Advertisement

ಹಿಪ್ಪುನೇರಳೆ ಬೆಳೆಯಲ್ಲಿ ತಾಂತ್ರಿಕತೆ ಅಳವಡಿಸಿ

07:28 AM Feb 13, 2019 | |

ಬಂಗಾರಪೇಟೆ: ರೇಷ್ಮೆ ಬೆಳೆಗಾರರು ಹಿಪ್ಪುನೇರಳೆ ತೋಟಗಳಲ್ಲಿ ನೂತನ ತಾಂತ್ರಿಕತೆ ಅಳವಡಿಸಿಕೊಳ್ಳುವುದರಿಂದ ಅಧಿಕ ಇಳುವರಿಯ ಸೊಪ್ಪನ್ನು ಪಡೆಯಬಹುದೆಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ನಿವೃತ್ತ ಪ್ರೊಫೆಸರ್‌ ಡಾ.ವಿಜಯೇಂದ್ರ ತಿಳಿಸಿದರು. 

Advertisement

ತಾಲೂಕಿನ ಕುಪ್ಪನಹಳ್ಳಿ ರೇಷ್ಮೆ ಕೃಷಿ ಕೇಂದ್ರದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ರೇಷ್ಮೆ ಇಲಾಖೆ ಬಂಗಾರಪೇಟೆ ಮತ್ತು ಕೇಂದ್ರ ರೇಷ್ಮೆ ಮಂಡಳಿ ಸಹಯೋಗದಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ದ್ವಿತಳಿ ರೇಷ್ಮೆಯನ್ನು ಹೆಚ್ಚು ರೈತರು ಬೆಳೆಯುತ್ತಿದ್ದು ತಪ್ಪದೇ ಸರಿಯಾದ ಸೋಂಕು ನಿವಾರಕ ಬಳಸಿದರೆ ಗುಣಮಟ್ಟದ ರೇಷ್ಮೆ ಗೂಡುಗಳನ್ನು ಬೆಳೆದು ಅಧಿಕ ಲಾಭ ಗಳಿಸಬಹುದೆಂದು ತಿಳಿಸಿದರು. ರೇಷ್ಮೆ ಹುಳು ಸಾಕುವ ಮನೆಗಳನ್ನು ರೈತರು ತಾಂತ್ರಿಕವಾಗಿ ಹುಳು ಸಾಕಣೆಗೆ ಯೋಗ್ಯವಾಗುವಂತೆ ಇಲಾಖೆ ಮಾರ್ಗದರ್ಶನದಲ್ಲಿ ನಿರ್ಮಿಸಿಕೊಳ್ಳಬೇಕು. ಇದರಿಂದ ರೈತರಿಗೆ ಉಪಯುಕ್ತವಾಗುತ್ತದೆ ಎಂದರು.

ಕೃಷಿ ವಿಶ್ವದ್ಯಾಲಯದ ಪೊ›ಫೆಸರ್‌ ಡಾ.ನಾರಾಯಣರೆಡ್ಡಿ, ಇಸ್ರೇಲ್‌ ತಾಂತ್ರಿಕತೆ ಬಳಸಿಕೊಳ್ಳುವ ವಿಧಾನ, ಅದರಿಂದಾಗುವ ಉಪಯೋಗ, ಯಾವ ತಾಂತ್ರಿಕತೆಯನ್ನು ಯಾವ ಅವಧಿಯಲ್ಲಿ ಅಳವಡಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.

ಪ್ರತಿಯೊಬ್ಬ ರೈತರು ಮುಕ್ತವಾಗಿ ಇಂತಹ ಕಾರ್ಯಕ್ರಮಗಳಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು. ಆಗಲೇ ತಮ್ಮ ತೋಟಗಳನ್ನು ಅಭಿವೃದ್ಧಿ ಪಡಿಸಿಕೊಂಡು ಉತ್ತಮ ಪ್ರಗತಿ ಪರ ರೈತರಾಗಬಹುದು. ಕೋಲಾರದ ರೈತರು ಬೇರೆ ಭಾಗಗಳ ರೈತರು ಪ್ರಜ್ಞಾವಂತರಾಗಿದ್ದು ಇನ್ನು ಹೆಚ್ಚಿನ ತಾಂತ್ರಿಕತೆ ಅಳವಡಿಸಿಕೊಳ್ಳಬೇಕೆಂದರು.

Advertisement

ಜಿಲ್ಲಾ ರೇಷ್ಮೆ ಉಪನಿರ್ದೇಶಕ ಎಂ.ಕೆ.ಪ್ರಭಾಕರ್‌,   ನರೇಗಾ ಯೋಜನೆಯಲ್ಲಿ ತಮ್ಮೆಲ್ಲರ ಹಾಗೂ ಅಧಿಕಾರಿಗಳ ಪರಿಶ್ರಮದಿಂದ ಉತ್ತಮ ಸಾಧನೆ ಮಾಡಿದ್ದು ಅದನ್ನು ಮುಂದುವರಿಸಬೇಕು. ಈ ಯೋಜನೆ ಸೌಲಭ್ಯವನ್ನು ಪ್ರತಿಯೊಬ್ಬ ರೈತರು ಪಡೆದುಕೊಳ್ಳಬೇಕು ಎಂದು ರೈತರಲ್ಲಿ ಮನವಿ ಮಾಡಿದರು.
 
ರೇಷ್ಮೆ ಸಹಾಯಕ ನಿರ್ದೇಶಕ ಎಸ್‌.ಎನ್‌.ಶ್ರೀನಿವಾಸ್‌ ಮಾತನಾಡಿ, ನರೇಗಾ ಯೋಜನೆಯಡಿ ರೇಷ್ಮೆ ಬೆಳೆಗಾರರು ತಮ್ಮ ತೋಟಗಳ ಸೌಲಭ್ಯ ಪಡೆಯಬೇಕು. ಉತ್ತಮ ಗುಣಮಟ್ಟದ ಸೊಪ್ಪು ಉತ್ಪಾದನೆ ಮಾಡಿ ಗುಣ ಮಟ್ಟದ ಗೂಡು ಬೆಳೆದು ಅಧಿಕ ಲಾಭ ಗಳಿಸಬೇಕು ಎಂದರು.  

ರೇಷ್ಮೆ ಕೃಷಿ ವಿಜ್ಞಾನಿ ಡಾ.ಮೋರಿಸನ್‌ ಮಾತನಾಡಿ, ಗುಣಮಟ್ಟದ ದ್ವಿತಳಿ ರೇಷ್ಮೆ ಗೂಡು ಉತ್ಪಾದನೆ ಮಾಡಿದ್ದಲ್ಲಿ ಇಲ್ಲಿಯೇ ಎಆರ್‌ಎಂ ಘಟಕ ಸಿಬ್ಬಂದಿ ಆಗಮಿಸಿ ರೇಷ್ಮೆ ಗೂಡು ಖರೀದಿಸುತ್ತಾರೆ. ತಾಂತ್ರಿಕತೆ ಅಳವಡಿಸಿಕೊಂಡು ದ್ವಿತಳಿ ಬೆಳೆ ಬೆಳೆಯಬೇಕೆಂದರು.

ಕೋಲಾರದ ಪ್ರಗತಿಪರ ರೈತ ಕೃಷ್ಣಮೂರ್ತಿ, ಬಂಗಾರಪೇಟೆಯಲ್ಲಿ ರೇಷ್ಮೆ ಇಲಾಖೆ ಇಂತಹ ಕಾರ್ಯಕ್ರಮಗಳನ್ನು ಮಾಡುವ ಮೂಲಕ ರೈತರಿಗೆ ಉತ್ತಮವಾಗಿ ಸ್ಪಂದಿಸುತ್ತಿದೆ. ಅದೇ ರೀತಿ ಎಲ್ಲಾ ಕಡೆ ಅಧಿಕಾರಿಗಳು ರೈತರಿಗೆ ಸ್ಪಂದಿಸಿ ಕೆಲಸ ನಿರ್ವಹಿಸಲು ಸೂಚನೆ ನೀಡಲು ರೇಷ್ಮೆ ಉಪನಿರ್ದೇಶಕರಲ್ಲಿ ಮನವಿ ಮಾಡಿದರು. 

ರೇಷ್ಮೆ ಕೃಷಿಯಲ್ಲಿ ಅಧಿಕ ಇಳುವರಿ ಪಡೆದ ಪ್ರಗತಿಪರ ರೈತರಾದ ಗುಟ್ಟಹಳ್ಳಿ ಗೋವಿಂದಪ್ಪ, ಉರಿಗಾಂ ಚಂದ್ರು, ಕಾಲವಲಹಳ್ಳಿ ಮಾರ್ಕೊಂಡರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ಕೃಷಿ ವಿಜ್ಞಾನ ಕಾಲೇಜಿನ ವೆಂಕಟೇಶ್‌, ಸಂತೋಷ್‌, ರೇಷ್ಮೆ ಇಲಾಖೆ ರೇಷ್ಮೆ ಅಧಿಕಾರಿಗಳಾದ ಜಿ.ಶ್ರೀನಿವಾಸ್‌, ಜಯಶ್ರೀನಿವಾಸ್‌, ರಿಯಾಜ್‌ ಅಹಮದ್‌, ರಾಮಚಂದ್ರರಾವ್‌, ಬಂಗಾರಪೇಟೆ ರೇಷ್ಮೆ ಬೆಳೆಗಾರರ ಸಂಘದ ಪದಾಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next