್ಯ ಸಂಗ್ರಹಕ್ಕೆ ಯೋಜನೆ ರೂಪಿಸಬೇಕು. ಕಸ ವಿಲೇವಾರಿಯ ಎಲ್ಲ ವಾಹನಗಳು ಸುಸ್ಥಿತಿಯಲ್ಲಿದ್ದು, ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಆಗಾಗ ಪರಿಶೀಲಿಸಬೇಕು. ಮುಖ್ಯಾಧಿಕಾರಿಗಳು ಪ್ರತಿದಿನ ಶೇ. 100ರಷ್ಟು ಕಸ ಸಂಗ್ರಹವಾಗುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

ಪ್ರಸ್ತುತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಈ ವೇಳೆ ನಗರ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ ಪ್ರಮುಖವಾಗಿರುತ್ತದೆ. ಮಳೆ ನಿಂತ ನಂತರ ಅಧಿಕಾರಿಗಳು ನಿಮ್ಮ ವ್ಯಾಪ್ತಿಯ ಪ್ರದೇಶಗಳಲ್ಲಿ ಸಂಚರಿಸಬೇಕು. ಇದರಿಂದ ಯಾವುದಾದರೂ ಮನೆಗಳಿಗೆ ನೀರು ನುಗ್ಗಿದ ಬಗ್ಗೆ, ರಸ್ತೆಗಳು ಹಾಳಾದ ಬಗ್ಗೆ, ಮನೆಗಳು ಹಾನಿಯಾದ ಬಗ್ಗೆ, ಚರಂಡಿಗಳು ಕಟ್ಟಿಕೊಂಡು ಚರಂಡಿ ನೀರು ರಸ್ತೆಗೆ ಹರಿಯುವ ಬಗ್ಗೆ ಮಾಹಿತಿ ದೊರೆಯುತ್ತದೆ. ಇದರಿಂದ ಶೀಘ್ರ ಪರಿಹಾರ ಕ್ರಮಕೈಗೊಳ್ಳಲು ಅನುಕೂಲವಾಗುತ್ತದೆ. ಅದರಂತೆ ಮನೆ ಹಾನಿ ಬಗ್ಗೆ ಜಂಟಿ ಪರಿಶೀಲನೆ ನಡೆಸಿ ಹಾನಿ ಪ್ರಮಾಣವನ್ನು ವರದಿ ಮಾಡಬೇಕು. ಸಂತ್ರಸ್ತರಿಗೆ ತ್ವರಿತವಾಗಿ ಪರಿಹಾರ ಒದಗಿಸಲು ಆದ್ಯತೆ ನೀಡಬೇಕು. ಮುನ್ನೆಚ್ಚರಿಕೆ ಕ್ರಮವಾಗಿ ನಿಮ್ಮ ವ್ಯಾಪ್ತಿಯ ಎಲ್ಲ ಚರಂಡಿಗಳ ಸ್ವತ್ಛತೆಯನ್ನು ಕೈಗೊಂಡು ಸರಾಗವಾಗಿ ನೀರು ಹರಿದು ಹೋಗುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕಾವ್ಯಾರಾಣಿ, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ನಗರಸಭೆಗಳ ಪೌರಾಯುಕ್ತರು, ಇಂಜಿನಿಯರಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next